ಪತ್ನಿ ಆತ್ಮಹತ್ಯೆ, ವಿಷ ಕುಡಿದ ಪತಿ

ಬುಧವಾರ, ಮಾರ್ಚ್ 27, 2019
26 °C

ಪತ್ನಿ ಆತ್ಮಹತ್ಯೆ, ವಿಷ ಕುಡಿದ ಪತಿ

Published:
Updated:
Prajavani

ಬೆಂಗಳೂರು: ಕೆ.ಆರ್.ಪುರದಲ್ಲಿ ರಂಜಿತಾ (24) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತಿ ಅಶೋಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮುಳಬಾಗಿಲಿನ ರಂಜಿತಾ ಅವರನ್ನು ಮೂರು ತಿಂಗಳ ಹಿಂದಷ್ಟೇ ಅಶೋಕ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿ, ಲಕ್ಷ್ಮಿಪುರ ಬಡಾವಣೆಯಲ್ಲಿ ವಾಸವಿದ್ದರು.

‘ಎಲ್ಲಿಯೂ ಕೆಲಸಕ್ಕೆ ಹೋಗದ ಅಶೋಕ, ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಅದರಿಂದ ಬೇಸತ್ತು ಮಗಳು ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಂದೆ ಕೃಷ್ಣಪ್ಪ, ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದಾರೆ.

ವಿಷ ಕುಡಿದು ತೀವ್ರ ಅಸ್ವಸ್ಥಗೊಂಡಿರುವ ಅಶೋಕ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಮೊಬೈಲ್‌ನಲ್ಲಿ ಮಾತನಾಡಿದ್ದ ದಂಪತಿ
‘ಸಂಬಂಧಿಕರೊಬ್ಬರ ಮದುವೆಗಾಗಿ ಅಶೋಕ, ಒಬ್ಬರೇ ಕೋಲಾರಕ್ಕೆ ಹೋಗಿದ್ದರು. ಅದರಿಂದ ರಂಜಿತಾ ನೊಂದಿದ್ದರು. ಅದೇ ವಿಷಯಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ತಡರಾತ್ರಿಯವರೆಗೂ ಅವರಿಬ್ಬರು ಮೊಬೈಲ್‌ನಲ್ಲೇ ಮಾತನಾಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಕೆ.ಆರ್.ಪುರ ಪೊಲೀಸರು ಹೇಳಿದರು.

‘ಕೋಲಾರದಲ್ಲೇ ಅಶೋಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಡರಾತ್ರಿಯೇ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿರುವುದಾಗಿ ವೈದ್ಯರು ಹೇಳಿದ್ದಾರೆ’ 

‘ಇತ್ತ, ರಂಜಿತಾ ಸಹ ಮನೆಯ ಕಿಟಕಿಯ ಸರಳುಗಳಿಗೆ ವೇಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ಬೆಳಿಗ್ಗೆ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಗಾಬರಿಗೊಂಡ ಅವರು, ಬೆಂಗಳೂರಿನಲ್ಲಿ ನೆಲೆಸಿದ್ದ ಸಹೋದರನಿಗೆ ಕರೆ ಮಾಡಿ ಮನೆ ಬಳಿ ಹೋಗಲು ಹೇಳಿದ್ದರು. ಅವರು ಮನೆ ಬಳಿ ಹೋಗಿ ನೋಡಿದಾಗಲೇ ಆತ್ಮಹತ್ಯೆ ವಿಷಯ ಗೊತ್ತಾಗಿದೆ’ ಎಂದರು.

‘ರಂಜಿತಾ ಆತ್ಮಹತ್ಯೆ ಮಾಡಿಕೊಳ್ಳಲು ಹಾಗೂ ಅಶೋಕ ವಿಷ ಕುಡಿಯಲು ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಅಶೋಕ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕವೇ ಹೇಳಿಕೆ ಪಡೆಯಲಾಗುವುದು’ ಎಂದು ಪೊಲೀಸರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !