ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳೆಯರ ಸ್ಥಾನಮಾನಕ್ಕೆ ಲಿಂಗಾನುಪಾತವೇ ಕನ್ನಡಿ’

Last Updated 11 ಆಗಸ್ಟ್ 2019, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಣ್ಣು ಭ್ರೂಣ ಹತ್ಯೆಯಿಂದ ಹಲವು ರಾಜ್ಯಗಳಲ್ಲಿ ಲಿಂಗಾನುಪಾತ ಪ್ರಮಾಣ ಕುಸಿಯುತ್ತಿದೆ. ಇದು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನಕ್ಕೆ ಹಿಡಿದ ಕನ್ನಡಿ’ ಎಂದು ಹಿರಿಯ ಪತ್ರಕರ್ತೆ ಪಾರ್ವತಿ ಮೆನನ್ ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ವಿಮಾ ನೌಕರರ ಸಂಘಟನೆಯು ಭಾನುವಾರ ಹಮ್ಮಿಕೊಂಡಿದ್ದ 4ನೇ ಅಖಿಲ ಭಾರತ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಲಿಂಗಾನುಪಾತ ಹೆಚ್ಚಿಸುವ ನಿಟ್ಟಿನಲ್ಲಿ ಬೇಟಿ ಬಚಾವೊದಂತಹ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಆದರೆ, ಕೇರಳ ಹೊರತುಪಡಿಸಿ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಲಿಂಗಾನುಪಾತ ಕುಸಿದಿದೆ. ನೀತಿ ಆಯೋಗದ ವರದಿ ಪ್ರಕಾರ 2011ರಲ್ಲಿ ಭಾರತದಲ್ಲಿ ‌ಪುರುಷ–ಮಹಿಳೆಯರ ಅನುಪಾತ 1,000: 909‌ ಇತ್ತು. 2015ರಲ್ಲಿ 900ಕ್ಕೆ ಇಳಿದಿದೆ’ ಎಂದು ತಿಳಿಸಿದರು.

‘ಗುಜರಾತ್‍ನಲ್ಲಿ ಲಿಂಗಾನುಪಾತ ಒಂದೇ ಸಮನೆ ಕುಸಿಯುತ್ತಿದೆ. 2011ರಲ್ಲಿ 911‌ ಇದ್ದ ಲಿಂಗಾನುಪಾತ 2015ರಲ್ಲಿ 854ಕ್ಕೆ ಇಳಿದಿದೆ. ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನದಲ್ಲೂ ಇದೇ ಸ್ಥಿತಿ ಕಾಣಬಹುದಾಗಿದೆ. ಎರಡು ವರ್ಷಗಳಲ್ಲಿ ಜನಗಣತಿ ವರದಿ ಬರಲಿದ್ದು, ಲಿಂಗಾನುಪಾತ ಪ್ರಮಾಣದ ಅಂತರ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ’ ಎಂದರು.

ಹೆಣ್ಣು ಮಕ್ಕಳಿಗಿಲ್ಲ ರಕ್ಷಣೆ: ಸಂಘದ ಕಾರ್ಯದರ್ಶಿ ಎಂ. ಗಿರಿಜಾ ಮಾತನಾಡಿ, ‘ಗರ್ಭದಲ್ಲಿರುವುದು ಹೆಣ್ಣು ಮಗು ಎಂದು ತಿಳಿದ ಕೂಡಲೇ ಗರ್ಭಪಾತಕ್ಕೆ ಮುಂದಾಗುವುದರಿಂದ ಲಿಂಗಾನುಪಾತ ಕುಸಿಯುತ್ತಿದೆ.ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎನ್ನುವುದು ಆಗಾಗ ಸಾಬೀತಾಗುತ್ತಲೇ ಇದೆ.ಕಾಶ್ಮೀರದ ಎಂಟು ವರ್ಷದ ಬಾಲಕಿ ಆಸೀಫಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನ್ಯಾಯ ದೊರೆತಿಲ್ಲ. ಹಣ ಹಾಗೂ ಅಧಿಕಾರದ ಬಲವೊಂದಿದ್ದರೆ ಎಲ್ಲವೂ ಸಾಧ್ಯ ಎಂಬ ಮನೋಭಾವ ಹಲವರಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT