ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೆ ₹ 5 ಕೋಟಿ ದಂಡ

ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ: ಹಸಿರು ನ್ಯಾಯಮಂಡಳಿ ಕೆಂಡ
Last Updated 24 ಅಕ್ಟೋಬರ್ 2018, 19:22 IST
ಅಕ್ಷರ ಗಾತ್ರ

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ತಾನು ನೀಡಿದ ನಿರ್ದೇಶನವನ್ನು ಪಾಲಿಸುವಲ್ಲಿ ಬಿಬಿಎಂಪಿ ಸತತವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ₹ 5 ಕೋಟಿ ದಂಡವನ್ನು ವಿಧಿಸಿದೆ.

ದಂಡ ಪಾವತಿಗೆ ಒಂದು ತಿಂಗಳ ಕಾಲಾವಕಾಶ ಕೊಟ್ಟಿದೆ. ಈ ಮೊತ್ತವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು, ಆ ಮಂಡಳಿಯು ಈ ಹಣವನ್ನು ಪರಿಹಾರ ಕಾರ್ಯಕ್ಕೆ ಬಳಸಬಹುದು ಎಂದು ನ್ಯಾಯಮಂಡಳಿ ಹೇಳಿದೆ.

ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿರುವ ಕ್ವಾರಿಗಳಲ್ಲಿ ಸುರಿದ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಬಯೊ–ಮೈನಿಂಗ್‌ ಮಾಡಬೇಕು ಎಂದು ನ್ಯಾಯಮಂಡಳಿ ನಿರ್ದೇಶನ ನೀಡಿತ್ತು. ಆದರೆ, ಕ್ವಾರಿಗಳಲ್ಲಿ ಸಂಗ್ರಹವಾಗಿರುವ ಕಸವನ್ನು ಹಾಗೇ ಬಿಟ್ಟ ಬಿಬಿಎಂಪಿ, ಅದರ ಮೇಲೆ ಮಣ್ಣಿನ ಹೊದಿಕೆ ಹಾಕಿದ್ದು, ಬಯೊ–ಮೈನಿಂಗ್‌ಗೆ ವ್ಯವಸ್ಥೆ ಮಾಡಿಲ್ಲ. ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ನ್ಯಾಯಮಂಡಳಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

‘ಬಿಬಿಎಂಪಿ ನ್ಯಾಯಮಂಡಳಿಯ ನಿರ್ದೇಶನ ಪಾಲನೆಯಲ್ಲಷ್ಟೇ ವಿಫಲವಾಗಿಲ್ಲ. ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ರಕ್ಷಣೆಯ ತನ್ನ ಶಾಸನಬದ್ಧ ಹೊಣೆಗಾರಿಕೆ ನಿಭಾಯಿಸುವಲ್ಲಿಯೂ ವಿಫಲವಾಗಿದೆ’ ಎಂದು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ಅವರ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

‘ನ್ಯಾಯಮಂಡಳಿಯ ನಿರ್ದೇಶನಗಳನ್ನು ಪಾಲನೆ ಮಾಡಿದ ಸಂಬಂಧ ಬಿಬಿಎಂಪಿ ನೀಡಿದ ಅನುಪಾಲನಾ ವರದಿಯನ್ನು ಪರಿಶೀಲಿಸಿದ್ದು, ಅದರಲ್ಲಿ ಬಯೊ–ಮೈನಿಂಗ್‌ ವ್ಯವಸ್ಥೆ ಮಾಡಿರುವ ಸಂಬಂಧ ಯಾವುದೇ ವಿವರಗಳಿಲ್ಲ’ ಎಂದು ಹೇಳಿದೆ.

ವೆಂಕಟೇಶ್‌ ಮತ್ತು ಇತರರ ಪರವಾಗಿ ವಕೀಲ ಶೈಲೇಶ್‌ ಮಡಿಯಾಳ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ಈ ಆದೇಶ ನೀಡಿದೆ.

ಗಣಿಗಾರಿಕೆ ಸ್ಥಗಿತಗೊಂಡ ಕ್ವಾರಿಗಳನ್ನು ಕಸ ತುಂಬಿಸುವ ಸಲುವಾಗಿ ಬಳಸುವುದು ನಗರ ಘನತ್ಯಾಜ್ಯ ವಿಲೇವಾರಿ ಕಾಯ್ದೆ 2016ರ ಉಲ್ಲಂಘನೆ ಎಂದು ನ್ಯಾಯಮಂಡಳಿಯು ಈ ಮೊದಲೇ ಅಭಿಪ್ರಾಯಪಟ್ಟಿತ್ತು.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿಗಳು ನಡೆಸಿದ ಜಂಟಿ ತಪಾಸಣೆಯ ವರದಿಯನ್ನು ನ್ಯಾಯಮಂಡಳಿ ಪರಿಶೀಲಿಸಿದೆ.

‘ತ್ಯಾಜ್ಯ ವಿಲೇವಾರಿಗೆ ಸ್ಥಳ ಆಯ್ಕೆ, ಭೂಭರ್ತಿ ಘಟಕದಲ್ಲಿ ಸೂಕ್ತ ಮೂಲಸೌಕರ್ಯ ಅಭಿವೃದ್ಧಿ, ಭೂಭರ್ತಿ ಘಟಕಗಳ ಸಂಬಂಧ ಮಾನದಂಡ ರೂಪಿಸುವುದು, ಭರ್ತಿಗೊಂಡ ಬಳಿಕ ಅವುಗಳನ್ನು ಮುಚ್ಚುವುದು, ಮಾಲಿನ್ಯ ನಿಯಂತ್ರಣ ಸಂಬಂಧಿ ಮಾನದಂಡ ರೂಪಿಸುವುದು, ನೀರಿನ ಗುಣಮಟ್ಟ ಕಾಯ್ದುಕೊಳ್ಳುವುದು, ವಾಯು ಗುಣಮಟ್ಟ ಕಾಪಾಡುವುದು ಹಾಗೂ ಭೂಭರ್ತಿ ಘಟಕಗಳ ಹಸಿರೀಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಗಂಭೀರ ಲೋಪವೆಸಗಿದೆ’ ಎಂದು ಅಭಿಪ್ರಾಯಪಟ್ಟಿದೆ.

ಪರಿಸರಕ್ಕೆ ಆಗಿರುವ ಹಾನಿಗೆ ಪರಿಹಾರ ರೂಪದಲ್ಲಿ ಬಿಬಿಎಂಪಿ ₹ 10 ಲಕ್ಷ ದಂಡವನ್ನು ಪಾವತಿಸಬೇಕು ಆಯುಕ್ತರು ಖುದ್ದಾಗಿ ನ್ಯಾಯಮಂಡಳಿ ಮುಂದೆ ಹಾಜರಾಗಬೇಕು ಎಂದು ಮಾರ್ಚ್‌ 9ರಂದು ನ್ಯಾಯಮಂಡಳಿ ಆದೇಶ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT