ಬುಧವಾರ, ನವೆಂಬರ್ 20, 2019
21 °C
ಮಾರುಕಟ್ಟೆ: ತರಕಾರಿ ದರದಲ್ಲಿ ಅಲ್ಪ ವ್ಯತ್ಯಯ- -, ಸೇಬಿನ ಬೆಲೆಯಲ್ಲಿ ಸ್ವಲ್ಪ ಇಳಿಕೆ

ಏರಿದ ಬೀನ್ಸ್, ಕುಸಿದ ಟೊಮೆಟೊ

Published:
Updated:
Prajavani

ಮಂಗಳೂರು: ಶ್ರಾವಣ, ಹಬ್ಬಗಳು, ಮಳೆಯ ಪರಿಣಾಮ ಕಳೆದೆರಡು ವಾರಗಳಲ್ಲಿ ಜಿಗಿತ ಕಂಡಿದ್ದ ಬಹುತೇಕ ತರಕಾರಿ ದರಗಳು ಈ ವಾರ ಸ್ಥಿರವಾಗಿದ್ದರೆ, ಕೆಲವು ಕುಸಿತ ಕಂಡಿವೆ. ಕೋಳಿ ಮಾಂಸದ ಬೆಲೆಯಲ್ಲಿಯೂ ಇಳಿಕೆಯಾಗಿದೆ.

ಈ ವಾರ ಮಾರುಕಟ್ಟೆಯಲ್ಲಿ ತರಕಾರಿ ದರವು (₹) ಹೀಗಿತ್ತು.

ಆಲೂಗಡ್ಡೆ –28, ಈರುಳ್ಳಿ–38, ಬೆಂಡೆಕಾಯಿ–50, ಸೌತೆಕಾಯಿ–35, ಊರಸೌತೆಕಾಯಿ–40, ನವಿಲುಕೋಲು–25, ಎಲೆಕೋಸು–35, ಬದನೆ ಕಾಯಿ–60, ಸಿಹಿಗೆಣಸು–50, ಗೆಣಸು–25, ಬೀಟ್ರೋಟ್–60, ದಪ್ಪ ಮೆಣಸಿನಕಾಯಿ–60, ಅಲಸಂದೆ–70, ಹಿರೇಕಾಯಿ–35, ಸೋರೆಕಾಯಿ–20, ತೊಂಡೆಕಾಯಿ–47, ಬದನೆ–60, ಕ್ಯಾರೆಟ್–70, ಗೌರಿಕಾಯಿ–65, ಚವಳಿ ಕಾಯಿ–60, ಕಾಲಿಫ್ಲವರ್‌ (1ಕ್ಕೆ)–30 ಇತ್ತು.

ಈ ಪೈಕಿ ಬೀನ್ಸ್ ದರವು ನೂರರ ಗಡಿ ದಾಟಿದ್ದರೆ, ವಾರದ ಹಿಂದೆ ₹ 30ರ ಆಸುಪಾಸಿನಲ್ಲಿದ್ದ ಟೊಮೆಟೊ ದರವು ಈ ವಾರ ₹ 20ಕ್ಕೆ ಕುಸಿದಿದೆ.

‘ಈ ಹಿಂದೆ ಭಾರಿ ಮಳೆಯ ಕಾರಣ ತರಕಾರಿ ದರಗಳು ಏಕಾಏಕಿ ಏರಿಕೆಯಾಗಿದ್ದವು. ಆದರೆ, ಬಳಿಕ ಸ್ಥಿರತೆಗೆ ಬಂತು. ಕಳೆದ ವಾರ ಹಬ್ಬಗಳಿದ್ದ ಕಾರಣ ಅಷ್ಟೇ ಇತ್ತು. ಈಗ ಮತ್ತೆ ಇಳಿಕೆಯಾಗುವ ಸಾಧ್ಯತೆಯೇ ಹೆಚ್ಚು’ ಎಂದು ವ್ಯಾಪಾರಿ ರವಿ ತಿಳಿಸಿದರು. 

‘ಭಾರಿ ಮಳೆಯ ಕಾರಣ ಈರುಳ್ಳಿ, ಬೀನ್ಸ್, ಅಲಸಂದೆ ಮತ್ತಿತರ ತರಕಾರಿಗಳ ಬೆಲೆ ಕಡಿಮೆಯಾಗಲಿಲ್ಲ. ಆದರೆ, ಟೊಮೆಟೊ ದರ ಇಳಿಕೆಯಾಗುತ್ತಿದೆ’ ಎಂದರು.

ಆದರೆ, ಹಣ್ಣುಗಳ ಪೈಕಿ ಹೊರಗಿನಿಂದ ಆವಕವಾಗುವ ಸೇಬು, ಪಿಯರ್ಸ್, ಚಿಕ್ಕು, ಇತ್ಯಾದಿಗಳ ಬೆಲೆ ಕೊಂಚ ಕಡಿಮೆಯಾದರೆ, ಸ್ಥಳೀಯ ಬಾಳೆಹಣ್ಣು, ಪಪ್ಪಾಯ, ಪೇರಳೆ ಮತ್ತಿತರ ದರಗಳು ಏರಿಕೆಯಾಗಿವೆ. ಕದೋಳಿ (ಏಲಕ್ಕಿ) ಬಾಳೆ ಹಣ್ಣಿನ ದರವು ಇನ್ನೂ ₹100 ಆಸುಪಾಸಿನಲ್ಲಿದೆ.

₹6ಕ್ಕೆ ಸಿಗುತ್ತಿದ್ದ ಕೊತ್ತಂಬರಿ ಸೊಪ್ಪಿನ ಬೆಲೆಯು ಹಬ್ಬದ ಕಾರಣ ₹10 ಇತ್ತು. ಹಾಗೆಯೇ ಕರಿಬೇವು ₹8, ಮೆಂತೆ ಸೊಪ್ಪು ₹12, ಪಾಲಕ್‌ ಸೊಪ್ಪು ₹10 ಇತ್ತು. ಸೊಪ್ಪುಗಳ ಬೆಲೆಯಲ್ಲಿ ಸುಮಾರು ನಾಲ್ಕರಿಂದ ಐದು ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಮಳೆಯ ಕಾರಣ ಸೊಪ್ಪಿನ ಕೊರತೆ ಇದ್ದು, ದರಗಳು ಏರಿವೆ ಎನ್ನುತ್ತಾರೆ ವ್ಯಾಪಾರಿ ರಫೀಕ್.  

ಲಗ್ಗೆ ಇಟ್ಟಿದೆ ಹೂವು:

ಹಬ್ಬದ ಕಾರಣ ಮಾರುಕಟ್ಟೆಗೆ ಮಲ್ಲಿಗೆಯ ಜೊತೆ ಚೆಂಡು ಹೂ, ಸೇವಂತಿಗೆ, ಗಲಾಟೆ, ಸುಗಂಧರಾಜ ಇತ್ಯಾದಿಗಳು ಹೆಚ್ಚಾಗಿ ಬರುತ್ತಿವೆ. ಇವುಗಳಿಗೆ ಬೇಡಿಕೆಯೂ ಹೆಚ್ಚಿದೆ. ಈಚೆಗೆ ಕಬ್ಬು, ಬಾಳೆ ಇತ್ಯಾದಿಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಕೋಳಿ ದರ ಕುಸಿತ

ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಇಳಿಕೆಯಾಗಿದೆ. ಕಳೆದ ತಿಂಗಳು ಶ್ರಾವಣ ಇತ್ತು. ಆ ಬಳಿಕ ಮೀನಿನ ಆವಕ ಹೆಚ್ಚಾಯಿತು. ಈಗ ಮಳೆ ಹಾಗೂ ಜನರಲ್ಲಿ ಸಾಂಕ್ರಾಮಿಕ ರೋಗ ಬಾಧೆಯ ಕಾರಣ ಕೋಳಿಗೆ ಬೇಡಿಕೆ ಕಡಿಮೆಯಾಗಿದೆ. ಬಾಯ್ಲರ್ ಜೀವದ ಕೋಳಿಗೆ ಎರಡು ವಾರದ ಹಿಂದೆ ₹110 ಇತ್ತು. ಈ ವಾರ ₹ 90ಕ್ಕೆ ಕುಸಿದಿದೆ. ಉಳಿದಂತೆ ಮಟನ್ ಇತ್ಯಾದಿ ಮಾಂಸದ ಬೆಲೆಗಳು ಮಾತ್ರ ಸ್ಥಿರವಾಗಿವೆ. ಮೀನು ದರ ಸ್ವಲ್ಪ ಕಡಿಮೆಯಾಗುತ್ತಿದೆ.

ಪ್ರತಿಕ್ರಿಯಿಸಿ (+)