ಶುಕ್ರವಾರ, ಸೆಪ್ಟೆಂಬರ್ 24, 2021
24 °C
'ಕುಂದಗೋಳಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು'

ಕ್ಷೇತ್ರ ಅಭಿವೃದ್ಧಿ ಕಂಡಿದ್ದು ನನ್ನ ಅವಧಿಯಲ್ಲಿ: ಜಗದೀಶ್ ಶೆಟ್ಟರ್ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದಲ್ಲಿ ನೀರಿಗೆ ಹಾಹಾಕಾರವಿದೆ ಎಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಮುಖಂಡರು, ಐದು ವರ್ಷದ ತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರಕ್ಕಾಗಿ ಏನು ಕೆಲಸ ಮಾಡಿದ್ದರು ಎಂಬುದನ್ನು ತಿಳಿಸಲಿ ಎಂದು ಶಾಸಕ ಜಗದೀಶ ಶೆಟ್ಟರ್ ಸವಾಲು ಹಾಕಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಕ್ಕನಗೌಡ್ರ ಅವರು ಶಾಸಕರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ₹ 2ರಿಂದ 3 ಕೋಟಿ ಅನುದಾನ ನೀಡಿದ್ದೆ. ಕುಂದಗೋಳದಲ್ಲಿ ಅಭಿವೃದ್ಧಿ ಆಗಿದ್ದೇ ನನ್ನ ಅವಧಿಯಲ್ಲಿ. ಅಧಿಕಾರವಿದ್ದಾಗ ಅಭಿವೃದ್ಧಿ ಕೆಲಸ ಮಾಡದವರು ಈಗ ಕ್ಷೇತ್ರವನ್ನು ದತ್ತು ಪಡೆಯುತ್ತೇನೆ ಎನ್ನುತ್ತಿದ್ದಾರೆ’ ಎಂದು ಸಚಿವ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು.

ಕಿಮ್ಸ್‌ಗೆ ಅನುದಾನ ನೀಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ಒಂದು ರೂಪಾಯಿಯನ್ನೂ ಸಹ ಅವರು ನೀಡಿಲ್ಲ. ಬೇಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ನಿಲ್ಲಿಸಲಿ. ಕಳಸಾ– ಬಂಡೂರಿ ಕಾಲುವೆ ನಿರ್ಮಾಣ ಭೂಮಿ ಪೂಜೆಗೆ ಬರದಿದ್ದ, ಕುಮಾರಸ್ವಾಮಿ ಅವರಿಗೆ ಆ ವಿಷಯದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ರಾಜ್ಯ ಸರ್ಕಾರ ಮಹದಾಯಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದೆ. ತೀರ್ಪಿನ ಅಧಿಸೂಚನೆ ಹೊರಡಿಸಬೇಕು ಎಂದರೆ ನಿಯೋಗ ಕರೆದೊಯ್ಯಲಿ. ಕೇಂದ್ರದ ವಿರುದ್ಧ ಟೀಕೆ ಮಾಡಿ ಜನರನ್ನು ತಪ್ಪು ದಾರಿಗೆಳೆಯುವುದು ಬೇಡ ಎಂದರು.

ಸಾಲ ಮನ್ನಾ ಯೋಜನೆಯ ಪ್ರಯೋಜನಾ ರೈತರಿಗೆ ಸಿಕ್ಕಿಲ್ಲ. ಹತ್ತಾರು ಷರತ್ತು ಹಾಕಿರುವ ಕಾರಣ ಅದರ ಲಾಭ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಪರಿಣಾಮ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಸಾಲಭಾದೆ ತಾಳಲಾರದೆ ಮೃತಪಟ್ಟ ಹರ್ಲಾಪುರದ ರೈತನ ಕುಟುಂಬಕ್ಕೆ ಕೊನೆಯ ಪಕ್ಷ ಸಾಂತ್ವನವನ್ನೂ ಮುಖ್ಯಮಂತ್ರಿ ಹೇಳಿಲ್ಲ ಎಂದು ಹೇಳಿದರು.

ಸಂಶಿ ನಿರಂತರ ವಿದ್ಯುತ್ ಏನಾಯ್ತು? ಡಿ.ಕೆ. ಶಿವಕುಮಾರ್ ಅವರು ಸಂಶಿಯಲ್ಲಿ ನಿರಂತರ ವಿದ್ಯುತ್ ಯೋಜನೆಗೆ ಚಾಲನೆ ನೀಡಿ ಭಾರಿ ಪ್ರಚಾರ ಪಡೆದಿದ್ದರು. ಆದರೆ ಅದು ಈ ವರೆಗೆ ಆರಂಭವಾಗಿಲ್ಲ ಎಂದು ಶೆಟ್ಟರ್ ಟೀಕಿಸಿದರು. ಮುಖಂಡರಾದ ಈರಣ್ಣ ಜಡಿ, ಹನುಮಂತಪ್ಪ ದೊಡ್ಡಮನಿ, ರವಿ ನಾಯಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು