ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಪ್ಪ ಎಲ್ಲರ ಎದೆಯಲ್ಲಿ ಸ್ಥಾಯಿಯಾಗಲಿ

ಪ್ರೊ.ಬಿ. ಕೃಷ್ಣಪ್ಪ ಅವರ 80ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರ ಅಭಿಪ್ರಾಯ
Last Updated 19 ಜೂನ್ 2018, 8:31 IST
ಅಕ್ಷರ ಗಾತ್ರ

ಶಿವಮೊಗ್ಗ: ತುಳಿತಕ್ಕೊಳಗಾದ ಸಮುದಾಯಗಳಿಗೆ ಪ್ರೊ.ಬಿ. ಕೃಷ್ಣಪ್ಪ ಅವರ ಚಿಂತನೆ ಮತ್ತು ಹೋರಾಟಗಳು ಊರುಗೋಲಾಗಿವೆ ಎಂದು ಚಿಂತಕ ಡಾ. ಮೇಟಿ ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟದಿಂದ ಸೋಮವಾರ ಏರ್ಪಡಿಸಿದ್ದ ಕೃಷ್ಣಪ್ಪ ಅವರ 80ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಚರಿತ್ರೆಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರರನ್ನು ಸಂಘಟಿಸಿ, ಅವರಲ್ಲಿ ಸ್ವಾಭಿಮಾನದ ಪ್ರಜ್ಞೆ ಮೂಡಿಸುವ ಕೆಲಸವನ್ನು ಕೃಷ್ಣಪ್ಪ ಮಾಡಿದ್ದಾರೆ. ಇಂತಹ ವ್ಯಕ್ತಿಯ ಜನ್ಮದಿನ ಆಚರಣೆಯ ಹಿಂದೆ ಬಹುದೊಡ್ಡ ಆಶಯವಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ ಎಂದು ತಿಳಿಸಿದರು.

ಕೃಷ್ಣಪ್ಪ ಅವರ ಹೋರಾಟದ ಪರಿಕಲ್ಪನೆ, ಚಿಂತನೆಗಳನ್ನು ನೆನಪಿಸಿಕೊಳ್ಳುವ ಕಾರ್ಯವಾಗಬೇಕು. ಅವರ ಚಿಂತನೆಗಳು ನಮ್ಮಲ್ಲಿ ಬೇರೂರಿದಾಗ ಮಾತ್ರ ಯಾವುದೇ ಶಕ್ತಿಗಳನ್ನಾದರೂ ಎದುರಿಸುವ ತಾಕತ್ತು ಬರುತ್ತದೆ. ಈ ಹಿನ್ನೆಲೆಯಲ್ಲಿ ಅಸಂಘಟಿತರಾಗಿರುವ ಅಸಂಖ್ಯಾತ ಸಮುದಾಯಗಳು ಸಂಘಟಿತವಾಗಬೇಕಿವೆ ಎಂದು ಹೇಳಿದರು.

ಇಂದಿಗೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಗಮನಿಸಿದರೆ ಸ್ವಾತಂತ್ರ್ಯ ಬಂದ ನಂತರದ ಏಳು ದಶಕಗಳಲ್ಲಿ ನಾವು ಏನನ್ನು ಸಾಧಿಸಿದ್ದೇವೆ ಎನ್ನುವುದು ದೊಡ್ಡ ವಿಸ್ಮಯವಾಗಿ ನಮಗೆ ಕಾಣುತ್ತದೆ. ದಲಿತರ ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ, ಪ್ರಜಾಪ್ರಭುತ್ವದ ಅಡಿಯಲ್ಲಿ ಅಧಿಕಾರ ಸ್ವೀಕರಿಸಿದ ಅನಂತಕುಮಾರ ಹೆಗಡೆಯಂಥವರು ದಲಿತರ ಬಗ್ಗೆ, ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಇಂದಿಗೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ನರಕಯಾತನೆ ಅನುಭವಿಸುತ್ತಿರುವಾಗ, ಇದರ ಅರಿವೇ ಇಲ್ಲದ ದೇಶದ ಪ್ರಧಾನಿ ಫಿಟ್‌ನೆಸ್‌ ಸವಾಲು ಹಾಕುತ್ತಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವಾ ಅಥವಾ ಕುಸ್ತಿ ಪೈಲ್ವಾನರ ಗರಡಿಯಲ್ಲಿ ಬದುಕುತ್ತಿದ್ದೇವಾ ಎನ್ನುವ ಪ್ರಶ್ನೆ ಕಾಡುತ್ತದೆ ಎಂದರು.

ಕೃಷ್ಣಪ್ಪ ಒಡನಾಡಿ ಪ್ರೊ. ಸಣ್ಣರಾಮ ಮಾತನಾಡಿ, ‘ಅವರು ದಲಿತರಿಗಾಗಿ ಇಡೀ ಬದುಕನ್ನು ಅರ್ಪಿಸಿಕೊಂಡಿದ್ದರು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅವರ ಹೆಜ್ಜೆ ಗುರುತುಗಳಿವೆ.   ಅವರ ವಿಚಾರಧಾರೆಯನ್ನು  ಮನೆ, ಮನಗಳಿಗೆ ತಲುಪಿಸುವ ಕಾರ್ಯ ದಸಂಸದಿಂದ ಆಗಬೇಕಿದೆ. ಇವರ ಬಗ್ಗೆ ಪ್ರತಿ ಭಾಗದಲ್ಲೂ ವಿಚಾರ ಸಂಕಿರಣ, ಕಾರ್ಯಾಗಾರ, ಕಮ್ಮಟ, ಚರ್ಚೆಗಳಾಗಬೇಕಿದೆ. ಅವರನ್ನು ಮತ್ತೆ ಮತ್ತೆ ಅಧ್ಯಯನಕ್ಕೊಳಪಡಿಸಬೇಕಿದೆ’ ಎಂದರು.

ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಟಿ.ಎಚ್‌. ಹಾಲೇಶಪ್ಪ, ನಿವೃತ್ತ ಪ್ರಾಧ್ಯಾಪಕ ಚಂದ್ರಪ್ಪ, ಇಂಗ್ಲೀಷ್‌ ಉಪನ್ಯಾಸಕ ಶಿವಬಸಪ್ಪ, ಪ್ರಮುಖರಾದ ನಾಗಪ್ಪ, ಮಂಜುನಾಥ್, ಭಾರತಿ, ರುದ್ರಮ್ಮ ಇದ್ದರು.

‘ರಾಜಕೀಯ ಪ್ರಜ್ಞೆ ಬೆಳೆಯಲಿ’

ಪುರೋಹಿತಶಾಹಿ, ವೈದಿಕಶಾಹಿ, ಅಧಿಕಾರಶಾಹಿ ಹಾಗೂ ಮೇಲ್ಪರ್ಗದವರ ಕುತಂತ್ರಗಳನ್ನು ಮೊಟಕುಗೊಳಿಸಬೇಕಾದರೆ ಮೊದಲು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಲ್ಲಿ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಯಬೇಕು. ಬುದ್ಧನ ಕರುಣೆ, ಬಸವಣ್ಣನ ಚಿಂತನೆ, ಅಂಬೇಡ್ಕರ್‌ ವಿಚಾರಧಾರೆ, ಪ್ರೊ.ಬಿ. ಕೃಷ್ಣಪ್ಪ ಅವರ ಹೋರಾಟಗಳು ಮೈಗೂಡಬೇಕು ಎಂದು ಮೇಟಿ ಮಲ್ಲಿಕಾರ್ಜುನ್‌ ಹೇಳಿದರು.

‘ಪರಿವರ್ತನೆಯ ಹಾದಿ ಹಿಡಿಯಲಿ’

‘ನನ್ನ ಜನ ಮತದಾನದ ಶಕ್ತಿ ಬಳಸಿಕೊಂಡು ಅಧಿಕಾರ ಹಿಡಿಯುತ್ತಾರೆ’ ಎಂದು ಅಂಬೇಡ್ಕರ್‌ ಭಾವಿಸಿದ್ದರು. ಆದರೆ ಆ ಮನಸ್ಸುಗಳು ಮೂಲಭೂತವಾದ, ಹಣ, ಆಮಿಷಕ್ಕೆ ಮಾರುಹೋಗಿವೆ. ಇನ್ನು ಮುಂದಾದರೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ತಮ್ಮನ್ನು ತಾವು ಮಾರಿಕೊಳ್ಳದೆ ಪರಿವರ್ತನೆಯ ಹಾದಿ ಹಿಡಿಯಬೇಕಿದೆ. ಕೃಷ್ಣಪ್ಪನವರನ್ನು ಎದೆಯಲ್ಲಿ ಸ್ಥಾಯಿಯಾಗಿಟ್ಟುಕೊಂಡು ಮೂಲಭೂತವಾದಕ್ಕೆ ಸಡ್ಡು ಹೊಡೆಯಬೇಕಿದೆ ಎಂದು ಪ್ರೊ. ಸಣ್ಣರಾಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT