ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಸಮವಾಗಲಿದೆ ವೆಂಕಟಪ್ಪ ಗ್ಯಾಲರಿ

Last Updated 15 ನವೆಂಬರ್ 2018, 19:13 IST
ಅಕ್ಷರ ಗಾತ್ರ

ಬೆಂಗಳೂರು: ಕುಸಿಯುವ ಅಪಾಯದಲ್ಲಿರುವ ವೆಂಕಟಪ್ಪ ಆರ್ಟ್‌ ಗ್ಯಾಲರಿಯನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಲೋಕೋಪಯೋಗಿ ಇಲಾಖೆಯು 43 ವರ್ಷಗಳ ಹಿಂದೆ ನಿರ್ಮಿಸಿರುವ ಆರ್ಟ್‌ ಗ್ಯಾಲರಿ ಕಟ್ಟಡವನ್ನು ಗುರುವಾರ ‍ಪರಿಶೀಲಿಸಿದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌, ಅಡಿಪಾಯ ದುರ್ಬಲವಾಗಿದ್ದು ಗ್ಯಾಲರಿ ಸ್ಥಳಾಂತರಿಸದೆ ಬೇರೆ ದಾರಿಯೇ ಇಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕಟ್ಟಡದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು ಕುಸಿಯುವ ಅಪಾಯವಿದೆ. ಅದನ್ನು ಸಂಪೂರ್ಣ ನೆಲಸಮ ಮಾಡಿ ಹೊಸದಾಗಿ ಕಟ್ಟಬೇಕಿದೆ. ಹೊಸ ಕಟ್ಟಡವನ್ನು ಪಾರಂಪರಿಕ ಮ್ಯೂಸಿಯಂ ಮಾದರಿಯಲ್ಲೇ ಪುನರ್‌ ನಿರ್ಮಾಣ ಮಾಡಲಾಗುವುದು ಎಂದರು.

ವೆಂಕಟಪ್ಪ ಗ್ಯಾಲರಿಯು 140 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸರ್ಕಾರಿ ಮ್ಯೂಸಿಯಂ ಕಟ್ಟಡದ ಎದುರಿನಲ್ಲೇ ಇದೆ. ಈ ಕಟ್ಟಡ ಇನ್ನೂ ಗಟ್ಟಿಮುಟ್ಟಾಗಿದೆ. ಮ್ಯೂಸಿಯಂ ಮತ್ತು ಪ್ರಾಚ್ಯವಸ್ತು ಇಲಾಖೆಯು ಹೊಸ ಕಟ್ಟಡದ ನಿರ್ಮಾಣಕ್ಕೆ ಮೂರ್ನಾಲ್ಕು ವಿನ್ಯಾಸಗಳನ್ನು ನೀಡುವಂತೆ ಲೋಕೋಪಯೋಗಿ ಇಲಾಖೆಯನ್ನು ಕೇಳಿದೆ. ಪಾರಂಪರಿಕ ಕಟ್ಟಡಗಳ ಮಾದರಿಯಲ್ಲೇ ವಿನ್ಯಾಸ ಇರಬೇಕು ಎಂದು ಪತ್ರ ಬರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಆರ್ಟ್ ಗ್ಯಾಲರಿ ಕಟ್ಟಡದ ಪಕ್ಕದಲ್ಲಿಯೇ ಬಹುಮಹಡಿ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಆದರೆ,ಕಬ್ಬನ್‌ ಉದ್ಯಾನದಲ್ಲಿ ನೀರಿನ ಕೊಳಗಳು ಹಾಗೂ ಕಾರಂಜಿ ಬರಲು ಕಾರಣರಾದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಎಫ್‌ ಸಲ್ಡಾನ ಅವರ ಮಧ್ಯಪ್ರವೇಶದಿಂದ ಸರ್ಕಾರ ಆ ಯೋಜನೆಯನ್ನು ಕೈಬಿಟ್ಟಿತು. ಖುದ್ದು ಸಲ್ಡಾನ ಅವರೇ ಇದನ್ನು ನೆನಪಿಸಿಕೊಂಡಿದ್ದಾರೆ.

ಗ್ಯಾಲರಿ ನೆಲಸಮ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ನ್ಯಾಯಮೂರ್ತಿ, ‘ಹೊಸದಾಗಿ ಗ್ಯಾಲರಿ ನಿರ್ಮಿಸುವ ಬದಲು ರಿಪೇರಿ ಮಾಡುವುದು ಸೂಕ್ತ. ಕಟ್ಟಡದೊಳಗೆ ನುಗ್ಗಿರುವ ನೀರಿನಿಂದ ಅಡಿಪಾಯ ದುರ್ಬಲಗೊಂಡಿದ್ದರೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ಮಾಡಿದ್ದಾರೆ.

ಈ ಗ್ಯಾಲರಿಯನ್ನು ಖಾಸಗಿಯವರಿಗೆ ಒಪ್ಪಿಸಲು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ ಚಿಂತಿಸಿತ್ತು. ಆದರೆ, ನಾಗರಿಕರ ಪ್ರತಿಭಟನೆಯಿಂದಾಗಿ ಆಲೋಚನೆಯಿಂದ ಹಿಂದೆ ಸರಿದಿತ್ತು.

ಯಾರು ಈ ವೆಂಕಟಪ್ಪ?

ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಕಲಾವಿದರಾದ ವೆಂಕಟಪ್ಪ 1886ರಲ್ಲಿ ಮೈಸೂರಿನಲ್ಲಿ ಜನಿಸಿದರು. 1902ರಿಂದ 1906ರವರೆಗೆ ಜಯಚಾಮರಾಜೇಂದ್ರ ತಂತ್ರಜ್ಞಾನ ಸಂಸ್ಥೆಯಲ್ಲಿ ಲಲಿತಕಲೆ ಅಧ್ಯಯನ ಮಾಡಿದರು. ಪರ್ಸಿ ಬ್ರೌನ್‌ ಹಾಗೂ ಅವನೀಂದ್ರನಾಥ್‌ ಠ್ಯಾಗೋರ್‌ ಅವರ ಮಾರ್ಗದರ್ಶನದಲ್ಲಿ 1909ರಿಂದ 1916ರವರೆಗೆ ಕೋಲ್ಕತ್ತದಲ್ಲಿ ಕರಕುಶಲ ಕಲೆ ಹಾಗೂ ಲಲಿತ ಕಲೆಯಲ್ಲಿ ಉನ್ನತ ಶಿಕ್ಷಣ ಪಡೆದರು. ಮೈಸೂರು ಮಹಾರಾಜರ ಆಸ್ಥಾನದ ಕಲಾವಿದರಾಗಿದ್ದರು. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಸಿ ಕಲಾಕೃತಿಗಳನ್ನು ತಯಾರಿಸುವುದರಲ್ಲಿ ವೆಂಕಟಪ್ಪ ಪಳಗಿದ್ದರು. ಮೈಸೂರು ಅಂಬಾವಿಲಾಸ ಅರಮನೆಯಲ್ಲಿ ದಂತ ಬಳಸಿ ರೂಪಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಲಾಕೃತಿ, ಊಟಿ ಮತ್ತು ಕೊಡೈಕೆನಾಲ್‌ನಲ್ಲಿ ಇಟ್ಟಿರುವ ಕಲಾಕೃತಿಗಳು ಇವರ ಶ್ರೇಷ್ಠತೆಗೆ ಸಾಕ್ಷಿಯಾಗಿವೆ.

**

* ವೆಂಕಟಪ್ಪ ಅವರ ಕಲಾಕೃತಿಗಳನ್ನು ಸಂಗ್ರಹಿಸಿ ಸರ್ಕಾರ ಆರ್ಟ್‌ ಗ್ಯಾಲರಿ ಸ್ಥಾಪಿಸಿತು

* ಕಬ್ಬನ್‌ ಉದ್ಯಾನದೊಳಗೆ 3.11 ಎಕರೆ ಜಮೀನಿನಲ್ಲಿ ಆರ್ಟ್‌ ಗ್ಯಾಲರಿ ನಿರ್ಮಾಣಗೊಂಡಿದೆ

* ಅಂದಿನ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ 1967ರಲ್ಲಿ ಆರ್ಟ್‌ ಗ್ಯಾಲರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು

* ಕೇಂದ್ರದ ಮಾಜಿ ಶಿಕ್ಷಣ ಸಚಿವ ನೂರುಲ್ ಹುಸೇನ್‌ 1975ರಲ್ಲಿ ಗ್ಯಾಲರಿ ಉದ್ಘಾಟಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT