ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಜೀವನವೇ ಒಂದು ಸಂದೇಶ

‘ವಿವೇಕಾನಂದರ ಭಾರತ: ಯುವ ಸಬಲೀಕರಣ’ ವಿಚಾರ ಸಂಕಿರಣದಲ್ಲಿ ಮದನ್ ಗೋಪಾಲ್ ಅಭಿಪ್ರಾಯ
Last Updated 13 ಜನವರಿ 2019, 10:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸತ್ಯವನ್ನು ಪ್ರತಿನಿಧಿಸಿದ ಸ್ವಾಮಿ ವಿವೇಕಾನಂದರು ರಾಷ್ಟ್ರ, ವಿಶ್ವಕ್ಕೆ ಶಾಶ್ವತ ಹಾಗೂ ಮಹಾನ್‌ ವಿಷಯ ಎಂದು ಗದಗ ಮತ್ತು ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ಸ್ವಾಮಿ ವಿವೇಕಾನಂದ ಅವರ ಷಿಕಾಗೋ ಭಾಷಣದ 125ನೇ ವರ್ಷದ ಸ್ಮರಣೆಗಾಗಿ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಎಕ್ಸಲೆನ್ಸ್ ಭಾನುವಾರ ಆಯೋಜಿಸಿದ್ದ ‘ವಿವೇಕಾನಂದರ ಭಾರತ: ಯುವ ಸಬಲೀಕರಣ’ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಧರ್ಮ ಎಂಬುದು ಭಾರತದ ಅತ್ಯದ್ಭುತ ಪರಿಕಲ್ಪನೆಯಾಗಿದ್ದು, ವಿವೇಕಾನಂದರು ಅದನ್ನು ಪುನರುತ್ಥಾನಗೊಳಿಸಿದರು. ಭಾರತದ ಆ ವೈಭವವನ್ನು ಮರಳಿ ತರಲು ಪ್ರಯತ್ನಿಸಿದರು. ಭಾರತದ ಆಧ್ಯಾತ್ಮವನ್ನು ಸಹ ಪುನರ್ ಸ್ಥಾಪಿಸಿದರು’ ಎಂದು ಅವರು ಹೇಳಿದರು.

ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಮಾತನಾಡಿ, ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಈಗಲೂ ಪ್ರಸ್ತುತವಾಗಿವೆ. ಆ ಮೌಲ್ಯಗಳು ನಿರ್ದಿಷ್ಟ ಧರ್ಮ ಮಾತ್ರವಲ್ಲ ಎಲ್ಲ ಸಮಾಜಕ್ಕೂ ಒಪ್ಪುವಂತವು. ಅವರು ಮಾತುಗಳು, ದೂರದೃಷ್ಟಿ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದಾಗಿದ್ದು, ನವ ಭಾರತ ಕಲ್ಪನೆ ಅದರಲ್ಲಿತ್ತು. ಒಟ್ಟಾರೆ ಅವರ ಜೀವನವೇ ಒಂದು ಸಂದೇಶ ಎಂದರು.

ಎಲ್ಲರಲ್ಲೂ ಅಪರಿಮಿತ ಆಧ್ಯಾತ್ಮ ಶಕ್ತಿ ಇದ್ದು, ಪ್ರತಿಯೊಬ್ಬರು ಅದನ್ನು ತಿಳಿದುಕೊಳ್ಳಬೇಕು. ಶಿಕ್ಷಣ ಎಂದರೆ ಕೇವಲ ಮಾಹಿತಿ ಹಾಗೂ ಜ್ಞಾನ ಪಡೆದುಕೊಳ್ಳುವುದಲ್ಲ. ಅತ್ಯುತ್ತಮ ವ್ಯಕ್ತಿಯನ್ನು ನಿರ್ಮಾಣ ಮಾಡುವುದು ಒಳ್ಳೆಯ ಶಿಕ್ಷಣ ಎಂದು ಪ್ರತಿಪಾದಿಸಿದರು.

ಧರ್ಮ ಮತ್ತು ಸುಸ್ಥಿರತೆಯ ದೃಷ್ಟಿಕೋನಗಳು ವಿಷಯ ಕುರಿತು ಮಾತನಾಡಿದ ಬೆಂಗಳೂರು ಐಐಎಂ ಪ್ರಾಧ್ಯಾಪಕ ಡಾ. ಬಿ. ಮಹದೇವನ್ ‘ಮನುಷ್ಯ ಚಟುವಟಿಕೆಯಿಂದ ಇದ್ದಾಗ ಮಾಡಬೇಕಾದ, ಮಾಡಬಾರದ ಕೆಲಸವೇನು ಎಂಬ ವಿಷಯ ಮುಖ್ಯವಾಗುತ್ತದೆ. ನಿಷ್ಕ್ರಿಯರಾದಾಗ ಆ ಪ್ರಶ್ನೆ ಉದ್ಭವಿಸದು. ಆಧುನಿಕ ಶಿಕ್ಷಣ ಇವುಗಳನ್ನು ಹೇಳಿಕೊಡುವುದಿಲ್ಲ. ಸುಶಿಕ್ಷಿತರೇ ನೋ ಎಂಟ್ರಿಯಲ್ಲಿ ನುಗ್ಗುತ್ತಾರೆ. ಮಾನವನನ್ನು ವಿಶೇಷವಾಗಿ ಸೃಷ್ಟಿಸಲಾಗಿದ್ದು, ಆತ ಇತರ ಪ್ರಾಣಿಗಳಂತೆ ಅಲ್ಲ. ಕೇವಲ ಐಹಿಕ ಸುಖ ಅನುಭವಿಸುವುದೇ ಮುಖ್ಯವೆಂದುಕೊಂಡರೆ, ಧರ್ಮದ ಅಗತ್ಯ ಇರುವುದಿಲ್ಲ ಎಂದರು.

ಪರಸ್ಪರ ಭಾವ ಧರ್ಮದ ಮೂಲತತ್ವ ಎಂದು ಕೃಷ್ಣ ಹೇಳುತ್ತಾರೆ. ಧರ್ಮವನ್ನು ಉಳಿಸಿದರೆ ಮಾತ್ರ ಧರ್ಮ ನಮ್ಮನ್ನು ಉಳಿಸುತ್ತದೆ ಎನ್ನುತ್ತಾರೆ. ಧರ್ಮ ಎಷ್ಟು ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ವಿಶ್ವವನ್ನು ಸುಸ್ಥಿರಗೊಳಿಸುವುದೇ ಧರ್ಮ. ಆದ್ದರಿಂದ ಧರ್ಮದ ಸುಸ್ಥಿರತೆಯ ಪ್ರಶ್ನೆ ಉದ್ಭವಿಸದು ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ರಘುವೀರಾನಂದ ಸ್ವಾಮೀಜ, ಚೆನ್ನೈ ಐಐಟಿ ಪ್ರಾಧ್ಯಾಪಕ ಡಾ. ದೇವೇಂದ್ರ ಜಾಲಿಹಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT