ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಮಾನಕ್ಕೆ ಇದೆ ‘ನಮ್ಮನೆ’; ಇಲ್ಲಿನ ಚರ್ಚೆ ಸುಮ್ಮನೆ!

ಮೂಲಸೌಕರ್ಯ: ಕಾರ್ಪೊರೇಟರ್‌ ಏಕಪಕ್ಷೀಯ ನಿರ್ಧಾರವೋ? ಸಮಿತಿ ಸದಸ್ಯರ ಒಮ್ಮತದ ತೀರ್ಮಾನವೋ?
Last Updated 13 ಫೆಬ್ರುವರಿ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ವಾರ್ಡ್‌ನಲ್ಲಿ ಯಾವ ಮೂಲಸೌಕರ್ಯ ಕಲ್ಪಿಸಬೇಕು ಎಂಬ ಕಾಮಗಾರಿ ಪಟ್ಟಿ ತಯಾರಿಸುವುದು, ಅವುಗಳಿಗೆ ಅನುದಾನ ಹಂಚಿಕೆ ಮಾಡುವಾಗ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ನಿರ್ಧಾರ ಆಗಬೇಕಿರುವುದು ವಾರ್ಡ್‌ ಸಮಿತಿಯಲ್ಲಿ. ಆದರೆ ವಾಸ್ತವದಲ್ಲಿ ಈ ರೀತಿ ಆಗುತ್ತಿದೆಯೇ?

‘ಖಂಡಿತಾ ಇಲ್ಲ’ ಎಂದು ಹೇಳುತ್ತಾರೆ ವಾರ್ಡ್‌ ಸಮಿತಿಗಳನ್ನು ಬಲಪಡಿಸುವ ಹೋರಾಟದಲ್ಲಿ ತೊಡಗಿರುವ ಸಾಮಾಜಿಕ ಕಾರ್ಯಕರ್ತರು. ಕೆಲವು ಕಡೆ ವಾರ್ಡ್‌ ಸಮಿತಿ ಅಧ್ಯಕ್ಷರು ಸಮಿತಿಯ ಮುಂದೆ ಕಾಮಗಾರಿ ಪಟ್ಟಿಯನ್ನು ನೆಪ ಮಾತ್ರಕ್ಕೆ ಮಂಡಿಸುತ್ತಾರೆ. ಆದರೆ, ಈ ಕುರಿತ ತೀರ್ಮಾನಗಳನ್ನು ಬಹುಮತದ ಆಧಾರದಲ್ಲಿ ಕೈಗೊಳ್ಳುತ್ತಿಲ್ಲ. ಎಲ್ಲವೂ ಪಾಲಿಕೆ ಸದಸ್ಯರ ತೀರ್ಮಾನವೇ ಆಗಿರುತ್ತದೆ ಎಂಬುದು ಹೋರಾಟಗಾರರ ದೂರು.

‘ಅಧಿಕಾರ ವಿಕೇಂದ್ರೀಕರಣ ನಿಜವಾದ ಅರ್ಥದಲ್ಲಿ ಸಾಕಾರಗೊಳ್ಳಬೇಕಾದರೆ ಮೂಲಸೌಕರ್ಯ ನಿರ್ಧಾರದಲ್ಲೂ ಜನರ ಪಾಲ್ಗೊಳ್ಳುವಿಕೆ ಹೆಚ್ಚಬೇಕು. ವಾರ್ಡ್‌ ಸಮಿತಿಗೆ ತಮ್ಮ ಪರಿಸರದಲ್ಲಿ ಇಂತಹದ್ದೊಂದು ಕಾಮಗಾರಿಯ ಅಗತ್ಯ ಇದೆ ಎಂದು ಜನ ಬೇಡಿಕೆ ಸಲ್ಲಿಸಬೇಕು. ಅದರ ಬಗ್ಗೆ ಸಮಿತಿ ಸಭೆಗಳಲ್ಲಿ ಚರ್ಚಿಸಿ ಬಳಿಕ ತೀರ್ಮಾನ ಕೈಗೊಳ್ಳಬೇಕು. ಆದರೆ, ಹಾಗಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಈ ವರ್ಷ ತಮ್ಮ ವಾರ್ಡ್‌ಗೆ ಎಷ್ಟು ಅನುದಾನ ಹಂಚಿಕೆ ಅಗಿದೆ ಎಂಬುದು ಜನರಿಗೆ ಬಿಡಿ, ಸಮಿತಿ ಸದಸ್ಯರಿಗೂ ಗೊತ್ತಿರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಅವರು ಕಾಮಗಾರಿಗಳ ಕುರಿತು ತೀರ್ಮಾನ ಕೈಗೊಳ್ಳುವುದಾದರೂ ಹೇಗೆ’ ಎಂಬುದು ಅವರ ಪ್ರಶ್ನೆ.

‘ಬೇರೆ ವಾರ್ಡ್‌ಗಳಿಗೆ ಹೋಲಿಸಿದರೆ ನಮ್ಮ ವಾರ್ಡ್‌ ಸಮಿತಿ ಸಾಕಷ್ಟು ಮುಂಚೂಣಿಯಲ್ಲಿದೆ. ನಮ್ಮ ವಾರ್ಡ್‌ನಲ್ಲಿ ಸಮಿತಿ ಸಭೆ ಪ್ರತಿ ತಿಂಗಳೂ ನಡೆಯುತ್ತದೆ. ಆದರೆ, ಕಾಮಗಾರಿ ಪಟ್ಟಿಯ ಬಗ್ಗೆ ಸಮಿತಿ ಸಭೆಯಲ್ಲೇ ಒಮ್ಮತದ ತೀರ್ಮಾನ ಕೈಗೊಳ್ಳುವಷ್ಟರ ಮಟ್ಟಿಗೆ ವ್ಯವಸ್ಥೆ ಸುಧಾರಣೆ ಆಗಿಲ್ಲ’ ಎನ್ನುತ್ತಾರೆ ಹಗದೂರು ವಾರ್ಡ್‌ನ ನಿವಾಸಿ ಶ್ರೀನಿವಾಸ ರೆಡ್ಡಿ.

‘ಬಹುತೇಕ ಸಲ ಪಾಲಿಕೆ ಸದಸ್ಯರ ತೀರ್ಮಾನದಂತೆಯೇ ಕಾಮಗಾರಿಗಳನ್ನು ನಡೆಸಲಾಗುತ್ತದೆ. ಅದರಲ್ಲಿ ಸಮಿತಿ ಸದಸ್ಯರ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿಲ್ಲ’ ಎಂದರು.

‘ಪಾಲಿಕೆ ಸದಸ್ಯರಿಗೆ ವಾರ್ಡ್‌ನ ಸಮಗ್ರ ಚಿತ್ರಣ ತಿಳಿದಿರುತ್ತದೆ. ಅವರು ಜನರ ಸಮಸ್ಯೆಗಳ ಬಗ್ಗೆ ಸಮಿತಿಯ ಸದಸ್ಯರಿಗಿಂತ ಹೆಚ್ಚು ತಿಳಿವಳಿಕೆ ಹೊಂದಿರುತ್ತಾರೆ. ಸಮಿತಿ ಸದಸ್ಯರು ತಾವು ವಾಸಿಸುವ ಪ್ರದೇಶದ ಬಗ್ಗೆ ಪಕ್ಷಪಾತಿಗಳಾದರೆ ಕಾಮಗಾರಿ ಆಯ್ಕೆಯಲ್ಲಿ ಬಿಕ್ಕಟ್ಟು ಎದುರಾಗುವ ಸಾಧ್ಯತೆಯೂ ಇರುತ್ತದೆ. ಒಮ್ಮತದ ತೀರ್ಮಾನ ಕಷ್ಟ ಸಾಧ್ಯ. ಹಾಗಾಗಿ ಯಾವ ಕಾಮಗಾರಿಗೆ ಆದ್ಯತೆ ನೀಡಬೇಕು ಎಂಬುದನ್ನು ಪಾಲಿಕೆ ಸದಸ್ಯರೇ ತೀರ್ಮಾನಿಸಿದರೆ ಹೆಚ್ಚು ಸೂಕ್ತ’ ಎನ್ನುತ್ತಾರೆ ಬಾಗಲುಕುಂಟೆ ವಾರ್ಡ್‌ನ ಸದಸ್ಯ ಕೆ.ನರಸಿಂಹ ನಾಯಕ್‌.

ಪರಿಸರ ಕಾರ್ಯಕರ್ತರಾದ ಮಹಾಲಕ್ಷ್ಮೀ ಪಾರ್ಥಸಾರಥಿ ಅವರು ಇದನ್ನು ಒಪ್ಪುವುದಿಲ್ಲ.

‘ಸಮಿತಿ ಸಭೆಗಳಲ್ಲಿ ಸಾರ್ವಜನಿಕರು ಭಾವಗಹಿಸುವುದಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು. ಸಭೆಯ ನಡಾವಳಿಯ ವಿಡಿಯೊ ಚಿತ್ರೀಕರಣ ಮಾಡಿ ಅದು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂಬ ನಿಯಮವಿದೆ. ಈ ಎಲ್ಲ ಪ್ರಕ್ರಿಯೆಗಳು ಸಭೆಯ ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ. ನಿಯಮ ಪ್ರಕಾರವೇ ಸಭೆಗಳನ್ನು ನಡೆಸಿದರೆ ಅಲ್ಲಿ ಬಿಕ್ಕಟ್ಟು ಸೃಷ್ಟಿಯಾಗುವುದಕ್ಕೆ ಆಸ್ಪದವೇ ಇರುವುದಿಲ್ಲ’ ಎಂದರು.

‘ಕಾಮಗಾರಿ ಆಯ್ಕೆಯನ್ನು ಪಾಲಿಕೆ ಸದಸ್ಯರ ವಿವೇಚನೆಗೆ ಬಿಟ್ಟರೆ ಅವರು ತಮಗೆ ಮತ ಹಾಕಿದವರ ಬಗ್ಗೆ ಪಕ್ಷಪಾತ ನಡೆಸುವ ಸಾಧ್ಯತೆ ಹೆಚ್ಚು’ ಎಂದು ಅವರು ಅಭಿಪ್ರಾಯಪಟ್ಟರು.

‘ವಾರ್ಡ್‌ ಸಮಿತಿಗಳು ಸಾಗಬೇಕಾದ ಹಾದಿ ಬಹಳಷ್ಟಿದೆ. ಅವುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈಗ ಅಂಬೆಗಾಲಿಡುತ್ತಿದ್ದೇವೆ ಅಷ್ಟೇ. ಕ್ರಮೇಣ ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಲಿದೆ. ಆಗ ತನ್ನಿಂದ ತಾನೆ ಈ ಸಮಿತಿಗಳು ಹೆಚ್ಚು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸಲಿವೆ’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರಿನ ಸಹಸಂಸ್ಥಾಪಕ ಶ್ರೀನಿವಾಸ ಅಲವಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

16ರಂದು ಸಂವಾದ

ವಾರ್ಡ್‌ ಸಮಿತಿಗಳ ಬಲವರ್ಧನೆ ಕುರಿತು ‘ಪ್ರಜಾವಾಣಿ’ ಹಾಗೂ ವಿವಿಧ ನಾಗರಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ‘ದಿ ಚಾನ್ಸರಿ ಪೆವಿಲಿಯನ್‌’ ಹೋಟೆಲ್‌ನಲ್ಲಿ ಇದೇ 16ರಂದು ಸಂಜೆ 4.30ರಿಂದ ಸಂವಾದ ಏರ್ಪಡಿಸಲಾಗಿದೆ. ಆಸಕ್ತರು ಆನ್‌ಲೈನ್‌ನಲ್ಲಿ (https://www.deccanherald.com/ward-committees-event) ನೋಂದಣಿ ಮಾಡಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT