ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈಟ್‌ ಟಾಪಿಂಗ್‌’: ಹೊಸ ಕಾಮಗಾರಿಗೆ ತಡೆ

ಯೋಜನೆಯ ಸಂಪೂರ್ಣ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಟ್ಟುನಿಟ್ಟಿನ ಆದೇಶ
Last Updated 14 ಆಗಸ್ಟ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ ಟಾಪಿಂಗ್‌ ಯೋಜನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವುದರ ಜತೆಗೆ, ಹೊಸದಾಗಿ ವೈಟ್‌ ಟಾಪಿಂಗ್‌ ಮಾಡದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ದಲ್ಲಿ ಬುಧವಾರ ನಡೆದ ಬೆಂಗಳೂರು ಅಭಿವೃದ್ಧಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು ಈ ನಿರ್ದೇಶನ ನೀಡಿದರು. ವೈಟ್‌ ಟಾಪಿಂಗ್‌ ಯೋಜನೆಯ ಹಿಂದೆ ಹಗರಣದ ವಾಸನೆ ಇದೆ ಎಂಬ ಸಂಶಯ ವ್ಯಕ್ತಪಡಿಸಿದ ಯಡಿಯೂರಪ್ಪ, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.

ಈ ಚಾಲ್ತಿಯಲ್ಲಿದ್ದು, ಅರ್ಧಂಬರ್ಧ ಆಗಿರುವ ಕೆಲಸಗಳನ್ನು ಪೂರ್ಣಗೊಳಿಸಬೇಕು. ಆದರೆ, ಹೊಸದಾಗಿ
ಆಡಳಿತಾತ್ಮಕ ಅನುಮೋದನೆ ನೀಡಿರುವ ಯಾವುದೇ ವೈಟ್‌ ಟಾಪಿಂಗ್‌ ಯೋಜನೆಯನ್ನೂ ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.

ವೈಟ್‌ಟಾಪಿಂಗ್‌ಗೆ ಪ್ರತಿ ಕಿ.ಮೀಗೆ ₹11 ಕೋಟಿ ವೆಚ್ಚ ಮಾಡಲಾಗಿದೆ. ಯಾವ ಆಧಾರದ ಮೇಲೆ ಇಷ್ಟು ಹಣ ನಿಗದಿ ಮಾಡಲಾಗಿದೆ. ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ರಸ್ತೆ ನಿರ್ಮಿಸಲು ಸಾಧ್ಯವಿರುವಾಗ. ವೈಟ್‌ಟಾಪಿಂಗ್‌ ಯಾರ ಅನುಕೂಲಕ್ಕಾಗಿ ಮಾಡಲಾಗಿದೆ. ಇವೆಲ್ಲ ವಿಚಾರಗಳ ಬಗ್ಗೆ ತನಿಖೆ ಆಗಬೇಕು. ಅಧಿಕಾರಿಗಳಿರಲಿ, ಬೇರೆ ಯಾರೇ ಇರಲಿ ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಖಡಕ್‌ ಮಾತುಗಳಲ್ಲಿ ಹೇಳಿದರು.

ಈ ಯೋಜನೆಯಿಂದ ನಗರಕ್ಕೆ ಒಳಿತಾಗುವುದಕ್ಕಿಂತ ಕೆಡುಕೇ ಹೆಚ್ಚು. ಮಳೆ ಬಂದ ಸಂದರ್ಭದಲ್ಲಿ ನೀರು ಹರಿದು ಹೋಗಲು ಮತ್ತು ಇಂಗಲು ಸಮಸ್ಯೆ ಎದುರಾಗುತ್ತದೆ. ಒಮ್ಮೆ ವೈಟ್‌ಟಾಪಿಂಗ್‌ ಮಾಡಿದರೆ, ಮುಂದೆ ಯಾವುದೇ ಬದಲಾವಣೆ ಮಾಡಲು ಸಾಧ್ಯವೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ವೈಟ್‌ ಟಾಪಿಂಗ್‌ ದೊಡ್ಡ ಹಗರಣ: ವೈಟ್‌ ಟಾಪಿಂಗ್‌ನಲ್ಲಿ ಅತ್ಯಂತ ಕಳಪೆ ಕಾಮಗಾರಿ ನಡೆದಿದೆ. ಅಗತ್ಯ ಇಲ್ಲದ ಕಡೆಗಳಲ್ಲಿ ವೈಟ್‌ ಟಾಪಿಂಗ್‌ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಆರ್‌.ಅಶೋಕ್‌ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ವೈಟ್‌ ಟಾಪಿಂಗ್‌ ಹೆದ್ದಾರಿಗಳಲ್ಲಿ ಪ್ರತಿ ಕಿ.ಮೀಗೆ ಆಗುತ್ತಿರುವ ವೆಚ್ಚಕ್ಕಿಂತಲೂ ಹೆಚ್ಚು ಹಣ ನಗರದಲ್ಲಿ ವ್ಯಯ ಮಾಡಲಾಗುತ್ತಿದೆ. ಆದರೆ, ಗುಣಮಟ್ಟವಿಲ್ಲ. ಈ ಸಂಬಂಧ ನಗರದ ಶಾಸಕರು ದೂರು ನೀಡಿದ್ದೇವೆ. ವೇಗವಾಗಿ ಕಾಮಗಾರಿ ಮುಗಿಸಿ ಅಷ್ಟೇ ವೇಗವಾಗಿ ಬಿಲ್‌ ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಅಶೋಕ್‌ ದೂರಿದರು.

ವೈಟ್‌ ಟಾಪಿಂಗ್‌ ಕಪ್ಪು ಕಥೆ

‘ವೈಟ್‌ ಟಾಪಿಂಗ್‌ ಯೋಜನೆ ಎಂಬ ಬಿಳಿಯಾನೆ’ ಹೆಸರಿನಲ್ಲಿ ವೈಟ್‌ ಟಾಪಿಂಗ್‌ ಹಿಂದಿನ ಕಥೆಯನ್ನು ಮೊದಲಿಗೆ ಅನಾವರಣಗೊಳಿಸಿದ್ದೇ ‘ಪ್ರಜಾವಾಣಿ’. ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿತ್ತು.

ಬೆಂಗಳೂರು ನಗರದಲ್ಲಿ ಟಾರು ರಸ್ತೆಯ ಮೇಲೆ ಕಾಂಕ್ರಿಟ್‌ ಹೊದಿಕೆ ನಿರ್ಮಾಣಕ್ಕೆ ವೈಟ್‌ ಟಾಪಿಂಗ್‌ ಎಂದು ಕರೆಯಲಾಗುತ್ತದೆ. ಈ ಯೋಜನೆ ಬೊಕ್ಕಸಕ್ಕೆ ಅನಗತ್ಯ ಹೊರೆ ಆಗಿರುವುದು ಮಾತ್ರವಲ್ಲದೆ, ಪರಿಸರ ಮತ್ತು ನಗರಕ್ಕೆ ಪೂರಕವಾಗಿಲ್ಲ ಎಂದು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವೈಟ್‌ ಟಾಪಿಂಗ್‌ಗೆ ಚಾಲನೆ ನೀಡಲಾಯಿತು. ಬಳಿಕ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವೂ ಅದನ್ನು ಮುಂದುವರಿಸಿತು. ನಗರದ ಪ್ರಮುಖ ರಸ್ತೆಗಳಲ್ಲದೇ ಸಣ್ಣ –ಪುಟ್ಟ ಗಲ್ಲಿ ರಸ್ತೆಗಳಿಗೂ ವೈಟ್‌ ಟಾಪಿಂಗ್‌ ಮಾಡಿರುವುದು ಬಹಳಷ್ಟು ಸಮಸ್ಯೆಗೆ ಕಾರಣವಾಗಿದೆ.

ನಗರದ ಅಭಿವೃದ್ಧಿಗೆ ಪ್ರತ್ಯೇಕ ಯೋಜನಾ ಪ್ರಾಧಿಕಾರ

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ಬೆಂಗಳೂರು ಅಭಿವೃದ್ಧಿ ಕುರಿತ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಬ್-ಅರ್ಬನ್ ರೈಲು ವ್ಯವಸ್ಥೆ ಅಗತ್ಯವಿದೆ. ಹೊರವರ್ತುಲ ರಸ್ತೆಗೆ ಮತ್ತು ಪೆರಿಫೆರಲ್ ರಿಂಗ್ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಾಹನ ದಟ್ಟಣೆಯನ್ನು ಬಗೆಹರಿಸಲಾಗುವುದು ಹಾಗೂ ಉಪನಗರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.

ಕೊಳೆಗೇರಿ ನಿವಾಸಿಗಳಿಗಾಗಿ ಬಹುಮಹಡಿ ಕಟ್ಟಡಗಳಲ್ಲಿ ವಸತಿ ಕಲ್ಪಿಸುವ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನಿಸಲಾಗುವುದು ಎಂದರು.

‘ನಮ್ಮ ಮೆಟ್ರೊ’ ಯೋಜನೆಯ ಮಾರ್ಗವನ್ನು ತಾವರೆಕೆರೆ ಮತ್ತು ಮದ್ರಾಸ್ ರಸ್ತೆಯವರೆಗೆ ವಿಸ್ತರಿಸಿದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.

ನಗರದ ಕುಡಿಯುವ ನೀರಿನ ಸಮಸ್ಯೆಗೆ ಕೇವಲ ಕಾವೇರಿ ನದಿ ನೀರಿನ ಮೂಲವನ್ನು ಮಾತ್ರ ಅವಲಂಬಿಸದೇ ಈ ಹಿಂದೆ ರೂಪಿಸಿದ್ದ ‘ಶ್ರೀರಂಗ ಯೋಜನೆ’ಯಡಿ ಹೇಮಾವತಿ, ಮೇಕೆದಾಟು ಹಾಗೂ ಎತ್ತಿನಹೊಳೆಯಿಂದ ನೀರು ತರುವ ಪ್ರಸ್ತಾವನೆ ನನೆಗುದಿಗೆ ಬಿದ್ದಿದ್ದು, ಅದನ್ನು ಅನುಷ್ಠಾನಗೊಳಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT