ಸೋಮವಾರ, ಆಗಸ್ಟ್ 19, 2019
21 °C
ವೀರಶೈವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

‘ಉತ್ತಮ ಸಂಸ್ಕಾರ: ಪೋಷಕರ ಹೊಣೆ’

Published:
Updated:
Prajavani

ರಾಜರಾಜೇಶ್ವರಿ ನಗರ: ‘ಬಸವಣ್ಣನವರ ಹಾದಿಯಲ್ಲಿ ಸಾಗಿದ ಶಿವಕುಮಾರ ಸ್ವಾಮೀಜಿಯವರಿಗೆ ಸಮ ಸಮಾಜದ ಕಲ್ಯಾಣವೇ ಧ್ಯೇಯವಾಗಿತ್ತು. ಎಲ್ಲರೂ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಿದ್ಧಗಂಗಾ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. 

ಹೇರೋಹಳ್ಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಕ್ಕಳು ಹೆಚ್ಚು ಅಂಕ ಪಡೆಯುವಂತೆ ಮಾಡಿದರೆ ಮಾತ್ರ ಸಾಲದು. ಅವರಲ್ಲಿ ಉತ್ತಮ ಸಂಸ್ಕಾರ, ಪ್ರೀತಿ ವಾತ್ಸಲ್ಯ, ಉನ್ನತ ಮೌಲ್ಯಗಳನ್ನು ಬೆಳೆಸುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದರು. 

ಬಿಬಿಎಂಪಿ ಸದಸ್ಯ ರಾಜಣ್ಣ, ‘ಮಾಗಡಿ ಮುಖ್ಯರಸ್ತೆಯಿಂದ ಹೇರೋಹಳ್ಳಿ ಮೂಲಕ ಹಾದುಹೋಗುವ 8ನೇ ಮೈಲಿಯ ನೆಲಗೆದರನಹಳ್ಳಿವರೆಗಿನ ರಸ್ತೆಗೆ ಶೀಘ್ರವಾಗಿ ‘ಡಾ.ಶಿವಕುಮಾರಸ್ವಾಮಿ ರಸ್ತೆ’ ಎಂದು ಹೆಸರಿಡಲಾಗುವುದು’ ಎಂದರು.

ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ‘ಬಸವಣ್ಣ ಮತ್ತು ಶಿವಕುಮಾರ ಶ್ರೀಗಳ ತತ್ವ ಆದರ್ಶಗಳನ್ನು ಮಠಾಧಿಪತಿಗಳು, ಗುರುಗಳು ಪ್ರಚುರಪಡಿಸಬೇಕು. ಆಗ ಮಾತ್ರ ಕ್ರಾಂತಿಯೋಗಿ ಬಸವಣ್ಣನವರ ಆದರ್ಶಗಳು ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶಕವಾಗಲಿವೆ’ ಎಂದರು.

ಮೇಯರ್ ಗಂಗಾಂಬಿಕೆ, ‘ಪ್ರತಿಭಾ ಪುರಸ್ಕಾರ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೀಮಿತವಾಗಿರಬಾರದು. ಬಸವಣ್ಣನವರ ಸಂದೇಶದಂತೆ ಎಲ್ಲ ಸಮುದಾಯದ ಪ್ರತಿಭಾವಂತ ಮಕ್ಕಳನ್ನೂ ಗುರುತಿಸಿ ಪುರಸ್ಕರಿಸಬೇಕು’ ಎಂದು ಸಲಹೆ ನೀಡಿದರು.

Post Comments (+)