ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಕಡೆಗಳಲ್ಲಿ ವಿಜಯ ಸಂಕಲ್ಪ ಯಾತ್ರೆ

ಎಲ್‌ಇಡಿ ವಾಹನಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳು
Last Updated 10 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ 54 ಎಲ್‌ಇಡಿ ವಾಹನಗಳಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಶಾಸಕರಾದ ಆರ್‌. ಅಶೋಕ್‌ ಹಾಗೂ ಸಿ.ಟಿ.ರವಿ ಬುಧವಾರ ಚಾಲನೆ ನೀಡಿದರು.

‘ಕೃಷಿ ಸಮ್ಮಾನ್‌ ಯೋಜನೆಯಡಿ ರೈತರಿಗೆ ವರ್ಷಕ್ಕೆ ₹6 ಸಾವಿರ, ಎಲ್ಲರಿಗೂ ಅಡುಗೆ ಅನಿಲ ಸಂಪರ್ಕ, ಎಲ್ಲ ಹಳ್ಳಿಗಳಿಗೂ ವಿದ್ಯುತ್‌ ಸೇರಿದಂತೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಎಲ್‌ಇಡಿ ವಾಹನಗಳು ಜನರಿಗೆ ತಲುಪಿಸಲಿವೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ದೃಶ್ಯಾವಳಿಗಳು ಇರಲಿವೆ’ ಎಂದು ಅಶೋಕ್‌ ತಿಳಿಸಿದರು.

‘ಬೆಂಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಬುಧವಾರ ಚಾಲನೆ ನೀಡಲಾಗಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಯ 21 ಕಡೆಗಳಲ್ಲಿ ವಿಜಯಸಂಕಲ್ಪ ಯಾತ್ರೆಗಳು ನಡೆಯಲಿವೆ. ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರನ್ನು ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ’ ಎಂದು ಅವರು ಹೇಳಿದರು.

‘ನಾನು ಬೆಂಗಳೂರಿನಲ್ಲೇ ಹುಟ್ಟಿಬೆಳೆದವನು. ಪದ್ಮನಾಭನಗರದ ಭಾಗವಾದ ಉತ್ತರಹಳ್ಳಿಯಲ್ಲಿ ನಿಂತು ಗೆದ್ದವನು. ಜೆಡಿಎಸ್ ಕೋಟೆಯಲ್ಲಿ ಬಿಜೆಪಿ ಸಾಮ್ರಾಜ್ಯ ಸ್ಥಾಪಿಸುತ್ತೇವೆ’ ಎಂದರು.

‘ನನಗೆ ಎಚ್‌.ಡಿ. ಕುಮಾರಸ್ವಾಮಿ ಪಾಠ ಹೇಳಬೇಕಿಲ್ಲ. ನಾನು ಅವರಂತೆ ಪದೇ ಪದೇ ಕ್ಷೇತ್ರ ಬದಲಾಯಿಸುವ ಚಾಳಿ ಹೊಂದಿಲ್ಲ. ಮೇಲಾಗಿ ಬಿಬಿಎಂಪಿಯಲ್ಲಿ ಬಿಜೆಪಿ 101 ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್ ಗೆಲುವುದು ಸಾಧಿಸಿರುವುದು 14 ಸ್ಥಾನಗಳನ್ನು ಮಾತ್ರ. ಪಾಲಿಕೆಯಲ್ಲಿ ಅವ್ಯವಹಾರ ನಡೆಸಿದವರು ಯಾರು ಎಂಬುದನ್ನು ಅವರು ಸಾಬೀತುಪಡಿಸಲಿ’ ಎಂದು ಅವರು ಸವಾಲು ಎಸೆದರು.

ಸಿ.ಟಿ.ರವಿ ಮಾತನಾಡಿ, ‘ರಫೇಲ್‌ ವಿಷಯದಲ್ಲಿ ಕೇಂದ್ರ ದೋಷಮುಕ್ತಗೊಂಡಿದ್ದು, ರಾಹುಲ್‌ ಗಾಂಧಿ ಫೇಲ್‌ ಆಗಿದ್ದಾರೆ. ಈ ಚುನಾವಣೆಯಲ್ಲೂ ಅವರು ಫೇಲ್‌ ಆಗಲಿದ್ದಾರೆ’ ಎಂದರು.

ಬೆಂಗಳೂರಿಗೆ ಮೋದಿ ಕೊಡುಗೆ ಏನು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ. ಮೇಕೆದಾಟು ಯೋಜನೆಗೆ ಡಿಪಿಆರ್‌ ನೀಡಿರುವುದು, ಮೆಟ್ರೊ ಯೋಜನೆಗೆ ₹6 ಸಾವಿರ ಕೋಟಿ, ಮೈಸೂರು–ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ₹3,500 ಕೋಟಿ, ನಿರ್ಭಯಾ ಯೋಜನೆಯಡಿ ₹600 ಕೋಟಿ ಸೇರಿದಂತೆ ಸಾವಿರಾರು ಕೋಟಿ ಅನುದಾನ ನೀಡಿರುವುದನ್ನು ದೇವೇಗೌಡರು ಮರೆತಿದ್ದಾರೆ. ಇದು ಅವರ ಜಾಣ ಮರೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT