ಮಹಿಳೆಯರಿಗೆ ಎಲ್ಲೆಡೆ ಸನ್ಮಾನ, ನಮನ

ಶುಕ್ರವಾರ, ಮಾರ್ಚ್ 22, 2019
26 °C
ಸಾಧಕಿಯರಿಗೆ ಸಂಘ– ಸಂಸ್ಥೆಗಳ ಗೌರವ l ಶ್ರಮದಾನ ಮಾಡಿದ ವಿದ್ಯಾರ್ಥಿನಿಯರು

ಮಹಿಳೆಯರಿಗೆ ಎಲ್ಲೆಡೆ ಸನ್ಮಾನ, ನಮನ

Published:
Updated:
Prajavani

ಬೆಂಗಳೂರು: ಬಣ್ಣ ಬಣ್ಣದ ಉಡುಗೆ ತೊಟ್ಟು ಹೆಜ್ಜೆ ಮೇಲೆ ಹೆಜ್ಜೆಯಿಟ್ಟು, ಮೊಗದಲಿ ಲಘು ಲಾಸ್ಯದಿಂದ ನಡೆದುಬಂದರು ನಾರಿಯರು. ಹೊಸ ಹೆಜ್ಜೆ, ಸ್ವಾಭಿಮಾನದ ಧ್ವನಿಯಾಗಲು ಕಾತರದಿಂದ ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಸೇರಿದ್ದರು. 

ಇದು, ನಗರದಲ್ಲಿ ಶುಕ್ರವಾರ ಕಂಡ ಮಹಿಳಾ ದಿನಾಚರಣೆಯ ಸಂಭ್ರಮ.

ಕೆಎಸ್‌ಆರ್‌ಟಿಸಿ ನಿಗಮದ 49 ಮಹಿಳಾ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು. ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ ‘ಮಹಿಳಾ ಸಿಬ್ಬಂದಿ ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು’ ಎಂದು ಹೇಳಿದರು. 

ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ‘ಮಹಿಳಾ ಸಿಬ್ಬಂದಿಗೆ ಬೇಕಾದ ಎಲ್ಲ ಅಗತ್ಯ ಸೌಲಭ್ಯ, ಸವಲತ್ತುಗಳನ್ನು ನೀಡಲು ಬದ್ಧರಿದ್ದೇವೆ. ಒಂದು ಪ್ರಶಸ್ತಿ, ಸನ್ಮಾನ ಹಲವು ಪ್ರೇರಣೆಗೆ ಅವಕಾಶ ನೀಡುವುದಲ್ಲದೇ, ಮುಂದಿನ ದಿನಗಳಲ್ಲಿ ಇತರ ಸಿಬ್ಬಂದಿಗೂ ಇದು ಮಾದರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಹುತಾತ್ಮ ಯೋಧ ಎಚ್.ಗುರು ಅವರ ಪತ್ನಿ ಎಸ್.ಕಲಾವತಿ ಅವರಿಗೆ ನಿಗಮದ ವತಿಯಿಂದ ₹25,000 ನಗದು ಮತ್ತು ಉಚಿತ ಬಸ್ ಪಾಸ್‍ ಹಾಗೂ ಗುರು ಅವರ ತಂದೆ–ತಾಯಿ ಚಿಕ್ಕತಾಯಮ್ಮ, ಹೊನ್ನಯ್ಯ ಅವರಿಗೆ ಉಚಿತ ಬಸ್‌ಪಾಸ್ ನೀಡಲಾಯಿತು. 

ಸಮಾನ ವೇತನ ನಮ್ಮ ಹಕ್ಕು: ‘ನಾವು ಅಂಗನವಾಡಿ ಕಾರ್ಯಕರ್ತೆಯರು. ನಾವೂ ಪುರುಷರಷ್ಟೇ ಸಮಾನವಾಗಿ ಕೆಲಸ ಮಾಡುತ್ತೇವೆ. ಆದರೆ, ಸಮಾನ ವೇತನ ಮಾತ್ರ ಸಿಗುತ್ತಿಲ್ಲ. ಗೌರವಧನದ ಮೊತ್ತ ಯಾವುದಕ್ಕೂ ಸಾಲುತ್ತಿಲ್ಲ... ’

ಹೀಗೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡಿದ್ದು,  ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ.

‘ಸಮಾನ ವೇತನ ನಮ್ಮ ಹಕ್ಕು.ರಾಜಕಾರಣಿಗಳಾರೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದಕ್ಕೆ ನಿಮ್ಮ ಉತ್ತರವೇನು’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಪ್ರಕಾಶ್‌ ರೈ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ತುಡಿತ, ಇನ್ನೊಬ್ಬರ ತುಡಿತ ಎಂದು ಭಾವಿಸಿದಾಗ ಮಾತ್ರ ಇದು ಸಾಧ್ಯ. ವಾರ್ಡ್‌ ಮಟ್ಟದಿಂದ ಹಿಡಿದು, ಸಂಸತ್ತಿನ ತನಕ ಮಹಿಳೆಯರಿಗೆ ಸಮಾನ ಅವಕಾಶ ಸಿಗದ ಹೊರತು, ಈ ಬಗ್ಗೆ ಜಾಗೃತಿ ಮೂಡುವುದು ಅಸಾಧ್ಯ’ ಎಂದು ಹೇಳಿದರು.

‘ಸಮಾನ ವೇತನ ನಮ್ಮ ಹಕ್ಕು, ಕೊಡಿ ಎಂದು ಕೇಳಬೇಡಿ. ಹಕ್ಕನ್ನು ಕೊಡುವುದಲ್ಲ, ಪಡೆದುಕೊಳ್ಳುವುದು. ಪ್ರಬುದ್ಧತೆ, ಸಹನೆ, ತಾಯ್ತನದ ಪ್ರೀತಿ ಸ್ತ್ರೀಯರಲ್ಲಿ ಮಾತ್ರ ಇರುವುದರಿಂದ ಆಶಾ ಹಾಗೂ ಅಂಗನವಾಡಿ ಕೆಲಸಗಳಿಗೆ ಮಹಿಳೆಯರನ್ನೇ ನೇಮಿಸಲಾಗು
ತ್ತಿದೆ. ಪುರುಷನಿಗೆ ಈ ಕೆಲಸ ಅಸಾಧ್ಯ. ಸಮಾನ ವೇತನ, ಸ್ವ–ಸ್ವಾಭಿಮಾನ ಎಲ್ಲರಿಗೂ ಬೇಕು’ ಎಂದು ತಿಳಿಸಿದರು.

‘ಮದ್ಯ ನಿಷೇಧಕ್ಕಾಗಿ ಸಾವಿರಾರು ಕಿ.ಮೀ. ನಡೆದು ಬಂದ ನೊಂದ ಮಹಿಳೆಯರ ಅಳಲನ್ನು ಸರ್ಕಾರ ಕೇಳಲೇ ಇಲ್ಲ. ನಿತ್ಯ ಮನೆಯಲ್ಲಿ ರೋದಿಸುತ್ತಿರವವರ ಸಂಕಟ ಇವರಿಗೆಲ್ಲಿ ಅರ್ಥವಾದೀತು? ಗಂಡನ ಕುಡಿತ ಬಿಡಿಸುವ ದಾರಿಗಳೇನಾದರೂ ಇದ್ದರೆ ನೀವಾದರೂ ತಿಳಿಸಿ’ ಎಂದು ಕಲಬುರ್ಗಿಯ ಕಟ್ಟಡ ಕಾರ್ಮಿಕರೊಬ್ಬರು ಕೇಳಿದರು.  

ಎಸ್‌ಯುಸಿಐನ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಉಮಾ, ‘ಸಮಾನ ಕೆಲಸಕ್ಕೆ ಸಮಾನ ವೇತನ ನಮ್ಮ ಹಕ್ಕು. ಭೂಮಿತಾಯಿಯಷ್ಟು ಸಹನೆಯಿದೆ ಎಂದ ಮಾತ್ರಕ್ಕೆ ನೀವು ಮಾಡುವ ಮೋಸಕ್ಕೆ ಬಲಿಯಾಗಲು ನಾವ್ಯಾರು ಸಿದ್ಧರಿಲ್ಲ’ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು. 

ರೈಲು ಗಾಲಿ ಕಾರ್ಖಾನೆಯಲ್ಲಿ ಮಹಿಳಾ ದಿನ: ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ, ನಿತ್ಯದ ಜೀವನದಲ್ಲಿ ಮಹಿಳೆ ನಿರ್ವ
ಹಿಸುವ ವಿವಿಧ ಪಾತ್ರಗಳು, ಅವಳ ಸಹಿಷ್ಣುತೆ ಬಗ್ಗೆ ಉಪನ್ಯಾಸ ನೀಡಿದರು. 

ಶ್ರಮದಾನ: ಲೋವ್ಸ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಹಿಳಾ ಸಿಬ್ಬಂದಿಗಳು ಮಹಿಳಾ ದಿನಾಚರಣೆ ನಿಮಿತ್ತ ಶ್ರಮದಾನ ಮಾಡಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !