‘ಉತ್ತರ’ದಲ್ಲಿ ಅರ್ಧಾಂಗಿಯರ ಮತಬೇಟೆ

ಶನಿವಾರ, ಏಪ್ರಿಲ್ 20, 2019
24 °C
ಕ್ಷೇತ್ರದಾದ್ಯಂತ ಸುತ್ತಾಡಿ ಮತಯಾಚನೆ l ಪ್ರಚಾರಕ್ಕೆ ರಂಗು ತಂದ ಡಾಟಿ– ಮೀನಾಕ್ಷಿ

‘ಉತ್ತರ’ದಲ್ಲಿ ಅರ್ಧಾಂಗಿಯರ ಮತಬೇಟೆ

Published:
Updated:
Prajavani

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸರಿಸಾಟಿಯಾಗಿ ಅವರ ಅರ್ಧಾಂಗಿಯರೂ ತಮ್ಮ ಪತಿಯ ಪರವಾಗಿ ಮತ ಬೇಟೆಗೆ ಇಳಿಯುವ ಮೂಲಕ ಪ್ರಚಾರಕ್ಕೆ ರಂಗು ತಂದಿದ್ದಾರೆ. 

ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಪರವಾಗಿ ಅವರ ಪತ್ನಿ ಡಾಟಿ ಸದಾನಂದಗೌಡ ಬಿರುಸಿನ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ಈ ಬಾರಿಯನ್ನು ಪತಿಯನ್ನು ಲೋಕಸಭೆಗೆ ಕಳುಹಿಸಲೇಬೇಕೆಂದು ಪಣ ತೊಟ್ಟಿದ್ದಾರೆ ರಾಜ್ಯ ಸಚಿವ ಕೃಷ್ಣ ಬೈರೇಗೌಡರ ಪತ್ನಿ, ಸಾಫ್ಟ್‌ವೇರ್‌ ಎಂಜಿನಿಯರ್‌ ಮೀನಾಕ್ಷಿ!

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಇಬ್ಬರು ಗೌಡರ ಮುಖಾಮುಖಿ ಕದನ ಕುತೂಹಲಕ್ಕೆ ಕಾರಣವಾಗಿದೆ.

ಪ್ರತಿ ಚುನಾವಣೆಯಲ್ಲೂ ಪತಿಯ ಬೆನ್ನಿಗೆ ನಿಲ್ಲುವ ಮೀನಾಕ್ಷಿ ಕೃಷ್ಣ ಬೈರೇಗೌಡ, ಈ ಬಾರಿ ಹೆಚ್ಚು ಸಕ್ರಿಯರಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಿಜಿಐ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಮೀನಾಕ್ಷಿ, ಮೂರು ವಾರಗಳ ರಜೆ ತೆಗೆದುಕೊಂಡು ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.

ಈಗಾಗಲೇ ಮಲ್ಲೇಶ್ವರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ ಭಾಗದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಅಲ್ಲದೆ, ಕೃಷ್ಣ ಬೈರೇಗೌಡ ಅವರ ತಾಯಿ ಸಾವಿತ್ರಮ್ಮ, ಸಹೋದರಿಯರಾದ ಮಂಗಳಾ ಮತ್ತು ಮಂಜುಳಾ ಕೂಡಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

‘ಒಬ್ಬ ರಾಜಕಾರಣಿಯಾಗಿ ಕೃಷ್ಣ ಅವರ ಕಾರ್ಯವೈಖರಿಯ ಹಿನ್ನೆಲೆ ಉತ್ತಮವಾಗಿದೆ. ಕ್ಷೇತ್ರದಾದ್ಯಂತ ಅವರದ್ದು ಪರಿಚಿತ ಮುಖ. ಹೀಗಾಗಿ, ನಮಗೆ ಯಾವುದೇ ಭಯ ಇಲ್ಲ. ಅವರ ಪರ ಪ್ರಚಾರ ನಡೆಸುವುದು ಕಷ್ಟವೂ ಇಲ್ಲ’ ಎಂದು ಮೀನಾಕ್ಷಿ ಹೇಳಿದರು.

‘ಬೆಂಗಳೂರು ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಲು‌ ಸಮರ್ಥರೊಬ್ಬರನ್ನು ಚುನಾಯಿಸುವ ಅಗತ್ಯವಿದೆ. ಈ ಕಾರಣಕ್ಕೆ ಕೃಷ್ಣ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದೇವೆ. ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನಮ್ಮ ಶ್ರಮ ಸಾರ್ಥಕವಾಗಲಿದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಮತ್ತೊಮ್ಮೆ ಮೋದಿ’ ಎಂದು ಹೇಳಿಕೊಂಡು ಸದಾನಂದ ಗೌಡರು ಪಕ್ಷದ ಕಾರ್ಯಕರ್ತರ ಜೊತೆ ತೆರಳಿ ಮತದಾರರ ಓಲೈಕೆ ಮಾಡುತ್ತಿದ್ದರೆ, ‘ಪತಿಗೆ ಮತ್ತೊಂದು ಅವಕಾಶ ಕೊಡಿ’ ಎಂದು ಡಾಟಿ ಅವರು ಕ್ಷೇತ್ರದೆಲ್ಲೆಡೆ ಮನೆ ಮನೆಗಳ ಕದ ತಟ್ಟುತ್ತಿದ್ದಾರೆ. ಈಗಾಗಲೇ ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್‌ಗಳಲ್ಲಿ ಮತ ಯಾಚಿಸಿರುವ ಡಾಟಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತಿದ್ದಾರೆ.

ಬೆಳಿಗ್ಗೆ ಎದ್ದು ಉದ್ಯಾನಗಳತ್ತ ಹೆಜ್ಜೆ ಹಾಕುವ ಡಾಟಿ, ಅಲ್ಲಿ ಮತದಾರ ಜೊತೆ ಒಂದಷ್ಟು ಹೊತ್ತು ಚರ್ಚೆ ನಡೆಸುತ್ತಾರೆ. ಬಳಿಕ ಪಕ್ಷದ ಮಹಿಳಾ ಕಾರ್ಯಕರ್ತೆಯರ ಜೊತೆ ವಸತಿ ಸಂಕೀರ್ಣಗಳು, ವಾಣಿಜ್ಯ ಮಾರುಕಟ್ಟೆಗಳಲ್ಲಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !