ವಿಧಾನಸೌಧದ ಹೆಸರಿನಲ್ಲಿ ₹8.50 ಲಕ್ಷ ವಂಚನೆ

ಬುಧವಾರ, ಮಾರ್ಚ್ 20, 2019
31 °C
ಫೋಟೊ –ವಿಡಿಯೊ ಟೆಂಡರ್‌ ಕೊಡಿಸುವುದಾಗಿ ನಂಬಿಸಿ ಕೃತ್ಯ

ವಿಧಾನಸೌಧದ ಹೆಸರಿನಲ್ಲಿ ₹8.50 ಲಕ್ಷ ವಂಚನೆ

Published:
Updated:
Prajavani

ಬೆಂಗಳೂರು: ವಿಧಾನಸೌಧದಲ್ಲಿ ಫೋಟೊ ಹಾಗೂ ವಿಡಿಯೊ ತೆಗೆಯಲು ಟೆಂಡರ್‌ ಕೊಡಿಸುವುದಾಗಿ ಹೇಳಿ ಉದ್ಯಮಿ ಎಂ.ಎನ್.ಭಾಸ್ಕರ್ ಎಂಬುವರಿಂದ ₹8.50 ಲಕ್ಷ ಪಡೆದುಕೊಂಡು ವಂಚಿಸಲಾಗಿದೆ.

ಆ ಸಂಬಂಧ ದೂರು ನೀಡಿರುವ ಭಾಸ್ಕರ್, ‘ನಿರ್ದೇಶಕ ಅನುರಾಗ್, ಅವರ ತಂದೆ ರಾಜೇಶ್, ತಾಯಿ ಸತ್ಯಭಾಮ ಹಾಗೂ ಸಹೋದರ ಚಂದನಾ ಎಂಬುವರು ನನ್ನಿಂದ ಹಣ ಪಡೆದು ವಂಚಿಸಿದ್ದಾರೆ’ ಎಂದಿದ್ದಾರೆ. ಅದರನ್ವಯ ನಾಲ್ವರ ವಿರುದ್ಧವೂ ಬನಶಂಕರಿ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ರಾಜ್ಯದ ಕೆಲ ಸಚಿವರ ಆಪ್ತರೆಂದು ಹೇಳಿಕೊಂಡ ಆರೋಪಿಗಳು, ಭಾಸ್ಕರ್ ಅವರನ್ನು ವಂಚಿಸಿದ್ದಾರೆ. ಪ್ರಕರಣ ಸಂಬಂಧ ನೋಟಿಸ್‌ ನೀಡಲಾಗಿದೆ. ನಾಲ್ವರನ್ನೂ ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

‘6 ದಿ ಕೂಟ’ ಸಿನಿಮಾದಿಂದ ಪರಿಚಯ: ‘ಭಾಸ್ಕರ್ ಅವರು ಜಯನಗರದ 7ನೇ ಹಂತದ ಕೆ.ಆರ್.ರಸ್ತೆಯಲ್ಲಿ ‘ಗಗನ್’ ಹೆಸರಿನಲ್ಲಿ ಡಿಜಿಟಲ್ ಕಲರ್ ಲ್ಯಾಬ್ ಮತ್ತು ಸ್ಟುಡಿಯೊ ನಡೆಸುತ್ತಿದ್ದಾರೆ. ಆ ಸ್ಟುಡಿಯೊಗೆ ಬಂದಿದ್ದ ಆರೋಪಿ ಅನುರಾಗ್, ‘ನಾನು ‘6 ದಿ ಕೂಟ’ ಸಿನಿಮಾ ಮಾಡುತ್ತಿದ್ದೇನೆ. ಅದರ ಫೋಟೊ ಹಾಗೂ ವಿಡಿಯೊವನ್ನು ನೀವೇ ತೆಗೆದುಕೊಡಬೇಕು’ ಎಂದು ಕೋರಿದ್ದರು. ಅದಕ್ಕೆ ಭಾಸ್ಕರ್ ಒಪ್ಪಿಕೊಂಡಿದ್ದರು’ ಎಂದು ತಿಳಿಸಿದರು.

‘ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಡೆದಿದ್ದ ಸಿನಿಮಾದ ಮುಹೂರ್ತದ ಫೋಟೊ ಮತ್ತು ವಿಡಿಯೊಗಳನ್ನು ದೂರುದಾರರು ತೆಗೆದುಕೊಟ್ಟಿದ್ದರು. ನಂತರ ಅನುರಾಗ್ ಹಾಗೂ ಅವರ ತಂದೆ ರಾಜೇಶ್, ‘ರಾಜ್ಯದ ಎಲ್ಲ ಸಚಿವರು ನಮಗೆ ಪರಿಚಯ. ವಿಧಾನಸೌಧದಲ್ಲಿ ಫೋಟೊ ಹಾಗೂ ವಿಡಿಯೊ ತೆಗೆಯಲು ಟೆಂಡರ್ ಕೊಡುತ್ತಾರೆ. ಅದನ್ನು ನಿಮಗೆ ಕೊಡಿಸುತ್ತೇವೆ’ ಎಂದು ಹೇಳಿದ್ದರು.’

‘ರಾಜೇಶ್ ಅವರ ಪತ್ನಿ ಸತ್ಯಭಾಮ ಮತ್ತು ಮಗಳು ಚಂದನಾ, ‘ಈಗಾಗಲೇ ಹಲವರಿಗೆ ಟೆಂಡರ್ ಕೊಡಿಸಲಾಗಿದೆ. ನಿಮಗೂ ಟೆಂಡರ್ ಕೊಡಿಸಲಾಗುವುದು. ಟೆಂಡರ್ ಪಡೆಯಬೇಕಾದರೆ ನೋಂದಣಿ ಹಾಗೂ ಒಪ್ಪಂದ ಮಾಡಿಕೊಳ್ಳಬೇಕು. ಅದಕ್ಕೆ ₹8.12 ಲಕ್ಷ ಖರ್ಚಾಗುತ್ತದೆ’ ಎಂದಿದ್ದರು’.

‘ಆರೋಪಿಗಳ ಮಾತು ನಂಬಿದ್ದ ಭಾಸ್ಕರ್, ಹಣ ಕೊಟ್ಟಿದ್ದರು. ಆದರೆ, ಆರೋಪಿಗಳು ಇದುವರೆಗೂ ಯಾವುದೇ ಟೆಂಡರ್ ಕೊಡಿಸಿಲ್ಲ. ಹಣವನ್ನೂ ವಾಪಸ್ ಕೊಟ್ಟಿಲ್ಲ. ಆ ಬಗ್ಗೆ ದೂರುದಾರರು ವಿಚಾರಿಸಿದರೆ, ಆರೋಪಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಭಾಸ್ಕರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !