ಭಾನುವಾರ, ಜೂನ್ 20, 2021
28 °C

ಚುನಾವಣೆ ಬಳಿಕ ಸಂಚಾರ ದುಸ್ತರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರವಾಸಿಗಳಿಗೆ ರಸ್ತೆಗಳಲ್ಲಿ ಆರಾಮವಾಗಿ ಸಂಚರಿಸುವ ಭಾಗ್ಯ ಮಾದರಿ ನೀತಿ ಸಂಹಿತೆ ಮುಗಿಯುವವರೆಗೆ ಮಾತ್ರ. ಚುನಾವಣೆಯ ಬಳಿಕ ವಿವಿಧ ಮೂಲ ಸೌಕರ್ಯಗಳಿಗಾಗಿ ರಸ್ತೆಗಳನ್ನು ಅಗೆಯಲಾಗುತ್ತದೆ. ಇದರ ಜೊತೆಗೆ ಮೇ ತಿಂಗಳ ಕೊನೆಯಲ್ಲಿ ಪೂರ್ವ ‌ಮುಂಗಾರು ಶುರು ಆಗುವುದರಿಂದ ಸಂಚಾರ ಇನ್ನೂ ಚಿಂತಾಜನಕವಾಗಲಿದೆ.

ಮೇ ಕೊನೆಯ ವಾರದಿಂದ ಬೆಸ್ಕಾಂ ಮತ್ತು ಬಿಬಿಎಂಪಿ ನಗರದ ವಿವಿಧ ಭಾಗಗಳಲ್ಲಿ ಮೂಲ ಸೌಕರ್ಯ ಕಾಮಗಾರಿ ಕೈಗೆತ್ತಿಕೊಳ್ಳಲಿವೆ. ಈ ಎರಡು ಸರ್ಕಾರಿ ಸಂಸ್ಥೆಗಳು ಈ ಮೊದಲು ಪ್ರತ್ಯೇಕವಾಗಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದವು. ಆದರೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದೆ. 

53 ಉಪವಿಭಾಗಗಳಲ್ಲಿ ಆಪ್ಟಿಕ್‌ ಪೈಬರ್‌ ಕೇಬಲ್‌ ಹಾಕಲು ಬೆಸ್ಕಾಂ ಫೆಬ್ರುವರಿಯಲ್ಲಿ ₹ 4,800 ಕೋಟಿ ವೆಚ್ಚದ ಟೆಂಡರ್‌ ಕರೆದಿತ್ತು. ಚುನಾವಣೆ ಬಳಿಕ ₹1,900 ಕೋಟಿ ವೆಚ್ಚದಲ್ಲಿ 19 ಉಪವಿಭಾಗಗಳಲ್ಲಿ ಆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅದು ನಿರ್ಧರಿಸಿದೆ.

ಬಿಬಿಎಂಪಿಯು ಸಹ ಟೆಂಡರ್‌ ಶ್ಯೂರ್‌ ಹಾಗೂ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಇದರ ಜೊತೆಗೆ ವಾರ್ಡ್‌ ಕೆಲಸಗಳನ್ನು ಅದು ಪ್ರಾರಂಭಿಸಲಿದೆ. 

‘ಕಾಮಗಾರಿಗೆ ಅನುಮೋದನೆ ಪಡೆದಿದ್ದರೂ, ಮಾದರಿ ನೀತಿ ಸಂಹಿತೆಯ ಕಾರಣ ಕೆಲಸ ಪ್ರಾರಂಭಿಸಲಾಗುತ್ತಿಲ್ಲ. ಚುನಾವಣೆ ಮುಗಿದ ತಕ್ಷಣ ಮೇ 27ರಿಂದ ಕಾಮಗಾರಿ ಪ್ರಾರಂಭಿಸುತ್ತೇವೆ. ಜನರಿಗೆ ತೊಂದರೆಯಾಗಬಾರದು ಎಂದು 2 ಹಂತಗಳಲ್ಲಿ ಕಾಮಗಾರಿಯನ್ನು ನಡೆಸಲು ನಿರ್ಧರಿಸಿದ್ದೇವೆ’ ಎಂದು ಬೆಸ್ಕಾಂ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದಲ್ಲಿ ಎಚ್‌ಎಸ್‌ಆರ್‌ ಲೇಔಟ್‌, ಇಂದಿರಾನಗರ, ಬೆಂಗಿನ ಹಳ್ಳಿ, ಪೀಣ್ಯ, ಮಹಾಲಕ್ಷ್ಮೀ ಲೇಔಟ್‌ ಮಲ್ಲೇಶ್ವರ, ಸದಾಶಿವನಗರ ಮತ್ತು ವಿಜಯನಗರ ಸೇರಿದಂತೆ ವಿವಿಧ ಭಾಗದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಅವರು ಹೇಳಿದರು.

‘ಚುನಾವಣೆ ಬಳಿಕ ವೈಟ್ ಟಾಪಿಂಗ್‌ ಹಾಗೂ ಟೆಂಡರ್‌ ಶ್ಯೂರ್‌ ಕಾಮಗಾರಿಗಳು ಪ್ರಾರಂಭವಾಗಲಿವೆ. ಮಲ್ಲೇಶ್ವರ, ಪೀಣ್ಯ, ಶಿವಾಜಿನಗರ, ಚಾಮರಾಜ‍ಪೇಟೆ, ಲಿಂಗರಾಜಪುರ, ಯಲಹಂಕ ಮತ್ತು ಹೆಬ್ಬಾಳಗಳಲ್ಲಿ ವಾರ್ಡ್‌ ಕೆಲಸ 
ಪ್ರಾರಂಭಿಸಲಿದ್ದೇವೆ. ಶಿವಾನಂದ ವೃತ್ತ ಹಾಗೂ ಓಕಳಿಪುರದ ಸೇತುವೆ ನಿರ್ಮಾಣ ಕೆಲಸ ವೇಗ ಪಡೆಯಲಿದೆ. ಹೊಸ ಮೇಲ್ಸೇತುವೆ ನಿರ್ಮಾಣವನ್ನು ಪ್ರಾರಂಭಿಸುವ ಇರಾದೆ ಇದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು