ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನ ದಿಢೀರ್‌ ಏರಿಕೆ

ಶಿವರಾತ್ರಿ ಮುಗಿಯುತ್ತಿದ್ದಂತೆ ತಾಪ ತಾಳಲಾರದೆ ಶಿವ, ಶಿವ ಎನ್ನುತ್ತಿರುವ ಜನ
Last Updated 7 ಮಾರ್ಚ್ 2019, 18:52 IST
ಅಕ್ಷರ ಗಾತ್ರ

ಬೆಂಗಳೂರು: ಮಹಾ ಶಿವರಾತ್ರಿ ಮುಗಿಯುತ್ತಿದ್ದಂತೆ ರಾಜ್ಯದಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಏರಿಕೆಯಾಗಲಿದೆ.

ಬೆಂಗಳೂರಿನಲ್ಲಿ ಗುರುವಾರ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ಒಂದೇ ದಿನದಲ್ಲಿ 1 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಾಗಿದೆ.

‘1996ರ ಮಾರ್ಚ್‌ನಲ್ಲಿ ಸರಾಸರಿ 37.3 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ಉಷ್ಣಾಂಶ ದಾಖಲಾಗಿತ್ತು. ಗುರುವಾರ ಆ ದಾಖಲೆ ಮುರಿಯುವ ಲಕ್ಷಣವಿತ್ತು. ಮುಂದಿನ ದಿನಗಳಲ್ಲಿ ಈ ದಾಖಲೆ ಮುರಿದರೂ ಆಶ್ಚರ್ಯವಿಲ್ಲ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘2018ರ ಮಾರ್ಚ್‌ನಲ್ಲಿ 36 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ಉಷ್ಣಾಂಶ ಇತ್ತು. ವಾಡಿಕೆಗಿಂತ ಈ ವರ್ಷ ಬಿಸಿಲಿನ ಪ್ರಮಾಣ ಜಾಸ್ತಿ ಆಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಮಾರ್ಚ್‌, ಏಪ್ರಿಲ್ ಹಾಗೂ ಮೇನಲ್ಲಿ ಬಿಸಿಲಿನ ಧಗೆ ಹೆಚ್ಚಿರಲಿದೆ. ರಾಜ್ಯದಾದ್ಯಂತ ರಾತ್ರಿ ವೇಳೆ ಸರಾಸರಿ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ.ಬಿಸಿಗಾಳಿ ಬೀಸಲಿದ್ದು, ರಾತ್ರಿ ವೇಳೆಯೂ ವಿಪರೀತ ಸೆಕೆಯನ್ನು ಅನುಭವಿಸಬೇಕಾಗುತ್ತದೆ’ ಎಂದು ತಿಳಿಸಿದರು.

ವಾಡಿಕೆಗಿಂತ ಹೆಚ್ಚಾದ ಉಷ್ಣಾಂಶ: ‘ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ರಾಜ್ಯದ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ಉಷ್ಣಾಂಶ ದಾಖಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಅದೇ ಸ್ಥಿತಿ ಕಂಡುಬಂದಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ 1ರಿಂದ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಮುಂದುವರಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT