ವಾರ್ಡ್‌ ಸಮಿತಿಗೆ ಬೇಕು ಮಾಹಿತಿ ‘ಬಲ’

ಸೋಮವಾರ, ಮೇ 27, 2019
29 °C

ವಾರ್ಡ್‌ ಸಮಿತಿಗೆ ಬೇಕು ಮಾಹಿತಿ ‘ಬಲ’

Published:
Updated:

ಬೆಂಗಳೂರು: ‘ನಗರಕ್ಕೆ ಹೊಂದಿಕೊಂಡಂತಿರುವ 110 ಹಳ್ಳಿಗಳಿಗೆ ನೀರು ಕೊಡಲಾಗುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಲೇ ವರ್ಷ ಬೇಕಾಯಿತು. ಇನ್ನು ಬೇರೆ ಮಾಹಿತಿ ಹೇಗೆ ಸಿಕ್ಕೀತು?’

– ಇದು ನಗರದ ನಾಗರಿಕ ಸಂಘಟನೆಗಳ ಪ್ರಶ್ನೆ. ಪಾಲಿಕೆಯಿಂದಾಗಬೇಕಾದ ಕೆಲಸಗಳು, ನಾಗರಿಕರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದೆ ಎಂಬುದು ನಾಗರಿಕ ಸಂಘಟನೆಗಳ ಆರೋಪ. 

‘ಉದಾಹರಣೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿದೆ. ಅದರ ಫಲಿತಾಂಶವೇನು? ಎಲ್ಲ ಕಡೆ ಫ್ಲೈ ಓವರ್‌ ವಿಷಯವಾಗಿ ಮಾತು ಕೇಳಿ ಬರುತ್ತಿದೆ. ಅದರ ಸಾಧಕ ಬಾಧಕಗಳ ಅಧ್ಯಯನ ವರದಿ ಇದೆಯೇ? ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ನಡೆದಿದೆಯೇ? ಸ್ಥಾಯಿ ಸಮಿತಿಗಳ ಸಭೆಯಲ್ಲಾಗುವ ನಿರ್ಧಾರಗಳು ಜನರಿಗೇಕೆ ತಿಳಿಯುತ್ತಿಲ್ಲ? ಇಂತಹ ಹಲವು ಪ್ರಶ್ನೆಗಳು ಕಾಡಲು ಮಾಹಿತಿ ಮರೆಮಾಚುತ್ತಿರುವುದೇ ಕಾರಣ’ ಎನ್ನುತ್ತಾರೆ ಸಿಟಿಜನ್‌ ಫಾರ್‌ ಬೆಂಗಳೂರು ಸಂಸ್ಥಾಪಕ ಶ್ರೀನಿವಾಸ್‌ ಅಲವಿಲ್ಲಿ. 

‘ಜಲಮಂಡಳಿ, ಬಿಡಿಎ, ಬಿಎಂಟಿಸಿ, ನಮ್ಮ ಮೆಟ್ರೊ, ಬೆಸ್ಕಾಂ ಇವೆಲ್ಲವೂ ಬೆಂಗಳೂರಿನ ನಾಗರಿಕ ಸೌಲಭ್ಯಗಳಿಗಾಗಿ ಕೆಲಸ ಮಾಡುವ ಸಂಸ್ಥೆಗಳೇ. ಆದರೆ, ಒಂದಕ್ಕೊಂದು ಸಂಬಂಧವೇ ಇಲ್ಲದಂತಿವೆ. ಈ ಎಲ್ಲ ಸಂಸ್ಥೆಗಳು ಬಿಬಿಎಂಪಿ ಛತ್ರದಡಿ ಬರಬೇಕು. ಆಗ ಇವರನ್ನು ಚುನಾಯಿತ ಪ್ರತಿನಿಧಿಗಳು ಪ್ರಶ್ನಿಸಬಹುದು’ ಎಂದು ಅವರು ಹೇಳುತ್ತಾರೆ. 

‘ಸಾರ್ವಜನಿಕ ಮಾಹಿತಿಯನ್ನು ಮರೆಮಾಚುವುದರಲ್ಲಿ ಅರ್ಥವಿಲ್ಲ. ಹಾಗೆ ನೋಡಿದರೆ ಆಡಳಿತ ವಿನ್ಯಾಸದಲ್ಲೇ ಲೋಪವಿದೆ. ಇದನ್ನು ಹಂತಹಂತವಾಗಿ ಸುಧಾರಿಸಬೇಕಿದೆ. ಇಡೀ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬೇಕು. ಹೊಸ ಯೋಜನೆಗಳು, ಅದಕ್ಕೆ ಮೀಸಲಿಟ್ಟ ಅನುದಾನ, ಕಾಮಗಾರಿ ಗುತ್ತಿಗೆದಾರರ ಹೆಸರು, ಕಾಲಮಿತಿ ವಿವರ ಎಲ್ಲವೂ ಪ್ರತಿ ನಾಗರಿಕನಿಗೂ ಗೊತ್ತಿರಬೇಕು’ ಎಂದು ಅವರು ವಿವರಿಸುತ್ತಾರೆ.

ಕಾಮಗಾರಿ ಆರಂಭ ಹಾಗೂ ಮುಕ್ತಾಯದ ದಿನಾಂಕ, ಗುತ್ತಿಗೆದಾರರ ವಿವರದ ಮಾಹಿತಿಯನ್ನು ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರದರ್ಶಿಸಬೇಕು ಎನ್ನುವ ನಿಯಮವಿದೆ. ಆದರೆ, ಬಹುತೇಕ ಕಡೆ ಅಂತಹ ಫಲಕಗಳನ್ನು ಹಾಕುವುದಿಲ್ಲ. ಈ ಮಾಹಿತಿ ಗೊತ್ತಾದರೆ ವಾರ್ಡ್‌ ಸಮಿತಿ ಸದಸ್ಯರು ನೇರವಾಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ. ಆದರೆ, ಮಾಹಿತಿಯನ್ನು ಮುಚ್ಚಿಡಲಾಗುತ್ತದೆಯಲ್ಲ ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂನ ಪ್ರತಿನಿಧಿಗಳು ಪ್ರಶ್ನಿಸುತ್ತಾರೆ.

ಪಾಲಿಕೆ ಸಾಮಾನ್ಯ ಸಭೆಯನ್ನು ವೆಬ್‌ಕಾಸ್ಟಿಂಗ್‌ ಮಾಡಲಾಗುತ್ತದೆ. ಇದರಿಂದ ನಗರದ ಯಾವ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಚರ್ಚಿಸುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗುತ್ತದೆ. ಅದೇ ರೀತಿ ನಿರ್ಣಯಗಳ ಅನುಷ್ಠಾನವೂ ಸಾರ್ವಜನಿಕರಿಗೆ ಗೊತ್ತಾಗಬೇಕು. ಯಾವುದೇ ಕೆಲವು ನಿರ್ಣಯಗಳನ್ನು ಮಾತ್ರ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರೆ ಪ್ರಯೋಜನವಿಲ್ಲ. ಆಯಾ ವಾರ್ಡ್‌ಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳ ಮಾಹಿತಿ ಒಂದೆಡೆ ಲಭ್ಯವಾಗುವಂತಾದರೆ ಉತ್ತಮ ಎಂದು ಅವರು ಅಭಿಪ್ರಾಯಪಡುತ್ತಾರೆ. 

ವೆಬ್‌ಸೈಟ್‌ನಲ್ಲಿ ಮಾಹಿತಿ:

ಬಿಬಿಎಂಪಿಯ ಎಲ್ಲ ಮಾಹಿತಿ http:bbmp.gov.in ವೆಬ್‌ಸೈಟ್‌ನಲ್ಲಿದೆ. ಮೂರು ವರ್ಷಗಳಲ್ಲಿ ನಡೆಸಲಾದ ಕಾಮಗಾರಿ, ಅಂದಾಜು ವೆಚ್ಚ, ಅನುಷ್ಠಾನ, ಬಿಲ್‌ ಪಾವತಿ ವಿವರ ಎಲ್ಲವೂ ಅದರಲ್ಲಿದೆ ಎಂದು ಆಯುಕ್ತ ಎನ್. ಮಂಜುನಾಥ ಪ್ರಸಾದ್‌ ಪ್ರತಿಕ್ರಿಯಿಸುತ್ತಾರೆ. 

ಮೂರು ವರ್ಷಗಳಲ್ಲಿ ಪ್ರತಿ ವಾರ್ಡ್‌ನಿಂದ ಸಂಗ್ರಹಿಸಲಾದ ತೆರಿಗೆ, ಬಾಕಿ ಇರಿಸಿಕೊಂಡವರ ವಿವರ, ವಾರ್ಡ್‌ಗಳಲ್ಲಿ ನಡೆದ ಕಾಮಗಾರಿಗಳ ಮಾಹಿತಿಯನ್ನೂ ಹಾಕಲಾಗಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಪ್ರಯತ್ನದಲ್ಲಿದ್ದೇವೆ ಎಂದು ಅವರು ಹೇಳುತ್ತಾರೆ. 

ತೆರಿಗೆ ಬಾಕಿ ಘೋಷಣೆ ಒಳ್ಳೆಯ ಬೆಳವಣಿಗೆ

ಇತ್ತೀಚೆಗೆ ಬಿಬಿಎಂಪಿ ಆಯುಕ್ತರು ಆಯಾ ವಾರ್ಡ್‌ಗಳಲ್ಲಿ ತೆರಿಗೆ ಬಾಕಿ ಇರಿಸಿಕೊಂಡಿರುವವರ ಹೆಸರು ಮತ್ತು ಮೊತ್ತದ ಮಾಹಿತಿ ಬಹಿರಂಗಪಡಿಸಿರುವುದು ಮಹತ್ವದ ಬೆಳವಣಿಗೆ. ಇದು ನಿರಂತರವಾಗಿ ಆಗಬೇಕು. ಇಂಥ ಮಾಹಿತಿಗಳು ಆಯಾ ವಾರ್ಡ್‌ಗಳಿಗೆ ತಲುಪಿ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ವಾರ್ಡ್ ಸಮಿತಿ ಬಲವರ್ಧನೆಯೇ ಇದಕ್ಕೆಲ್ಲಾ ಪರಿಹಾರ ಎಂದು ಸಿಎಫ್‌ಬಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.    

ಸಂವಾದ ಇಂದು

ವಾರ್ಡ್‌ ಸಮಿತಿಗಳ ಬಲವರ್ಧನೆ ಕುರಿತು ‘ಪ್ರಜಾವಾಣಿ’ ಹಾಗೂ ವಿವಿಧ ನಾಗರಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ‘ದಿ ಚಾನ್ಸರಿ ಪೆವಿಲಿಯನ್‌’ ಹೋಟೆಲ್‌ನಲ್ಲಿ ಇದೇ 16ರಂದು ಸಂಜೆ 4.30ರಿಂದ ಸಂವಾದ ಏರ್ಪಡಿಸಲಾಗಿದೆ. ಆಸಕ್ತರು ಆನ್‌ಲೈನ್‌ನಲ್ಲಿ (https://www.deccanherald.com/ward-committees-event) ನೋಂದಣಿ ಮಾಡಿಸಿಕೊಳ್ಳಬಹುದು.

***

ಪಾಲಿಕೆಯ ಎಲ್ಲ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಮುಕ್ತವಾಗಿವೆ. ಈ ಮಾಹಿತಿ ಇದ್ದರೆ ಮಾತ್ರ ವಾರ್ಡ್ ಸಮಿತಿಯಲ್ಲಿ ಚರ್ಚಿಸಬಹುದು. ಈ ವಿಷಯದಲ್ಲಿ ಶೇ 100ರಷ್ಟು ಪಾರದರ್ಶಕತೆ ತರಲು ಬದ್ಧ.

– ಎನ್‌. ಮಂಜುನಾಥ್‌ ಪ್ರಸಾದ್‌, ಆಯುಕ್ತ ಬಿಬಿಎಂಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !