ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರಕೀತೇ ದುಬಾರಿ ಐಇಇಇ ಇ–ಜರ್ನಲ್‌?

ಎಂಜಿನಿಯರಿಂಗ್‌ ಕಾಲೇಜುಗಳ ಬೇಡಿಕೆ–ಪೂರೈಸಲು ವಿಟಿಯು ಯತ್ನ
Last Updated 22 ಮೇ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಒಳಪಟ್ಟ 217 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯವಾದ ಕೆಲವು ವಿದ್ಯುನ್ಮಾನ ನಿಯತಕಾಲಿಕಗಳು ಮತ್ತು ಅಧ್ಯಯನ ಸಂಪನ್ಮೂಲಗಳು ದೊರಕದೆ ಇರುವ ಆತಂಕ ಎದುರಾಗಿದೆ.

ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್‌ (ಐಇಇಇ) ಪ್ರಕಟಿಸುವ ಐಇಇಇ–ಐಇಎಲ್‌ ಸಂಶೋಧನಾ ಪ್ರಬಂಧಗಳಿಗೆ ವಿದ್ಯಾರ್ಥಿಗಳಿಂದ ಅಧಿಕ ಬೇಡಿಕೆ ಇದೆ. ಜತೆಗೆ ಎಎಸ್‌ಎಂಇ, ಎಎಸ್‌ಸಿಇ, ಪ್ರೊಕ್ವೆಸ್ಟ್‌ನಂತಹ ಇ–ಜರ್ನಲ್‌ಗಳಿಗೂ ಬೇಡಿಕೆ ಇದೆ. ಆದರೆ, 2019–20ನೇ ಶೈಕ್ಷಣಿಕ ವರ್ಷದಿಂದ ಈ ಜರ್ನಲ್‌ಗಳು ವಿದ್ಯಾರ್ಥಿಗಳಿಗೆ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ವಿಟಿಯು ಜರ್ನಲ್‌ಗಳ ಪೂರೈಕೆಗೆ ಸಂಬಂಧಿಸಿದ ರಚಿಸಿದ ಒಕ್ಕೂಟ (ಕನ್‌ಸೋರ್ಟಿಯಂ) ಐಇಇಇ ಜತೆಗೆ ಸಮಾಲೋಚನೆ ನಡೆಸಿದೆ. ದುಬಾರಿ ದರದ ಕಾರಣಕ್ಕೆ ಅದನ್ನು ಕೈಬಿಟ್ಟು,ಟರ್ನಿಟಿನ್‌ ಒರಿಜಿನಾಲಿಟಿ ಚೆಕರ್‌ ಆನ್‌ಲೈನ್‌ ಟೂಲ್‌ ಅನ್ನು ಎಲ್ಲಾ ಕಾಲೇಜುಗಳಿಗೆ ತರಿಸಿಕೊಡಲು ನಿರ್ಧರಿಸಿದೆ. ಜತೆಗೆ ಎಲ್ಸೆವಿಯರ್‌ ಸೈನ್ಸ್‌ ಡೈರೆಕ್ಟ್‌, ಟೇಲರ್‌ ಆಂಡ್‌ ಫ್ರಾನ್ಸಿಸ್‌, ಸ್ಪ್ರಿಂಗರ್‌, ಇನ್‌ಸ್ಟಿಟ್ಯೂಟ್‌ ಆಫ್‌ ಸಿವಿಲ್‌ ಎಂಜಿನಿಯರ್ಸ್‌ (ಐಸಿಇ) ಗಳಂತಹ ಇ ಜರ್ನಲ್‌ಗಳನ್ನು ಪೂರೈಸಲು ನಿರ್ಧರಿಸಿದೆ.

ತಪ್ಪು ಕಲ್ಪನೆ: ‘ವಿದ್ಯಾರ್ಥಿಗಳು ಐಇಇಇ ಸಿದ್ಧಪಡಿಸುವ ಜರ್ನಲ್‌ಗಳನ್ನಷ್ಟೇ ಅಧ್ಯಯನಕ್ಕೆ ಬಳಸಿಕೊಳ್ಳುತ್ತಾರೆ ಎಂಬುದು ತಪ್ಪು ಕಲ್ಪನೆ, ವಿಟಿಯು ನಲ್ಲಿ ಇರುವ ಮಾಹಿತಿಯಂತೆ ಕಳೆದ ವರ್ಷ 58 ಕಾಲೇಜುಗಳು ಮಾತ್ರ 7 ಸಾವಿರಕ್ಕಿಂತ ಅಧಿಕ ಡೌನ್‌ಲೋಡ್‌ ಮಾಡಿವೆ, 70 ಕಾಲೇಜುಗಳು 1ರಿಂದ 6 ಸಾವಿರದಷ್ಟು ಡೌನ್‌ಲೋಡ್‌ ಮಾಡಿಕೊಂಡಿವೆ, 65 ಕಾಲೇಜುಗಳು ಇದನ್ನು ಬಳಸಿಕೊಂಡೇ ಇಲ್ಲ. ವಿದ್ಯಾರ್ಥಿಗಳು ಮಾಹಿತಿಯ ಮೂಲವನ್ನು ಪಡೆಯಬೇಕೇ ಹೊರತು ಗೈಡ್‌ ಅಥವಾ ಉಪನ್ಯಾಸಗಳ ಝೆರಾಕ್ಸ್‌ ಪ್ರತಿಗಳಲ್ಲ. ಹೀಗಿದ್ದರೂ ದರ ಕಡಿತಗೊಳಿಸಲು ಕೋರಿ ಐಇಇಇ ಜತೆಗೆ ಮಾತುಕತೆ ಮುಂದುವರಿಯಲಿದೆ’ ಎಂದು ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐಇಇಇ ಜರ್ನಲ್‌ಗಳಿಗೆ ಒಂದು ಕಾಲೇಜಿನಿಂದ8,800 ಡಾಲರ್‌ನಂತೆ (ಸುಮಾರು ₹ 6.16 ಲಕ್ಷ) ಶುಲ್ಕ ತೆರಬೇಕು. ಕನಿಷ್ಠ 180 ಕಾಲೇಜುಗಳಿಗೆ ಹೀಗೆ ಪಾವತಿಸಲು ₹ 13.5 ಕೋಟಿ ಹಣ ಬೇಕು. ವಿಟಿಯು ಬಳಿ ಇರುವುದು ₹ 16.2 ಕೋಟಿ ಮಾತ್ರ. ಇರುವ ದುಡ್ಡಲ್ಲಿ ಶೇ 83ರಷ್ಟನ್ನು ಐಇಇಇ ಜರ್ನಲ್‌ ಖರೀದಿಗಾಗಿಯೇ ವಿನಿಯೋಗಿಸಿದರೆ ಉಳಿದ ವಿಭಾಗಗಳಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ವಿಟಿಯು ಮಾತ್ರವಲ್ಲ, ದೇಶದ ಇತರೆಡೆ ಸಹ ಐಇಇಇ ಜರ್ನಲ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ’ ಎಂದು ಅವರು ವಿವರಿಸಿದರು.

**

ವಿಟಿಯು ಒದಗಿಸುವ ಜರ್ನಲ್‌ಗಳಿಂದ ಉಪಯೋಗ ಇಲ್ಲ ಎಂಬುದನ್ನು ಬೋಧಕರು, ವಿದ್ಯಾರ್ಥಿಗಳು ಹೇಳಿದರಷ್ಟೇ ಒಪ್ಪಿಕೊಳ್ಳಲು ಸಾಧ್ಯ, ಇತರರಿಗೆ ಅದರ ಬಗ್ಗೆ ಏನು ಗೊತ್ತಿದೆ?
- ಡಾ.ಕರಿಸಿದ್ದಪ್ಪ, ವಿಟಿಯು ಕುಲಪತಿ

**

ಅಂಕಿ ಅಂಶ

$ 8,800 - ಐಇಇಇ ಜರ್ನಲ್‌ ಪಡೆಯಲು ನೀಡಬೇಕಿರುವ ಶುಲ್ಕ
₹ 16.2 ಕೋಟಿ - ವಿಟಿಯು ಬಳಿ ಇರುವ ನಿಧಿ
65 ಕಾಲೇಜುಗಳು - ಐಇಇಇ ಜರ್ನಲ್‌ ಬಳಸಿಯೇ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT