ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 50,447 ಕೋಟಿ ಸಾಲ ಯೋಜನೆ ಸಿದ್ಧ

ಬೆಂಗಳೂರು ನಗರ ಜಿಲ್ಲೆಯ ಜನರಿಗಾಗಿ ನಬಾರ್ಡ್‌–ಲೀಡ್‌ ಬ್ಯಾಂಕ್‌ನಿಂದ ಉಪಕ್ರಮ
Last Updated 29 ಡಿಸೆಂಬರ್ 2018, 20:33 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ 2019–20ನೇ ಸಾಲಿನಲ್ಲಿ ನೀಡಬಹುದಾದ ₹ 50,447 ಕೋಟಿಯ ‘ಸಾಮರ್ಥ್ಯಾಧಾರಿತ ಸಾಲ ಯೋಜನೆ’ಯನ್ನು(ಪಿಎಲ್‌ಸಿಪಿ) ಸಿದ್ಧಪಡಿಸಲಾಗಿದೆ.

ನಬಾರ್ಡ್‌ ರೂಪಿಸಿರುವ ಈ ಯೋಜನೆಯ ವರದಿಯನ್ನುಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬಿಡುಗಡೆ ಮಾಡಿದರು.

2018–19ನೇ ಸಾಲಿನಲ್ಲಿ ₹ 37,674 ಕೋಟಿಯ ಪಿಎಲ್‌ಸಿಪಿ ಸಿದ್ಧಪಡಿಸಲಾಗಿತ್ತು. ಆ ನಿಗದಿತ ಗುರಿಯನ್ನು ದಾಟಿ ಅಂದಾಜು ₹ 40,000 ಕೋಟಿಗಿಂತ ಅಧಿಕ ಮೊತ್ತವನ್ನು ಸಾಲ ರೂಪದಲ್ಲಿ ನೀಡಲಾಗಿದೆ. ಅದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಜನರ ಅಗತ್ಯವನ್ನು ಪರಿಗಣಿಸಿಯೇ ಈ ಬಾರಿ ಯೋಜನಾ ಗಾತ್ರವನ್ನು ಶೇ 34 ರಷ್ಟು ಹೆಚ್ಚಿಸಲಾಗಿದೆ’ ಎಂದರು.

ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಂದ ವಿವಿಧ ಇಲಾಖೆಗಳ ಯೋಜನೆಗಳಾದ ಉದ್ಯೋಗಿನಿ, ಸ್ವಾವಲಂಬನಾ, ಚೈತನ್ಯ, ಪಶುಭಾಗ್ಯ, ಕೃಷಿಭಾಗ್ಯ ಯೋಜನೆಗಳ ಪ್ರಗತಿಯ ಕುರಿತು ಮಾಹಿತಿ ಪಡೆದರು.

10 ಸಾವಿರ ಅರ್ಜಿ, 15 ಜನರಿಗೆ ಸಹಾಯಧನ : 2022ರ ವೇಳೆಗೆ ನಗರ ಪ್ರದೇಶದಲ್ಲಿನ ಎಲ್ಲರಿಗೂ ಸೂರು ಒದಗಿಸಲು ರೂಪಿಸಿರುವ ‘ಪ್ರಧಾನ ಮಂತ್ರಿ ಆವಾಸ್‌ ಯೋಜನೆ’ಯಡಿ ಸಹಾಯಧನ ಬಯಸಿ, ಆನ್‌ಲೈನ್‌ ಮೂಲಕ 10,000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅದರಲ್ಲಿ 40 ಅರ್ಹರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆ ಅರ್ಹರಲ್ಲಿ ಕೇವಲ 15 ಜನರಿಗೆ ಮಾತ್ರ ಈ ಸಾಲಿನಲ್ಲಿ ಸಹಾಯಧನ ಮಂಜೂರು ಆಗಿದೆ.

‘ಆನ್‌ಲೈನ್‌ ಮೂಲಕ ಸಲ್ಲಿಸಿದ ಅನರ್ಹರ ಅರ್ಜಿಗಳ ಒಟ್ಟು ಸಂಖ್ಯೆಯನ್ನು ಕಾಲಕಾಲಕ್ಕೆ ಡಿಲೀಟ್‌ ಮಾಡಿ. ಇಲ್ಲದಿದ್ದರೆ, ಸಲ್ಲಿಸಿದ ಅರ್ಜಿಗಳು ಮತ್ತು ನಾವು ಆಯ್ಕೆ ಮಾಡಿದ ಅರ್ಹರ ಸಂಖ್ಯೆಯಿಂದ ನಗೆಪಾಟಲಿಗೆ ಈಡಾಗಬೇಕಾಗುತ್ತದೆ’ ಎಂದು ಸಚಿವರು ಸೂಚಿಸಿದರು.

‘ಕೃಷಿಭಾಗ್ಯ ಯೋಜನೆಯಡಿ ಸಾಲಸೌಲಭ್ಯ ಪಡೆಯಲು ಆನೇಕಲ್‌ನ 16 ರೈತರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಸಹ ಬ್ಯಾಂಕ್‌ಗಳು ಮಂಜೂರು ಮಾಡುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದಾಗ, ‘ಕಾನೂನು ಚೌಕಟ್ಟು ಮೀರದಂತೆ, ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಿಸಿ, ಅರ್ಹರಿಗೆ ಆದಷ್ಟು ಬೇಗ ಸಾಲ ಮತ್ತು ಸರ್ಕಾರದ ಸೌಲಭ್ಯಗಳು ತಲುಪಿಸಿ’ ಎಂದು ಸಚಿವರು ನಿರ್ದೇಶನ ನೀಡಿದರು.

‘ದುರಾಡಳಿತದ ಲಾಭ ನಮಗೆ’

‘ರಾಜ್ಯ ಸರ್ಕಾರದ ಬಗ್ಗೆ ಮಾತಾಡುವುದೇ ನಮಗೆ ಕೆಟ್ಟ ಕೆಲಸದಂತೆ ಕಾಣುತ್ತಿದೆ’ ಎಂದು ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತ,‘ದೇವರ ದಯೆಯಿಂದ ಸಿಕ್ಕ ಅಧಿಕಾರವನ್ನು ಮೈತ್ರಿ ಸರ್ಕಾರದವರು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ರಾಜ್ಯವೇ ಹಿಡಿತದಲ್ಲಿ ಇರಬೇಕು ಎಂದು ಒಂದು ಕುಟುಂಬದ ಪಕ್ಷ ಬಯುಸುತ್ತಿದೆ. ಅಧಿಕಾರಕ್ಕಾಗಿ ಮತ್ತೊಂದು ಪಕ್ಷದಲ್ಲಿ ಅಂತಃಕಲಹ ಏರ್ಪಟ್ಟಿದೆ. ಇಂತಹ ದುರಾಡಳಿತದ ಲಾಭ ನಮಗೆ ಆಗುತ್ತದೆ’ ಎಂದರು.

‘ಮೇಕೆದಾಟು ಯೋಜನೆ ಅನುಷ್ಠಾನ ಆಗಬೇಕು ಎಂಬುದು ಪಕ್ಷದ ನಿಲುವು. ಈ ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಕಾರಾತ್ಮಕನಿರ್ಧಾರಗಳನ್ನೆ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದ ಹಿತಾಸಕ್ತಿ ವಿಚಾರ ಬಂದಾಗ ನಾವು ವ್ಯಕ್ತಿ, ಪಕ್ಷ ಪರಿಗಣಿಸದೇ ಬೆಂಬಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT