ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಸಚಿವ ಹುದ್ದೆಗೆ ಐಪಿಎಸ್‌ ಅಧಿಕಾರಿಗಳ ನೇಮಕ?

ಆಡಳಿತದಲ್ಲಿ ಅನುಭವದ ಕೊರತೆ–ಗೊಂದಲ ತಡೆಯುವ ಯತ್ನ
Last Updated 20 ಮೇ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಹಿಂದೆ ಇದ್ದಂತೆ ಐಪಿಎಸ್‌/ಐಎಫ್‌ಎಸ್‌ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ನೇಮಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಪ್ರತಿಮೆಗಳ ಸ್ಥಾಪನೆ ವಿವಾದದ ಕಾರಣ ಈ ಬೆಳವಣಿಗೆ ನಡೆದಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಅವರು ಉನ್ನತ ಶಿಕ್ಷಣ ಇಲಾಖೆಗೆ ವಿವರವಾದ ವರದಿ ನೀಡಿದ್ದಾರೆ.ಎರಡು ಗುಂಪುಗಳ ಬೈಗುಳದಿಂದಾಗಿ ಕ್ಯಾಂಪಸ್‌ನಲ್ಲಿನ ಶಾಂತಿ, ಸೌಹಾರ್ದಕ್ಕೆ ಧಕ್ಕೆ ಉಂಟಾಗಿದ್ದು, ವಿಶ್ವವಿದ್ಯಾಲಯದ ಆಡಳಿತಾತ್ಮಕ ಕೆಲಸಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಕುಲಸಚಿವರನ್ನಾಗಿ ಐಪಿಎಸ್‌/ಐಎಫ್‌ಎಸ್‌ ಅಧಿಕಾರಿಗಳನ್ನು ನೇಮಿಸಬೇಕು ಎಂದು ಶಿಫಾರಸು ಮಾಡಿದ್ದರು.

ಕಳೆದ ಬುಧವಾರ ಉನ್ನತ ಶಿಕ್ಷಣ ಸಚಿವರ ಜತೆಗೆ ಚರ್ಚಿಸಿದ ಅಧಿಕಾರಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳ ಜತೆ ಈ ಬಗ್ಗೆ ಅಧಿಕೃತ ಮನವಿ ಸಲ್ಲಿಸಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.

ಇದು ಹೊಸ ನೀತಿಯೇನಲ್ಲ. ಈಚೆಗೆ ಆಗಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ತಿದ್ದುಪಡಿಯಲ್ಲೂ ಇದನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಇದು ಜಾರಿಗೆ ಬಂದಿಲ್ಲ ಅಷ್ಟೇ. ಈ ಹಿಂದೆ ಬೆಂಗಳೂರು ಸಹಿತ ಹಲವು ವಿವಿಗಳಲ್ಲಿ ಐಪಿಎಸ್‌ ಅಧಿಕಾರಿಗಳು ಕುಲಸಚಿವರಾಗಿದ್ದರು. ಇಂತಹ ಅಧಿಕಾರಿಗಳ ಕೊರತೆ ಇದ್ದ ಕಾರಣಕ್ಕೆ ಹಿರಿಯ ಪ್ರಾಧ್ಯಾಪಕರನ್ನು ಕುಲಸಚಿವರನ್ನಾಗಿ ಆಯ್ಕೆ ಮಾಡುವ ಪರಿಪಾಠ ಬೆಳೆದುಬಂದಿತ್ತು. ಆದರೆ ಆಡಳಿತಾತ್ಮಕ ವಿಚಾರದಲ್ಲಿ ಅವರಿಗೆ ಅನುಭವ ಸಾಲದು, ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ನಿಭಾಯಿಸಲು ಆಡಳಿತದಲ್ಲಿ ಅನುಭವ ಇರುವವರೇ ಬೇಕು ಎಂಬ ನೆಲೆಯಲ್ಲಿ ಹೊಸ ವ್ಯವಸ್ಥೆ ಮತ್ತೆ ಜಾರಿಗೆ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT