ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್‌ಮಾರ್ಕ್‌ ಮಾಲೀಕರ ವಿಚಾರಣೆ

ಅಭಿವೃದ್ಧಿ ಹಕ್ಕು ವರ್ಗಾವಣೆ ವಂಚನೆ: ಅಧಿಕಾರಿಗಳಿಗೆ ಸಹಕರಿಸದ ರತನ್‌
Last Updated 9 ಮೇ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ನಿವೇಶನ, ಕಟ್ಟಡಗಳಿಗೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕುವರ್ಗಾವಣೆ (ಟಿಡಿಆರ್‌) ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಂಬಂಧ ‘ವಾಲ್‌ಮಾರ್ಕ್ ರಿಯಾಲಿಟಿ ಹೋಲ್ಡಿಂಗ್‌ ಪ್ರೈವೇಟ್‌ ಲಿ’. ಕಂಪನಿ ಮಾಲೀಕ ರತನ್‌ ಬಾಬುಲಾಲ್‌ ಲಾಥ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ವಿಚಾರಣೆಗೆ ಒಳ‍ಪಡಿಸಿದ್ದಾರೆ.

ಬುಧವಾರ ಇಡೀ ದಿನ ವಿಚಾರಣೆ ನಡೆಸಿದ ಅಧಿಕಾರಿಗಳು ಗುರುವಾರವೂ ಎಡಬಿಡದೆ ಪ್ರಶ್ನೆಗಳನ್ನು ಕೇಳಿದರು. ಸಂಜೆ ರತನ್‌ ಅವರನ್ನು ಮನೆಗೆ ಕಳುಹಿಸಲಾಗಿದ್ದು, ಶುಕ್ರವಾರ ಪುನಃ ವಿಚಾರಣೆಗೆ ಹಾಜರಾಗಲಿದ್ದಾರೆ. ಟಿಡಿಆರ್‌ ವರ್ಗಾವಣೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಮೇ 4ರಂದು ಶನಿವಾರ ವಾಲ್‌ಮಾರ್ಕ್‌ ಕಂಪನಿ ಕಚೇರಿ, ರತನ್‌ಲಾಲ್‌ ಮನೆ ಮತ್ತು ಕಂಪನಿ ಉದ್ಯೋಗಿ ಅಮಿತ್‌ ಜೆ. ಬೋಳಾರ್‌ ಅವರ ಮನೆ ಸೇರಿದಂತೆ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.

ದಾಳಿ ಸಮಯದಲ್ಲಿ ಟಿಡಿಆರ್‌ ಹಕ್ಕು ವರ್ಗಾವಣೆಗೆ ಸಂಬಂಧಸಿದ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿತ್ತು. ಇವುಗಳ ಆಧಾರದ ಮೇಲೆ ರತನ್‌ಲಾಲ್‌ ಅವರನ್ನು ಪ್ರಶ್ನಿಸಲಾಗುತ್ತಿದೆ. ಆದರೆ, ಅವರು ಅಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಕರಣವೇನು?: ಟಿಡಿಆರ್‌ ಹಕ್ಕು ವರ್ಗಾವಣೆ ಪ್ರಕ್ರಿಯೆಯಲ್ಲಿ ವಂಚನೆ ಎಸಗುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿರುವ ಸಂಬಂಧ ಎಸಿಬಿಗೆ ದೂರು ಬಂದಿತ್ತು. ದೂರು ಆಧರಿಸಿ ಬಿಡಿಎ ಎಇಇ ಕೃಷ್ಣಲಾಲ್‌ (ನಿಯೋಜನೆ) ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ವಾಲ್‌ಮಾರ್ಕ್ ಕಂಪೆನಿ ಮೇಲೂ ದಾಳಿ ಆಗಿತ್ತು.

ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಜಾಗಕ್ಕಿಂತ ಹೆಚ್ಚು ಟಿಡಿಆರ್‌ ಹಕ್ಕು ಕೊಡುವ ಮೂಲಕ ಕೃಷ್ಣಲಾಲ್‌ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಒಳಗಾಗಿದ್ದಾರೆ. ಈ ಅಕ್ರಮದಲ್ಲಿ 50ಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯಿದೆ.

ಸುಮಾರು 7 ಕಿ.ಮೀ ಉದ್ದದ ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನ‍‍ಪಡಿಸಿಕೊಂಡಕವಡೇನಹಳ್ಳಿ ಸರ್ವೆ ನಂಬರ್‌ 132ರ ಜಮೀನಿಗೆ 1500 ಚದರ ಮೀಟರ್‌ ಟಿಡಿಆರ್‌ ಹಕ್ಕು ನೀಡಲಾಗಿತ್ತು. ಇದಕ್ಕೆ ಮತ್ತೊಂದು ಸೊನ್ನೆ ಸೇರಿಸಿ 15 ಸಾವಿರ ಚದರ ಮೀಟರ್‌ ಹಕ್ಕನ್ನು ‘ಫಿನಿಕ್ಸ್‌ ಡೆವಲಪರ್ಸ್‌’ಗೆ ಮಾರಾಟ ಮಾಡಲಾಗಿತ್ತು. ಅಷ್ಟು ಹೊತ್ತಿಗೆ ಇದರ ಮೂಲ ಮಾಲೀಕರಾದ ರೇವಣ್ಣ ಅವರು ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಿ ಬೇರೆಯವರಿಗೆ ಮಾರಿದ್ದರು.

ನಿಯಮದ ಪ್ರಕಾರ, ನಿವೇಶನಗಳ ಮಾಲೀಕರಿಗೆಟಿಡಿಆರ್‌ ಹಕ್ಕುಸಿಗಬೇಕಿತ್ತು. ಆದರೆ, ರೇವಣ್ಣನವರ ಮಕ್ಕಳಿಗೆ ನೀಡಲಾಗಿತ್ತು. ಅವರಿಂದ ₹ 40 ಲಕ್ಷಕ್ಕೆ ಈ ಹಕ್ಕನ್ನು ಖರೀದಿಸಿದ ವಾಲ್‌ಮಾರ್ಕ್‌ ಕಂಪೆನಿ ಅದನ್ನು ₹ 56 ಕೋಟಿಗೆ ‘ಫಿನಿಕ್ಸ್‌ ಡೆವಲಪರ್ಸ್‌’ಗೆ ಮರು ಮಾರಾಟ ಎಂಬ ಸಂಗತಿ ತನಿಖೆಯಿಂದ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT