‘ಸಮಾನ ರಾಜಕೀಯ ಅವಕಾಶ ನೀಡಿ’

7
‘ಚುನಾವಣೆ ಒಳ–ಹೊರಗೆ’ ಸಂವಾದದಲ್ಲಿ ಮಹಿಳೆಯರ ಒತ್ತಾಯ

‘ಸಮಾನ ರಾಜಕೀಯ ಅವಕಾಶ ನೀಡಿ’

Published:
Updated:
Deccan Herald

ಬೆಂಗಳೂರು: ಮಹಿಳೆಯರಿಗೇಕೆ ರಾಜಕೀಯದಲ್ಲಿ ಸಮಾನ ಅವಕಾಶ ಸಿಗುತ್ತಿಲ್ಲ? ಅದನ್ಯಾರು ತಪ್ಪಿಸುತ್ತಿದ್ದಾರೆ. ಏಕೆ ಮಹಿಳೆ ತೆರೆಮರೆಯಲ್ಲೇ ಉಳಿದಿದ್ದಾಳೆ ಎಂಬ ಚರ್ಚೆಗೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವೇದಿಕೆ ಅವಕಾಶ ಒದಗಿಸಿತು.

‘ಸಮತೆಯೆಡೆಗೆ ನಮ್ಮ ನಡಿಗೆ’ ಪರಿಕಲ್ಪನೆಯಲ್ಲಿ ನಡೆದ ‘ಚುನಾವಣೆ ಒಳ–ಹೊರಗೆ ಸಂವಾದ’ ಕಾರ್ಯಕ್ರಮದಲ್ಲಿ ಮಹಿಳೆ ರಾಜಕೀಯ ಕ್ಷೇತ್ರದಲ್ಲಿ ತೆರೆಮರೆಯಲ್ಲೇ ಉಳಿದಿರುವುದಕ್ಕೆ ವಿಷಾದ ವ್ಯಕ್ತವಾಯಿತು. 

ಹೋರಾಟಗಳು ಹಳಿತಪ್ಪಲು ಅಥವಾ ವಿಫಲವಾಗಲು ರಾಜಕಾರಣದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಇಲ್ಲದಿರುವುದೇ ಕಾರಣ. ವಿಶ್ವದ ಯಾವುದೇ ದೇಶಗಳಲ್ಲಿ ಮಹಿಳೆಯರನ್ನು ಒಳಗೊಂಡ ಹೋರಾಟಗಳು ಬಹಳ ಬೇಗ ಗುರಿ ಮುಟ್ಟಿವೆ ಎಂದು ಸಂಘಟನೆಯ ಮುಖಂಡರಾದ ಗೌರಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಮಹಿಳೆ ರಾಜಕಾರಣದ ಮುಂಚೂಣಿಯಲ್ಲಿ ಕಾಣಿಸಲು ಪ್ರಬಲವಾದ ಜನಚಳವಳಿ ಇರಬೇಕು. ಇಲ್ಲವಾದರೆ ಅದು ಯಶಸ್ವಿಯಾಗುವುದಿಲ್ಲ ಎಂದರು. 

ಮಹಾಭಾರತದ ದ್ರೌಪದಿ ತನಗಾದ ದೌರ್ಜನ್ಯದ ವಿರುದ್ಧ ಸೆಟೆದು ನಿಂತಳು. ದುರ್ಯೋಧನನಿಗೆ ಒಂದು ಗತಿ ಕಾಣಿಸದೇ ನಾನು ತುರುಬು ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಳು. ಹಾಗೆಂದು ಅವಳ ಹಾದಿಯೇನೂ ಸುಗಮವಾಗಿರಲಿಲ್ಲ ಎಂದು ಮಹಿಳಾ ದೌರ್ಜನ್ಯದ ವಿವಿಧ ಆಯಾಮಗಳನ್ನು ಕಾಂಗ್ರೆಸ್‌ ಮುಖಂಡರಾದ ರಾಣಿ ಸತೀಶ್‌ ತೆರೆದಿಟ್ಟರು. 

ಮಹಿಳೆ ಸ್ಪರ್ಧಿಸಲು ಮುಂದಾದರೆ ನೋಟು ಇದೆಯೇ ಎಂದು ಕೇಳುತ್ತಾರೆ. ನೋಟೂ ಇಲ್ಲ, ಕೋಟೂ ಇಲ್ಲದ ಮಹಿಳೆ ಹೇಗೆ ಸ್ಪರ್ಧಿಸಬೇಕು? ಹಾಗೂ ಹೀಗೂ ಸ್ಪರ್ಧಿಸಿ ಗೆದ್ದರೂ ಅವರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರುವುದಿಲ್ಲ. ಪ್ರಶ್ನಿಸುವ ಮನೋಭಾವ ಬೆಳೆದರೆ ಯಾರೂ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಜೆಡಿಎಸ್‌ ಮುಖಂಡ ವೈ.ಎಸ್‌.ವಿ.ದತ್ತ ಮಾತನಾಡಿ, ‘ಚುನಾವಣೆಗೆ ನಿಂತ ಅಭ್ಯರ್ಥಿ ಎದುರಿಸುವ ಸವಾಲು ಬಹಳ ಕಠಿಣವಾದದ್ದು. ವ್ಯವಸ್ಥೆ ಆರೋಹಣದತ್ತ ಹೋಗುತ್ತಿದೆಯೋ ಅಥವಾ ಅವರೋಹಣದತ್ತವೋ ಎಂಬ ಗೊಂದಲದಲ್ಲಿ ಇದ್ದೇವೆ. ಅಂಬೇಡ್ಕರ್‌ ಸಂವಿಧಾನ ಬರುವ ಮೊದಲೇ 12ನೇ ಶತಮಾನದಲ್ಲಿ ಜನತಾಂತ್ರಿಕ ವ್ಯವಸ್ಥೆಗೆ ಬಸವಣ್ಣ ವ್ಯಾಖ್ಯಾನ ಕೊಟ್ಟಿದ್ದರು’ ಎಂದು ಸ್ಮರಿಸಿದರು. 

**

‘ಮೊದಲ ಮೀಟೂ ಅಕ್ಕಮಹಾದೇವಿಯದ್ದು’

‘ಪ್ರಪಂಚದ ಮೊಟ್ಟ ಮೊದಲ ಮೀ ಟೂ ಧ್ವನಿ ಎದ್ದದ್ದು ಅಕ್ಕಮಹಾದೇವಿಯಿಂದ. ಕೌಶಿಕ ರಾಜನ ಕಿರುಕುಳವನ್ನು ಬಹಿರಂಗವಾಗಿಯೇ ವಿರೋಧಿಸಿ ಲೌಕಿಕ ಬದುಕಿನಿಂದ ಹೊರಬಂದವಳು. ಇನ್ನು ರಾಜಕಾರಣದಲ್ಲೂ ಮೀ ಟೂ ಬರಲಿದೆ. ಬಂದರೆ ಅದರಲ್ಲಿ ಹೆಸರು ಕಾಣಿಸಿಕೊಂಡವರ ಕಥೆಯೂ ಗೋವಿಂದ. ಎಲ್ಲವೂ ಅಲ್ಲೋಲಕಲ್ಲೋಲವಾಗಲಿದೆ’ ಎಂದು ರಾಣಿ ಸತೀಶ್‌ ಹೇಳಿದಾಗ ಸಭೆಯಲ್ಲಿದ್ದ ಮಹಿಳೆಯರು ಹೌದು ಎಂದು ಧ್ವನಿಗೂಡಿಸಿದರು. ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇಲ್ಲದ ಕಾರಣ ಅಲ್ಲಿ ಸಂಸ್ಕೃತಿ ಇಲ್ಲವಾಗಿದೆ ಎಂದು ಅವರು ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !