ವಿಧಾನಪರಿಷತ್‌ ಖಾಲಿ ಸ್ಥಾನ: ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಪೈಪೋಟಿ

7

ವಿಧಾನಪರಿಷತ್‌ ಖಾಲಿ ಸ್ಥಾನ: ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಪೈಪೋಟಿ

Published:
Updated:

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಾನಗಳನ್ನು ಹಂಚಿಕೊಳ್ಳಲು ಜೆಡಿಎಸ್‌– ಕಾಂಗ್ರೆಸ್ ಮೈತ್ರಿ ಪಕ್ಷಗಳು ನಿರ್ಧರಿಸಿದ್ದರೂ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದು ಉಭಯ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಅಲ್ಲದೆ, ವಿಧಾನಪರಿಷತ್‌ನಲ್ಲಿ ಖಾಲಿ ಇರುವ ಮೂರು ನಾಮನಿರ್ದೇಶನ ಸ್ಥಾನಗಳನ್ನು ಉಭಯ ಪಕ್ಷಗಳು ಹಂಚಿಕೊಳ್ಳಲಿವೆ. ಆದರೆ, ಆ ಸ್ಥಾನಗಳಿಗೂ ಪೈಪೋಟಿ ಖಚಿತವಾಗಿದೆ.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾದ ಕೆ.ಎಸ್‌. ಈಶ್ವರಪ್ಪ, ಜಿ. ಪರಮೇಶ್ವರ, ವಿ. ಸೋಮಣ್ಣ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಈಶ್ವರಪ್ಪ ಮತ್ತು ಪರಮೇಶ್ವರ ಅವಧಿ 2020ರ ಜೂನ್‌ 30ಕ್ಕೆ ಕೊನೆಯಾಗಲಿದೆ. ಸೋಮಣ್ಣ ಅವಧಿ 2022 ಜೂನ್‌ 14ರವರೆಗೆ ಇದೆ.

ಹೊಸತಾಗಿ ಆಯ್ಕೆಯಾಗುವ ಸದಸ್ಯರ ಪೈಕಿ ಸೋಮಣ್ಣ ಅವರ ಸ್ಥಾನಕ್ಕೆ ಆಯ್ಕೆಯಾಗುವವರಿಗೆ ಹೆಚ್ಚಿನ ಅವಧಿ ಅಧಿಕಾರ ಸಿಗಲಿದೆ. ಈ ಸ್ಥಾನವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್‌ ಬೇಡಿಕೆ ಮುಂದಿಟ್ಟಿದೆ. ಉಳಿದ ಎರಡು ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲು ಜೆಡಿಎಸ್‌ ಸಹಮತ ವ್ಯಕ್ತಪಡಿಸಿದೆ ಎಂದು ಗೊತ್ತಾಗಿದೆ.

ವಿಧಾನಪರಿಷತ್‌ನ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಿಂದ ನಿವೇದಿತ್‌ ಆಳ್ವ, ಎಂ.ಸಿ. ವೇಣುಗೋಪಾಲ್‌, ಪ್ರೊ. ಕೆ.ಇ. ರಾಧಾಕೃಷ್ಣ, ವೀರಣ್ಣ ಮತ್ತಿಕಟ್ಟಿ, ನಾಗರಾಜ ಯಾದವ ಹೆಸರು ಮುಂಚೂಣಿಯಲ್ಲಿದೆ. ಆದರೆ, ಜೆಡಿಎಸ್‌ನಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮೂವರನ್ನು ರಾಜ್ಯ ಸರ್ಕಾರ ವಿಧಾನಪರಿಷತ್‌ಗೆ ಆಯ್ಕೆ ಮಾಡಲಿದೆ. ಈ ಪೈಕಿ, ಎರಡು ಸ್ಥಾನಗಳನ್ನು ತಮಗೆ ನೀಡುವಂತೆ ಜೆಡಿಎಸ್‌ ಬೇಡಿಕೆ ಮುಂದಿಟ್ಟಿದೆ. ಆದರೆ, ಈ ಬಗ್ಗೆಯೂ ಅಂತಿಮ ತೀರ್ಮಾನ ಆಗಿಲ್ಲ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.

ಹೆಗ್ಗಡೆ ದೇವನಕೋಟೆಯ ಡಾ. ಸುದರ್ಶನ ಅವರನ್ನು ನಾಮನಿರ್ದೇಶನ ಮಾಡಲು ಜೆಡಿಎಸ್ ಒಲವು ತೋರಿದೆ. ಕಾಂಗ್ರೆಸ್‌ನಲ್ಲಿ ವಿ.ಆರ್‌. ಸುದರ್ಶನ್‌, ರಾಣಿ ಸತೀಶ್‌, ಬರಗೂರು ರಾಮಚಂದ್ರಪ್ಪ, ನಾಗರಾಜ ಯಾದವ ಅವರ ಹೆಸರು ನಾಮನಿರ್ದೇಶನಕ್ಕೆ ಕೇಳಿಬರುತ್ತಿದೆ.

ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಬಿಜೆಪಿ ನಿರ್ಧರಿಸಿಲ್ಲ. ಇದೇ 19ರಂದು ಅಂತಿಮ ತೀರ್ಮಾನವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !