ಗುರುವಾರ , ಮೇ 28, 2020
27 °C

ವಿದ್ಯಾರ್ಥಿಗಳು ವದಂತಿಗಳಿಗೆ ಕಿವಿಗೊಡಬೇಡಿ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಪಿಯುಸಿ ಇಂಗ್ಲಿಷ್‌ ವಿಷಯದ ಪರೀಕ್ಷೆಯ ದಿನ ನಿಗದಿಪಡಿಸಿಲ್ಲ. ವದಂತಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬಾರದು’ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್‌ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ತಮ್ಮ ಫೇಸ್‌ಬುಕ್‌ ಖಾತೆಯ ಮೂಲಕ ಮಾತನಾಡಿದ ಅವರು, ‘ಏ. 24ರಂದು ಪಿಯುಸಿ ಇಂಗ್ಲಿಷ್‌ ಪರೀಕ್ಷೆ ನಡೆಯಲಿದೆ ಎಂದು ವಾಟ್ಸ್‌ಆ್ಯಪ್‌ ಮೂಲಕ ಸುದ್ದಿ ಹರಡಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

‘ಕೊರೊನೊ ಪರಿಸ್ಥಿತಿ ತಿಳಿಯಾಗುವರೆಗೆ ಯಾವುದೇ ಪರೀಕ್ಷೆ ನಡೆಸುವುದಿಲ್ಲ. ಅಲ್ಲದೆ, ವಿದ್ಯಾರ್ಥಿಗಳಿಗೆ ಪುನರ್‌ಮನನ ತರಗತಿ ಅಥವ ಸಿದ್ಧತಾ ಪರೀಕ್ಷೆಯನ್ನೂ ನಡೆಸುವುದಿಲ್ಲ. ವಿದ್ಯಾರ್ಥಿಗಳು, ಪೋಷಕರು ಈ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಪಿಯಸಿ ಇಂಗ್ಲಿಷ್‌ ಪರೀಕ್ಷೆ ಯಾವಾಗ ನಡೆಸಬೇಕು ಎಂಬ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ಅನುಕೂಲಕರ ದಿನ ಮುಂದೆ ನಿಗದಿಪಡಿಸಸುತ್ತೇನೆ. ಪರೀಕ್ಷೆ ದಿನಗಳನ್ನು ನಾನೇ ಘೋಷಿಸುತ್ತೇನೆ’ ಎಂದು ಹೇಳಿದರು.

’ಇದೇ ಸೋಮವಾರ (ಏ. 13) ಎಲ್ಲ ಜಿಲ್ಲೆಗಳ ಡಿಡಿಪಿಐ ಮತ್ತು ಡಯಟ್‌ಗಳ ಪ್ರಾಚಾರ್ಯರ ಜೊತೆ ವಿಡಿಯೊ ಕಾನ್ಫರೆನ್ಸ್ ನಡೆಸಲಿದ್ದೇನೆ. ಈ ವೇಳೆ ಇಲಾಖೆಗೆ ಸಂಬಂಧಿಸಿದ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಿದ್ದೇನೆ’ ಎಂದು ತಿಳಿಸಿದರು.

‘ಎಸ್‌ಎಸ್‌ಎಲ್‌ಸಿ ಮಕ್ಕಳ ಜೊತೆ ಶಿಕ್ಷಕರು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾರೆ. ವಿದ್ಯಾರ್ಥಿಗಳ ಎಲ್ಲ ಗೊಂದಲಗಳನ್ನು ಪರಿಹರಿಸುವಂತೆ ಶಿಕ್ಷಕರಿಗೆ ನಾನು ಈಗಾಗಲೇ ಸೂಚಿಸಿದ್ದೇನೆ. ಅಲ್ಲದೆ, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮತ್ತೊಮ್ಮೆ ಎಲ್ಲ ವಿಷಯಗಳ ಪುನರ್‌ಮನನ ತರಗತಿ ಕಾರ್ಯಕ್ರಮ ನೀಡಲು ತೀರ್ಮಾನಿಸಲಾಗಿದೆ. ಶೀಘ್ರವೇ ಈ ಎರಡೂ ಮಾಧ್ಯಮಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ’ ಎಂದರು.

‘ಶಿಕ್ಷಣ ಇಲಾಖೆ ವತಿಯಿಂದ ಯೂ ಟ್ಯೂಬ್‌ ಆರಂಭಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದೆ. ಮುಂದಿನ ವಾರ ಅಂದರೆ, ಏ. 14ರ ನಂತರ ಈ ಚಾನೆಲ್‌ಗೆ ಚಾಲನೆ ನೀಡುತ್ತೇನೆ. ಗುಣಾತ್ಮಕ ಮತ್ತು ಉತ್ತಮ ಕಾರ್ಯಕ್ರಮಗಳನ್ನು ಚಾನೆಲ್‌ ಮೂಲಕ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ’ ಎಂದರು.

‘ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯುವ ದಿನ ಬೇರೆ ಯಾವುದೇ ಪರೀಕ್ಷೆ ಇಲ್ಲದಂತೆ ಗಮನಹರಿಸಲಾಗುವುದು. ಬಹುತೇಕ ಮೇ ತಿಂಗಳಲ್ಲಿ ಈ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಪದವಿ ಪೂರ್ವ ಉಪನ್ಯಾಸಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆ. ಆದರೆ, ಹಲವು ಅಭ್ಯರ್ಥಿಗಳು ದಾಖಲಾತಿಗಳನ್ನು ಇನ್ನೂ ಸಲ್ಲಿಸಿಲ್ಲ. ಅದೇ ರೀತಿ  6ರಿಂದ 8ರವರೆಗಿನ ತರಗತಿಗಳಿಗೆ ಶಿಕ್ಷಕರ ನೇಮಕಾತಿ ಶೀಘ್ರವಾಗಿ ನಡೆಯಬೇಕಿದ್ದರೆ ಅಭ್ಯರ್ಥಿಗಳು ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕು. ಕಲ್ಯಾಣ ಕರ್ನಾಟಕದಿಂದ ಆಯ್ಕೆಯಾದವರು ಇನ್ನೂ ದಾಖಲಾತಿ ಸಲ್ಲಿಸಿಲ್ಲ. ಬೇರೆ ಭಾಗಗಳ ಶೇ 50ರಷ್ಟು ಮಂದಿ ಮಾತ್ರ ಸಲ್ಲಿಸಿದ್ದಾರೆ’ ಎಂದು ಹೇಳಿದರು.

‘ಶಿಕ್ಷಕರ ನೇಮಕಾತಿ ಕುರಿತಂತೆ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್‌ ಆರ್) ನಿಯಮದಲ್ಲಿ ತಿದ್ದುಪಡಿ ತರಲಾಗುತ್ತಿದೆ. ತಿಂಗಳ ಒಳಗೆ ಈ ಪ್ರಕ್ರಿಯೆ ಪೂರ್ಣವಾಗಲಿದೆ’ ಎಂದೂ ಸಚಿವರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು