ಮಾಲ್‌, ಮೆಟ್ರೊದಲ್ಲಿ ಮತದಾರರ ಜಾಗೃತಿ

ಬುಧವಾರ, ಏಪ್ರಿಲ್ 24, 2019
31 °C

ಮಾಲ್‌, ಮೆಟ್ರೊದಲ್ಲಿ ಮತದಾರರ ಜಾಗೃತಿ

Published:
Updated:
Prajavani

ನಕುಲ್‌ ಎಸ್‌.ಎಸ್‌, ಚುನಾವಣಾ ಅಧಿಕಾರಿ

ಬೆಂಗಳೂರು ದಕ್ಷಿಣ, ಮತಗಟ್ಟೆಗಳ ಸಂಖ್ಯೆ: 2131 

ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8

ನಿಮ್ಮ ಎದುರಿಗಿರುವ ದೊಡ್ಡ ಸವಾಲುಗಳೇನು? 

ಜನರನ್ನು ಮತಗಟ್ಟೆಗಳ ಕಡೆಗೆ ಕರೆತರುವುದೇ ದೊಡ್ಡ ಸವಾಲಿನ ಕೆಲಸ. ಮಹಾನಗರದಲ್ಲಿ ಸಾರಿಗೆ ಸಮಸ್ಯೆ ಸಹಜವಾಗಿ ದೊಡ್ಡ ಸವಾಲಾಗಿ ಕಾಣಿಸುತ್ತದೆ. 

ನಗರವಾಸಿಗಳು ಮತದಾನದ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದಾರೆ ಎಂದು ಅನಿಸುತ್ತಿದೆಯಾ?

ನಗರದ ಕೆಲವು ಮತದಾರರಲ್ಲೂ ನಿರ್ಲಕ್ಷ್ಯ ಮನೋಭಾವ ಕಾಣಿಸುತ್ತದೆ. ಇವಿಎಂ ಮತ್ತು ವಿವಿಪ್ಯಾಟ್‌ ಬಗ್ಗೆ ಮಾಹಿತಿ ಕೊರತೆಯ ಕಾರಣ ಕೆಲವರು ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಇನ್ನೂ ಕೆಲವರಿಗೆ ತಮ್ಮ ಹೆಸರು ಎಲ್ಲಿದೆ ಎಂಬ ಮಾಹಿತಿಯೇ ಇರುವುದಿಲ್ಲ. ಅಂತವರಿಗೆ ಎಲ್ಲ ರೀತಿಯ ನೆರವು ನೀಡಲು ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಮೆಟ್ರೊ, ಮಾಲ್‌, ಮಾರುಕಟ್ಟೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. 

ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳನ್ನು ಹೇಗೆ ಬಗೆಹರಿಸುವಿರಿ?

ಮತದಾರರ ಗುರತಿನ ಚೀಟಿ ಇದ್ದ ಮಾತ್ರಕ್ಕೆ ಮತ ಚಲಾಯಿಸಲು ಸಾಧ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅಷ್ಟೇ ಅಗತ್ಯ. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಮತ ಚಲಾಯಿಸಲು ಸಾಧ್ಯ. ಇಲ್ಲದಿದ್ದರೆ ಇಲ್ಲ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳಲ್ಲಿ ಈ ಸಮಸ್ಯೆ ಹೆಚ್ಚು. ಮೃತಪಟ್ಟವರು, ವಿಳಾಸ ಬದಲಾದವರು, ಕೆಲಸದ ನಿಮಿತ್ತ ಬೇರೆಡೆ ತೆರಳಿದವರು, ಮದುವೆಯಾಗಿ ಹೋದವರು, ವಿದೇಶಗಳಿಗೆ ತೆರಳಿದವರ ಬಗ್ಗೆ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಮಾಹಿತಿ ನೀಡಿದರೆ ಪಟ್ಟಿ ತಯಾರಿಸಿ ಮತಗಟ್ಟೆ ಅಧಿಕಾರಿಗಳಿಗೆ ನೀಡಿದರೆ ಪರಿಶೀಲನೆಗೆ ಅನುಕೂಲವಾಗುತ್ತದೆ. 

ಈ ಬಾರಿ ಯಾವ ರೀತಿಯ ಸಮಸ್ಯೆ?

ಎಲೆಕ್ಟ್ರಾನಿಕ್‌ ಮತಯಂತ್ರಗಳ ನಿರ್ವಹಣೆ, ಸುರಕ್ಷತೆ, ಭದ್ರತೆ ಮತ್ತು ಸಾಗಾಣಿಕೆ ಈ ಬಾರಿ ದೊಡ್ಡ ಸವಾಲಾಗಲಿದೆ. ಚುನಾವಣಾ ಸಿಬ್ಬಂದಿಗೆ ಅದರಲ್ಲೂ ಮಹಿಳಾ ಸಿಬ್ಬಂದಿಗೆ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಬಿಬಿಎಂಪಿ ಶುಶ್ರೂಷಕಿಯರು ಮತ್ತು ವೈದ್ಯರನ್ನು ನಿಯೋಜಿಸಲಾಗಿದೆ. 

****

ಬಿ.ಎಂ. ವಿಜಯಶಂಕರ್‌, ಚುನಾವಣಾ ಅಧಿಕಾರಿ

ಬೆಂಗಳೂರು ಉತ್ತರ, ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8

ಮತದಾರರ ಸಂಖ್ಯೆ: 28,46,495 

ನೀವು ಎದುರಿಸುತ್ತಿರುವ ಸವಾಲುಗಳೇನು?

ಬೆಂಗಳೂರಿನಂತಹ ಮಹಾನಗರದಲ್ಲಿ ಮತದಾನ ಪ್ರಮಾಣ ಶೇ 50ರಷ್ಟು ಮಾತ್ರ. ಮತದಾರರ ಪಾಲ್ಗೊಳ್ಳುವಿಕೆ ಮತ್ತು ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಮತ ಚಲಾಯಿಸುವುದು ಎಷ್ಟು ಮಹತ್ವದ ಕೆಲಸ ಎಂಬುವುದನ್ನು ಜನರಿಗೆ ಮನವರಿಕೆ ಮಾಡುತ್ತಿದ್ದೇವೆ. ಮತದಾನ ಮೂಲಭೂತ ಕರ್ತವ್ಯ ಮತ್ತು ಹಕ್ಕು ಎಂದು ತಿಳಿ ಹೇಳುವ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ನಮ್ಮ ಶ್ರಮ ತಕ್ಕ ಫಲ ನೀಡುವ ನಿರೀಕ್ಷೆಯಲ್ಲಿದ್ದೇವೆ. ಮತದಾನ ಪ್ರಮಾಣ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. 

ಜನರನ್ನು ತಲಪುವ ಪ್ರಯತ್ನಗಳು ಹೇಗೆ ಸಾಗಿವೆ?

ನಾನು ಮತ್ತು ಬಿಬಿಎಂಪಿ ಆಯುಕ್ತರು ಜನರೊಂದಿಗೆ ಮುಖಾಮುಖಿಯಾಗುತ್ತಿದ್ದೇವೆ. ಬೆಳಗ್ಗೆ ವಾಯುವಿಹಾರ ಮಾಡುವ ಜನರೊಂದಿಗೆ ಮಾತನಾಡುತ್ತಿದ್ದೇವೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮಾಲ್‌, ಮೆಟ್ರೊ ನಿಲ್ದಾಣಗಳಲ್ಲಿ ಮಳಿಗೆ ತೆರೆದಿದ್ದೇವೆ. ನಗರದಲ್ಲಿರುವ ಐ.ಟಿ ಕ್ಯಾಂಪಸ್‌ಗಳಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದೇವೆ.

***

ನಗರದ ಸೂಕ್ಷ್ಮ ಪ್ರದೇಶಗಳಿಗೆ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಜನರನ್ನು ಬೆದರಿಸುವ, ಮತ ಚಲಾಯಿಸದಂತೆ ತಡೆಯುವ ಅಥವಾ ನಿರ್ದಿಷ್ಟ ಪಕ್ಷ, ಅಭ್ಯರ್ಥಿಗೆ ಮತ ಹಾಕುವಂತೆ ಬೆದರಿಕೆ ಒಡ್ಡುವ ಕೃತ್ಯಗಳಿಗೆ ಕಡಿವಾಣ ಹಾಕಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. 34 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಜನರಿಗೆ ಬೆದರಿಕೆ ಒಡ್ಡುವ ಕಾರಣ ಈ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ.

- ಬಿ.ಎಂ. ವಿಜಯಶಂಕರ್‌, ಚುನಾವಣಾ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !