ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಕುಟುಂಬದ ಅವಹೇಳನ ಏಕೆ? ದಿನೇಶ್ ಗುಂಡೂರಾವ್ ಪ್ರಶ್ನೆ

Last Updated 14 ನವೆಂಬರ್ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಅನಿವಾರ್ಯ ನೆಹರೂ ಅವರಿಗೆ ಇರಲಿಲ್ಲ. ಆದರೆ, ದೇಶಕ್ಕಾಗಿ ಅವರು ಹೋರಾಟಕ್ಕೆ ಇಳಿದರು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜವಾಹರಲಾಲ್ ನೆಹರೂ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ‘ದೇಶಕ್ಕಾಗಿ ಇಷ್ಟು ತ್ಯಾಗ ಮಾಡಿದ ಇನ್ನೊಂದು ಕುಟುಂಬ ಇಲ್ಲ. ಹೋರಾಡುವ ಅಗತ್ಯವೇ‌ ಇಲ್ಲದ ಸಂದರ್ಭದಲ್ಲಿ ಹೋರಾಡಿದ ಅವರನ್ನು ಅಧಿಕಾರದಲ್ಲಿರುವ ಸರ್ಕಾರ ತೆಗಳುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅನುಯಾಯಿಗಳು ನೆಹರೂ ಅವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡುತ್ತಿದ್ದಾರೆ’ ಎಂದರು.

‘ಬಿಜೆಪಿಗೆ ನಾಯಕರಿಲ್ಲ. ಆದ್ದರಿಂದ ಅವರು ವಲ್ಲಭಭಾಯಿ ಪಟೇಲ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ನೆಹರೂ ಜತೆ ಪಟೇಲ್‌ ಅವರಿಗೆ ಅಭಿಪ್ರಾಯ ವ್ಯತ್ಯಾಸ ಇತ್ತು. ಆದರೆ ಅವರ ನಡುವೆ ಆತ್ಮೀಯತೆಯೂ ಇತ್ತು. ಇಬ್ಬರೂ ಉನ್ನತ ನಾಯಕರಾಗಿದ್ದರು. ಆದರೆ, ಅಂಥವರನ್ನೇ ಬಿಜೆಪಿ ತಪ್ಪಾಗಿ ಅರ್ಥೈಸುತ್ತಿದೆ’ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ‘ಮೋದಿ ನೇತೃತ್ವದ ಸರ್ಕಾರ ಜಾತಿ, ಕೋಮಿನ ನಡುವೆ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಒಂದು ಸಮುದಾಯದ ಶ್ರೇಯಸ್ಸಿಗೆ ಮಾತ್ರ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT