ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದರೂ ನೆಲತೊಟ್ಟಿ; ರಸ್ತೆಗೇ ಕಸ ಗಟ್ಟಿ!

ನಿತ್ಯ ಸಂಗ್ರಹದ ಗುರಿ 296 ಟನ್‌; ಸದ್ಯ ಶೇಖರಣೆ ಆಗುತ್ತಿರುವುದು ಬರೀ 80 ಟನ್‌
Last Updated 22 ಏಪ್ರಿಲ್ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ 200 ಕಡೆಗಳಲ್ಲಿ ನಿರ್ಮಿಸಿರುವ ನೆಲದ ತೊಟ್ಟಿಗಳಿಂದ ನಿತ್ಯ 296 ಟನ್‌ ತ್ಯಾಜ್ಯ ಸಂಗ್ರಹವಾಗಬೇಕು. ಆದರೆ, ವಾಸ್ತವದಲ್ಲಿ ಸಂಗ್ರಹವಾಗುತ್ತಿರುವುದು 80 ಟನ್‌ ಕಸ ಮಾತ್ರ.

ಕಸ ಸುರಿಯುವ ಸ್ಥಳಗಳಿಗೆ (ಬ್ಲ್ಯಾಕ್ ಸ್ಪಾಟ್‌) ಕಡಿವಾಣ ಹಾಕಲು ನಗರೋತ್ಥಾನ ಯೋಜನೆಯಡಿ ಪಾಲಿಕೆಯು ಒಣ, ಹಸಿ ಮತ್ತು ಸ್ಯಾನಿಟರಿ ತ್ಯಾಜ್ಯಗಳ ಸಂಗ್ರಹಕ್ಕೆ ‘ನೆಲದ ತೊಟ್ಟಿ’ಗಳನ್ನು (ಅರ್ಧಭಾಗ ನೆಲದಡಿ ಇದ್ದರೆ, ಇನ್ನರ್ಧ ನೆಲದ ಮೇಲೆ ಇರುತ್ತವೆ) ನಿರ್ಮಿಸಿದೆ. ಒಣ ಕಸ, ಹಸಿ ಕಸ ಹಾಗೂ ಸ್ಯಾನಿಟರಿ ಕಸ ಸಂಗ್ರಹಕ್ಕೆ ತಲಾ 200ರಂತೆ ಒಟ್ಟಾರೆ 600 ತೊಟ್ಟಿಗಳಿವೆ. ಟೆಂಡರ್ ಶ್ಯೂರ್ ರಸ್ತೆ, ವಾಣಿಜ್ಯ ಪ್ರದೇಶ, ಸಾರ್ವಜನಿಕ ಸ್ಥಳ ಸೇರಿದಂತೆ ನಗರದ ಪ್ರಮುಖ ಕಡೆಗಳಲ್ಲಿ ಇಂತಹ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ, ಸಾರ್ವಜನಿಕರು ಈ ತೊಟ್ಟಿಗಳ ಬಳಕೆಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ.

ಈ ತೊಟ್ಟಿಗಳಿಂದ ವಾರಕ್ಕೆ 2,072 ಟನ್, ತಿಂಗಳಿಗೆ 8,288 ಟನ್‌ ಕಸ ಸಂಗ್ರಹ ಮಾಡಬೇಕಿತ್ತು. ಸದ್ಯಕ್ಕೆ ತಿಂಗಳಲ್ಲಿ ಉತ್ಪತ್ತಿ ಆ‌ಗುತ್ತಿರುವುದು 2,400 ಟನ್‌ ಮಾತ್ರ.

ಈ ತೊಟ್ಟಿಗಳಿಂದಾಗಿ ನಗರದ ಸೌಂದರ್ಯ ಕೂಡ ಹಾಳಾಗುತ್ತಿದೆ. ಕೆಲವೆಡೆ ತೊಟ್ಟಿಗಳು ಸ್ವಚ್ಛವಾಗಿ‌ದ್ದರೆ, ಹಲವೆಡೆ ತೊಟ್ಟಿ ಭರ್ತಿಯಾಗಿ ಕಸ ಹೊರಕ್ಕೆ ಚೆಲ್ಲಿ, ಸುತ್ತಲೂ ಹರಡಿರುತ್ತದೆ. ಈ ಪರಿಸರದಲ್ಲಿ ಗಬ್ಬುನಾತ ಬರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಣಿಜ್ಯ ಪ್ರದೇಶಗಳಲ್ಲಿರುವ ತೊಟ್ಟಿಗಳ ಬಳಿಯೇ ಕೆಲವರು ಕಸವಿರುವ ಪ್ಲಾಸ್ಟಿಕ್ ಚೀಲಗಳನ್ನು ತಂದಿಡುತ್ತಿದ್ದಾರೆ. ಮತ್ತೆ ಕೆಲವರು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುತ್ತಿಲ್ಲ. ಇದು ಪೌರಕಾರ್ಮಿಕರಿಗೂ ಸಮಸ್ಯೆ ತಂದೊಡ್ಡುತ್ತಿದೆ.

ಸಾರ್ವಜನಿಕರು ಖಾಲಿ ಜಾಗಗಳಲ್ಲಿ ಅಥವಾ ರಸ್ತೆಯ ಇಕ್ಕೆಲಗಳಲ್ಲಿ ಕಸ ಸುರಿದು ರಾಶಿ ಮಾಡುತ್ತಾರೆ. ಬೆಳಿಗ್ಗೆ 6ರೊಳಗೆ ಮತ್ತು ರಾತ್ರಿ 10 ಗಂಟೆಯ ನಂತರ ಕಸವನ್ನು ಇಲ್ಲಿ ತಂದು ಬಿಸಾಡುತ್ತಿದ್ದಾರೆ. ಬೀಡಾಡಿ ದನಗಳು ಕಸದ ರಾಶಿಯನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ.

ಸಾರ್ವಜನಿಕ ಪ್ರದೇಶದಲ್ಲಿ ಕಸವನ್ನು ಸುಡುವಂತಿಲ್ಲ. ಸರ್ಕಾರದ ಆದೇಶ ಉಲ್ಲಂಘಿಸಿ ಬೆಂಕಿ ಹಚ್ಚಿದರೆ ₹ 5 ಲಕ್ಷ ದಂಡ ತೆರಬೇಕು. ಜೈಲು ಶಿಕ್ಷೆ ವಿಧಿಸಲೂ ಕಾನೂನಿನಲ್ಲಿ ಅವಕಾಶವಿದೆ. ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಸಾರ್ವಜನಿಕರು ರಾತ್ರೋರಾತ್ರಿ ಕಸಕ್ಕೆ ಬೆಂಕಿ ಹಚ್ಚುತ್ತಾರೆ.

‘ಜನರಿಂದ ಸಹಕಾರ ಸಿಗದ ಕಾರಣ ನೆಲದ ತೊಟ್ಟಿ ಬಳಕೆಯ ಆಶಯ ಈಡೇರಿಲ್ಲ. ಕಸವನ್ನು ತೊಟ್ಟಿಗೆ ಸುರಿಯದೆ ರಸ್ತೆಯ ಪಕ್ಕ ಅಥವಾ ಖಾಲಿ ಜಾಗದಲ್ಲಿ ಸುರಿಯುತ್ತಾರೆ. ಕಸಮುಕ್ತ ನಗರವನ್ನಾಗಿಸಲು ಪಾಲಿಕೆಗೆ ಕಾಳಜಿ ಇದೆ. ಕಸ ಬಿಸಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದೇವೆ. ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಜಾಹೀರಾತು ಕೊಟ್ಟಿದ್ದೇವೆ. ಹೀಗಾದರೂ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಕಸದ ತೊಟ್ಟಿಗಳನ್ನು ನಿರ್ಮಿಸಲು 2017 ಆಗಸ್ಟ್‌ 30ರಂದು ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಪಡೆಯ
ಲಾಯಿತು. ಈ ಯೋಜನೆಗೆ 2018 ಜನವರಿ 16ರಂದು ಕಾರ್ಯಾದೇಶ ನೀಡಲಾಯಿತು. ತೊಟ್ಟಿಗಳ ನಿರ್ವಹಣೆಗೆ ಐದು ವರ್ಷಗಳ ಗುತ್ತಿಗೆ ಪಡೆದಿರುವ ಜೋಂಟಾ ಸಂಸ್ಥೆಯೇ ಕಸ ಸಂಗ್ರಹಣೆ ಮತ್ತು ಸಾಗಣೆಯ ಹೊಣೆ ಹೊತ್ತಿದೆ. ಸಂಗ್ರಹಿಸಿದ ಕಸವನ್ನು ಬೆಲ್ಲಹಳ್ಳಿ ಬಂಡೆ ಪ್ರದೇಶದಲ್ಲಿರುವ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುರಿಯುತ್ತಿದೆ.

ಸೆನ್ಸರ್ ಅಳವಡಿಸಿಲ್ಲ

ಕಸ ತುಂಬಿದ ಕೂಡಲೇ ಮಾಹಿತಿ ಸಿಗುವಂತಾಗಲು ನೆಲದ ತೊಟ್ಟಿಗಳಿಗೆ ಸೆನ್ಸರ್ (ಸಂವೇದಕ) ಅಳವಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಆದರೆ, ಗುತ್ತಿಗೆ ಪಡೆದ ಜೋಂಟಾ ಸಂಸ್ಥೆ ಈವರೆಗೂ ಯಾವೊಂದು ತೊಟ್ಟಿಗೂ ಸೆನ್ಸರ್‌ ಅಳವಡಿಸಿಲ್ಲ. ಸಂವೇದಕ ಅಳವಡಿಸಿದರೆ ತೊಟ್ಟಿಗಳು ಭರ್ತಿಯಾದ ತಕ್ಷಣವೇ ಸಂಬಂಧಪಟ್ಟವರಿಗೆ ಸಂದೇಶ ರವಾನೆಯಾಗುತ್ತದೆ. ಬಳಿಕ ಕ್ರೇನ್‌ ಸೌಲಭ್ಯ ಹೊಂದಿರುವ ಟ್ರಕ್ ಸ್ಥಳಕ್ಕೆ ಬಂದು ಕಸವನ್ನು ಸಂಗ್ರಹಿಸಲಿದೆ ಎಂದು ಬಿಬಿಎಂಪಿ ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌ ತಿಳಿಸಿದರು.

‘ಸೆನ್ಸರ್‌ ಅಳವಡಿಸುವಂತೆ ಈಗಾಗಲೇ ಸಂಸ್ಥೆಗೆ ಸೂಚಿಸಿದ್ದೇನೆ. ಕಸ ಸಂಗ್ರಹಣೆ ಕಡಿಮೆ ಆಗುತ್ತಿರುವ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT