ಮಂಗಳವಾರ, ಸೆಪ್ಟೆಂಬರ್ 28, 2021
24 °C
ಮಳೆ: ನಿಯಮಿತವಾಗಿ ಸಭೆ ನಡೆಸಿ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳಲು ಸಲಹೆ

ಹಾನಿ ತಪ್ಪಿಸಲು ವಾರ್ಡ್‌ ಸಮಿತಿಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮೋರಿ ಕಟ್ಟಿಕೊಂಡಿದೆ, ಚರಂಡಿ ಹೂಳೆತ್ತಿಲ್ಲ, ರಸ್ತೆ ಬದಿಯ ಕಸದ ರಾಶಿ ಇನ್ನೂ ತೆರವಾಗಿಲ್ಲ.... ಒಣಗಿದ ಕೊಂಬೆಗಳು ಯಾವಾಗಲಾದರೂ ಬೀಳುವ ಸ್ಥಿತಿಯಲ್ಲಿವೆ... ಮಳೆ ಬಂದರೆ ಅನಾಹುತಗಳ ಸರಮಾಲೆಯೇ ಕಾದಿದೆ...’

ಹೀಗೆಂದು ವೃಥಾ ದೂರುತ್ತಾ ಕುಳಿತರೆ ಪ್ರಯೋಜನವಿಲ್ಲ. ಮಳೆಗಾಲದ ಸಂಭಾವ್ಯ ಸಮಸ್ಯೆಗಳನ್ನು ತಪ್ಪಿಸಬೇಕೇ? ಹಾಗಾದರೆ ವಾರ್ಡ್‌ ಸಮಿತಿಯ ಮೊರೆ ಹೋಗಿ. ಈ ಸಮಸ್ಯೆಗಳ ಬಗ್ಗೆ ತುರ್ತಾಗಿ ಚರ್ಚಿಸಿ, ಪರಿಹಾರೋಪಾಯ ಕಂಡುಕೊಳ್ಳಲು ಸಭೆ ಕರೆಯುವಂತೆ ಸಮಿತಿ ಅಧ್ಯಕ್ಷರಾಗಿರುವ ವಾರ್ಡ್‌ನ ಪಾಲಿಕೆ ಸದಸ್ಯರನ್ನು ಒತ್ತಾಯಿಸಿ. ವಾರ್ಡ್‌ ಸಮಿತಿಗಳನ್ನು ಬಲಪಡಿಸಲು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು ಹೇಳುವ ಕಿವಿಮಾತು ಇದು.

‘ಮಳೆಗಾಲಕ್ಕೆ ಸನ್ನದ್ಧವಾಗಿರುವುದಾಗಿ ಪಾಲಿಕೆ ಹೇಳುತ್ತಲೇ ಇದೆ. ಆದರೆ, ವಸ್ತುಸ್ಥಿತಿ ಬೇರೆಯೇ ಇದೆ. ಎರಡು ವಾರಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆಗೆ ನಗರದಲ್ಲಿ ಅನೇಕ ಕಡೆ ಅನಾಹುತಗಳು ನಡೆದಿವೆ. ಮಳೆ ಬಂದರೆ ತಮ್ಮ ವಾರ್ಡ್‌ನಲ್ಲಿ ಏನೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬುದು ಸ್ಥಳೀಯರಿಗೆ ಚೆನ್ನಾಗಿ ಗೊತ್ತಿರುತ್ತದೆ. ತುರ್ತಾಗಿ ವಾರ್ಡ್‌ ಸಮಿತಿ ಸಭೆ ಕರೆದು, ಮಳೆ ಸನ್ನದ್ಧತೆಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು’ ಎಂದು ಸಿಟಿಜನ್ಸ್‌ ಫಾರ್ ಬೆಂಗಳೂರು ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ಸಲಹೆ ನೀಡಿದರು.

‘ಮೇ ತಿಂಗಳ ವಾರ್ಡ್‌ ಸಮಿತಿ ಸಭೆಗೆ ವಿಶೇಷ ಮಹತ್ವ ಇದೆ. ಆದರೆ, ಇದುವರೆಗೆ 20 ಕಡೆ ಮಾತ್ರ ಸಭೆಗಳು ನಡೆದಿವೆ. ಇದು ಒಳ್ಳೆಯ ಲಕ್ಷಣ ಅಲ್ಲ. ಇನ್ನಾದರೂ ಜನರೇ ಎಚ್ಚೆತ್ತು ಸಭೆ ಏರ್ಪಡಿಸುವಂತೆ ಪಾಲಿಕೆ ಸದಸ್ಯರನ್ನು ಒತ್ತಾಯಿಸಬೇಕು. ಎಲ್ಲ 198 ವಾರ್ಡ್‌ಗಳಲ್ಲೂ ಈ ಸಭೆಗಳು ನಿಯಮಿತವಾಗಿ ನಡೆದರೆ ಸಮಸ್ಯೆಗಳಿಗೆ ಸ್ಥಳೀಯಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಸಣ್ಣ ಕೆಲಸಗಳಿಗೂ ಪಾಲಿಕೆಯ ವಲಯ ಕಚೇರಿ ಅಥವಾ ಕೇಂದ್ರ ಕಚೇರಿಗಳಿಗೆ ಅಲೆಯುವ ಪ್ರಮೇಯ ಎದುರಾಗದು’ ಎಂದರು.

‘ರಸ್ತೆ ಪಕ್ಕದ ಮಳೆನೀರು ಚರಂಡಿ ಹಾಗೂ ರಾಜಕಾಲುವೆಯ ಹೂಳೆತ್ತದಿದ್ದರೆ, ಅದರಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸದಿದ್ದರೆ, ಈ ಬಗ್ಗೆ ವಾರ್ಡ್‌ ಸಮಿತಿ ಸಭೆಗಳಲ್ಲಿ ಚರ್ಚಿಸಬಹುದು. ಕೆಲವೆಡೆ ಚರಂಡಿ ಬಳಿ ಕಸ ರಾಶಿ ಹಾಕಿದ್ದರೆ ಅದರಿಂದಲೂ ಮಳೆ ನೀರು ಹರಿವಿಗೆ ಅಡ್ಡಿ ಉಂಟಾಗುತ್ತದೆ. ಈ ಬಗ್ಗೆಯೂ ಅಧಿಕಾರಿಗಳ ಗಮನ ಸೆಳೆಯಬಹುದು. ಮರಗಳ ಕೊಂಬೆಗಳು ಬಾಗಿದ್ದರೆ ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಬಹುದು. ಕೆಲವು ಅಂಡರ್‌ಪಾಸ್‌ಗಳ ಬಳಿ, ನೀರು ಹರಿವಿನ ದಾರಿ ಕಟ್ಟಿಕೊಂಡಿದ್ದರೆ ಮೊದಲೇ ಸ್ವಚ್ಛಗೊಳಿಸಿದರೆ ಮಳೆ ಬಂದಾಗ ಪಾಲಿಕೆಯನ್ನು ದೂರುವ ಪ್ರಮೇಯ ಬರುವುದಿಲ್ಲ’ ಎನ್ನುತ್ತಾರೆ ಬ್ಯಾಟರಾಯನಪುರದ ಉಮೇಶಬಾಬು ಪಿಳ್ಳೇಗೌಡ.

ಏಪ್ರಿಲ್ ತಿಂಗಳ ಸಭೆ ‘ಚುನಾವಣೆಗೆ ಅರ್ಪಣೆ’

ಏಪ್ರಿಲ್‌ನಲ್ಲಿ ನಗರದ ಬಹುತೇಕ ಕಡೆ ವಾರ್ಡ್‌ ಸಮಿತಿ ಸಭೆಗಳೇ ನಡೆದಿಲ್ಲ. ಪಾಲಿಕೆ ವೆಬ್‌ಸೈಟ್‌ನಲ್ಲಿ  (http://bbmp.gov.in) ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರತಿನಿಧಿಸುವ ಕಾಚರಕನ ಹಳ್ಳಿ ವಾರ್ಡ್‌ನಲ್ಲಿ ಸಭೆ ನಡೆದಿರುವ ವಿವರ ಮಾತ್ರ ಇದೆ. ಇನ್ನೂ ಮೂರು– ನಾಲ್ಕು ವಾರ್ಡ್‌ಗಳಲ್ಲಿ ಸಭೆ ನಡೆದಿವೆಯಾದರೂ ನಡಾವಳಿಗಳು ಪಾಲಿಕೆ ವೆಬ್‌ಸೈಟ್‌ನಲ್ಲಿಲ್ಲ.

ಏಪ್ರಿಲ್‌ ತಿಂಗಳ ಮೊದಲ ಶನಿವಾರ (ಏ.6) ಯುಗಾದಿ ಹಬ್ಬವಿತ್ತು. ಎರಡನೇ ವಾರ ಲೋಕಸಭಾ ಚುನಾವಣಾ ಪ್ರಚಾರದ ಭರಾಟೆ ಜೋರಾಗಿತ್ತು. ಮೂರನೇ ವಾರದಲ್ಲಿ ಸಾಲು ಸಾಲು ರಜೆಗಳು ಬಂದವು. ಅನೇಕ ವಾರ್ಡ್‌ಗಳಲ್ಲಿ ಅಧಿಕಾರಿಗಳು ಚುನಾವಣಾ ನೀತಿಸಂಹಿತೆಯ ನೆಪವೊಡ್ಡಿ ಸಭೆಗಳನ್ನು ನಡೆಸಲು ಹಿಂದೇಟು ಹಾಕಿದ್ದರು.

‘ವಾರ್ಡ್‌ ಸಮಿತಿ ಸಭೆಗೂ ನೀತಿಸಂಹಿತೆಗೂ ಸಂಬಂಧವಿಲ್ಲ. ಎಲ್ಲ ವಾರ್ಡ್‌ಗಳಲ್ಲೂ ಸಭೆ ನಡೆಸುವುದು ಕಡ್ಡಾಯ’ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ಅವರು ಸ್ಪಷ್ಟೀಕರಣ ನೀಡಿದ ಬಳಿಕವೂ ಬಹುತೇಕ ವಾರ್ಡ್‌ಗಳಲ್ಲಿ ಸಭೆ ನಡೆಯಲೇ ಇಲ್ಲ.

‘ಏಪ್ರಿಲ್‌ ತಿಂಗಳಲ್ಲಿ ನಾಲ್ಕೈದು ವಾರ್ಡ್‌ಗಳಲ್ಲಿ ಮಾತ್ರ ಸಭೆಗಳು ನಡೆದಿವೆ. ಪಾಲಿಕೆ ಸದಸ್ಯರು ಮೊದಲು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಕಾರಣಕ್ಕೆ ಸಭೆ ನಡೆಸಲು ಹಿಂದೇಟು ಹಾಕಿದ್ದರು.  ಏ. 18ರಂದು ಮತದಾನ ಪ್ರಕ್ರಿಯೆ ಮುಗಿದ ಬಳಿಕವೂ ಸಭೆ ನಡೆಸುವ ಗೋಜಿಗೇ ಹೋಗಿಲ್ಲ’ ಎಂದು ಶ್ರೀನಿವಾಸ ಅಲವಿಲ್ಲಿ ಬೇಸರ ವ್ಯಕ್ತಪಡಿಸಿದರು.

‘ನಮ್ಮ ವಾರ್ಡ್‌ನಲ್ಲಿ ಏಪ್ರಿಲ್‌ನಲ್ಲೂ ಸಭೆ ನಡೆಸಲಾಗಿದೆ. ಆದರೆ, ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಅಧಿಕಾರಿಗಳು ನೀತಿ ಸಂಹಿತೆಯ ನೆಪವೊಡ್ಡಿ ಅನುಷ್ಠಾನಗೊಳಿಸಿಲ್ಲ. ಹಾಗಾಗಿ ಏಪ್ರಿಲ್‌ನ ಸಭೆಯ ತೀರ್ಮಾನಗಳನ್ನೂ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಮೇ 4ರಂದು ನಡೆದ ಸಭೆಯಲ್ಲಿ ಸೂಚಿಸಿದ್ದೇನೆ’ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

***

ಜನರ ಹಕ್ಕು ಮತದಾನಕ್ಕೆ ಸೀಮಿತವಲ್ಲ. ಸ್ಥಳೀಯ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿ ಎತ್ತುವ ಹಕ್ಕನ್ನು ವಾರ್ಡ್‌ ಸಮಿತಿ ಒದಗಿಸಿದೆ. ಜನ ಅದನ್ನು ಬಳಸಿಕೊಳ್ಳಬೇಕು

–ಉಮೇಶಬಾಬು ಪಿಳ್ಳೇಗೌಡ, ಬ್ಯಾಟರಾಯನಪುರ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು