ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳದಲ್ಲಿ ‘ಕೈ’ ಹಿಡಿದ ಅನುಕಂಪದ ಅಲೆ

Last Updated 23 ಮೇ 2019, 20:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಅವರ ಪತಿ ಸಿ.ಎಸ್‌. ಶಿವಳ್ಳಿ ಅವರ ನಿಧನದ ಅನುಕಂಪ ಗೆಲುವಿನ ದಡ ಸೇರಿಸಿದೆ. ಎಸ್‌.ಐ. ಚಿಕ್ಕನಗೌಡ್ರ ಅವರನ್ನು ಹ್ಯಾಟ್ರಿಕ್‌ ಸೋಲಿನತ್ತ ದೂಡುವ ಮೂಲಕ ಅವರ ರಾಜಕೀಯ ಭವಿಷ್ಯ ಮಸುಕುಗೊಳಿಸಿದೆ.

2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ದಿವಂಗತ ಸಿ.ಎಸ್‌. ಶಿವಳ್ಳಿ ಅವರು 64,871 ಮತಗಳನ್ನು ಪಡೆದಿದ್ದರು. ಈಗ ಕುಸುಮಾವತಿ ಶಿವಳ್ಳಿ ಅವರು ಅವರಿಗಿಂತ 12 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿರುವುದು ಅನುಕಂಪದ ಅಲೆಯನ್ನು ತೋರಿಸುತ್ತದೆ.

ಏಪ್ರಿಲ್‌ 23 ರಂದು ಲೋಕಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರು 75,580 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ವಿನಯ ಕುಲಕರ್ಣಿ ಅವರು 55,530 ಮತಗಳು ಬಿದ್ದಿವೆ. ಜೋಶಿ ಅವರಿಗೆ 20 ಸಾವಿರಕ್ಕೂ ಅಧಿಕ ಮುನ್ನಡೆ ದೊರೆತಿದೆ. ಆದರೆ ಆ ಲೀಡ್‌ ಅನುಕಂಪದ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

2018ರ ಚುನಾವಣೆಯಲ್ಲಿ 64,237 ಮತಗಳನ್ನು ಪಡೆದಿದ್ದ ಚಿಕ್ಕನಗೌಡ್ರ ಅವರು, ಉಪಚುನಾವಣೆಯಲ್ಲಿ ಮತ ಗಳಿಕೆಯನ್ನು 76,039ಕ್ಕೆ ಹೆಚ್ಚಿಸಿಕೊಂಡಿದ್ದಾರೆ. 12 ಸಾವಿರದಷ್ಟು ಹೆಚ್ಚು ಮತಗಳನ್ನು ಪಡೆದರೂ ಅವರಿಗೆ ಗೆಲುವು ದಕ್ಕಿಲ್ಲ.

ಅನುಕಂಪದ ಅಲೆಯ ಜೊತೆಗೆ ಉಸ್ತುವಾರಿಯನ್ನು ಸಚಿವ ಡಿ.ಕೆ. ಶಿವಕುಮಾರ್‌ಗೆ ವಹಿಸಿದ್ದು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸೇರಿದಂತೆ ಪಕ್ಷದ ಮುಖಂಡರು, ಸಚಿವರು, ಶಾಸಕರು ಪ್ರಚಾರ ಮಾಡಿದ್ದೂ ಫಲ ನೀಡಿದೆ ಎಂಬುದನ್ನು ಅಭ್ಯರ್ಥಿ ಕುಸುಮಾವತಿ ಅವರೇ ಒಪ್ಪಿಕೊಂಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಶ್ರೀರಾಮುಲು ಸೇರಿದಂತೆ ಹಲವು ನಾಯಕರು ತೀವ್ರ ಪ್ರಚಾರ ನಡೆಸಿದ್ದರು. ಪಕ್ಷದೊಳಗಿನ ಭಿನ್ನಮತ ಸ್ವಲ್ಪ ಕೈಕೊಟ್ಟಿದ್ದರೆ, ಚಿಕ್ಕನಗೌಡ್ರ ಅವರು ಒರಟು ಸ್ವಭಾವದವರು, ನೀರು ತಡೆಯುವ ಮೂಲಕ ದ್ವೇಷ ಸಾಧಿಸಿದ್ದಾರೆ ಎಂಬ ಆರೋಪಗಳು ಬಿಜೆಪಿ ಅಭ್ಯರ್ಥಿಗೆ ಮುಳುವಾಗಿವೆ.

ಲೋಕಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ಚಿಂಚೋಳಿ ಉಪ ಚುನಾವಣೆಯಲ್ಲಿಯೂ ಸೋಲಿನ ಕಹಿಯುಂಡಿದೆ. ಅದಕ್ಕೆ ಕುಂದಗೋಳದ ಗೆಲುವು ಮಾತ್ರ ಆಶಾಕಿರಣ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT