ಉದ್ಯಾನಗಳಿಗೆ ಹನಿಸಲೂ ಇಲ್ಲ ನೀರು!

ಗುರುವಾರ , ಏಪ್ರಿಲ್ 25, 2019
33 °C

ಉದ್ಯಾನಗಳಿಗೆ ಹನಿಸಲೂ ಇಲ್ಲ ನೀರು!

Published:
Updated:
Prajavani

ಬೆಂಗಳೂರು: ರಾಜಧಾನಿಗೆ ‘ಉದ್ಯಾನ ನಗರಿ’ ಎಂಬ ವಿಶೇಷಣವನ್ನು ಅಂಟಿ ಸಲು ಕಾರಣವಾಗಿರುವ ಪಾರ್ಕ್‌ ಗಳೆಲ್ಲ ಒಂದೆಡೆ ಪ್ರಖರ ಬಿಸಿಲು ಹಾಗೂ ಇನ್ನೊಂದೆಡೆ ನೀರಿಲ್ಲದ ಪರಿಣಾಮ ‘ಬೆಂದು’ ಹೋಗುತ್ತಿವೆ.‌ 

ನಗರದಲ್ಲಿರುವ 1,419 ಉದ್ಯಾನಗಳಲ್ಲಿ 824 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅವುಗಳಲ್ಲಿ 117 ಬತ್ತಿ ಹೋಗಿವೆ. ಸದಾ ಹಚ್ಚಹಸಿರಿನಿಂದ ನಳನಳಿಸುತ್ತಿದ್ದ ಗಿಡಗಳು ನೀರಿಲ್ಲದೆ, ಸೊರಗುತ್ತಿವೆ.

ಬಿಸಿಲಿನ ಝಳ ಜೋರಾಗಿದ್ದು, ಉದ್ಯಾನಗಳಲ್ಲಿ ಹಸಿರು ಮಾಯವಾಗಿ, ಎತ್ತ ನೋಡಿದರೂ ಒಣಗಿದ ಹುಲ್ಲು, ಗಿಡಗಳ ದರ್ಶನವಾಗುತ್ತಿದೆ. ಜತೆಗೆ, ನಿರ್ವಹಣೆಗೆ ನೂರಾರು ಉದ್ಯಾನಗಳು ಸೊರಗಿವೆ. ಸ್ವಚ್ಛತೆ ಕೂಡ ಅಷ್ಟಕ್ಕಷ್ಟೇ. ನೀರನ್ನೇ ಕಾಣದೆ ಕಾರಂಜಿಗಳು  ತುಕ್ಕು ಹಿಡಿದಿದ್ದರೆ, ಮಕ್ಕಳಿಗೆ ಆಟವಾಡಲು ನಿರ್ಮಿಸಿರುವ ಉಪಕರಣಗಳು ಹಾಳಾ ಗಿವೆ. ದೀಪಗಳನ್ನೇ ಕಾಣದ ಕಂಬಗಳು, ಮುರಿದು ಹೋದ ಆಸನಗಳೇ ಜನರನ್ನು ಬರಮಾಡಿಕೊಳ್ಳುತ್ತವೆ.

ಪ್ರಮುಖ ಉದ್ಯಾನಗಳ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಪಾಲಿಕೆ ಕೋಟ್ಯಂತರ ರೂಪಾಯಿ ವ್ಯಯಿಸಿದೆ. ಆದರೆ, ಈ ಉದ್ಯಾನಗಳು ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎನ್ನುವುದು ನಾಗರಿಕರ ಅಳಲು. 

‘ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತದೆ ಎನ್ನುವುದು ಗೊತ್ತಿ ದ್ದರೂ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ. ಗಿಡ–ಬಳ್ಳಿ ಗಳು ಒಣಗುವುದನ್ನು ನೋಡಲು ಆಗುತ್ತಿಲ್ಲ’ ಎಂದು ಸಾರ್ವಜನಿಕರು ನೋವಿನಿಂದ ಹೇಳುತ್ತಾರೆ.

‘2018–19ರ ಪಾಲಿಕೆ ಬಜೆಟ್‌ನಲ್ಲಿ ಉದ್ಯಾನಗಳ ನಿರ್ವಹಣೆಗೆ ₹17 ಕೋಟಿ ನೀಡಲಾಗಿತ್ತು. ಕೆಟ್ಟು ನಿಂತಿರುವ ಬೋರ್‌ವೆಲ್‌ಗಳನ್ನು ಮತ್ತೆ ಸರಿಪಡಿಸುತ್ತಿದ್ದೇವೆ. ಕೆಲವು ಉದ್ಯಾನಗಳಲ್ಲಿ ಗಿಡಗಳು ಬಾಡದಂತೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದೇವೆ. ಉದ್ಯಾನಗಳ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟ್ಯಾಂಕರ್‌ ನೀರನ್ನೇ ಬಳಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸುತ್ತಾರೆ.

‘‌ಗಿಡಗಳಿಗೆ ಟ್ಯಾಂಕರ್‌ ನೀರು ಪೂರೈಸುವಾಗ, ಜನ ಅಲ್ಲಿಗೆ ಬಿಂದಿಗೆ ಗಳನ್ನು ತರುತ್ತಾರೆ. ಇದರಿಂದ ಗಿಡಗಳಿಗೆ ನೀರಿಲ್ಲದಂತೆ ಮಾಡುತ್ತಿದ್ದಾರೆ. ಇದನ್ನು ಮನಗಂಡು ಮಧ್ಯರಾತ್ರಿ ನೀರು ಪೂರೈಸುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

***

ಸಾರ್ವಜನಿಕರಿಗೆ ನೀರು ಒದಗಿಸುವುದು ಎಷ್ಟು ಮುಖ್ಯವೋ, ಗಿಡಗಳಿಗೆ ನೀರು ಪೂರೈಸುವುದು ಅಷ್ಟೇ ಮುಖ್ಯ
–ಗೋಪಾಲಕೃಷ್ಣ, ಸ್ಥಳೀಯ

ಬೇಸಿಗೆ ಮುನ್ಸೂಚನೆ ಗೊತ್ತಿದ್ದರೂ ಉದ್ಯಾನಗಳ ಕಾಪಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ
–ಆನಂದಕುಮಾರ್‌, ವಾಯುವಿಹಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !