ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ಗೆ ಗಂಡ; ಮನೆಯಲ್ಲಿ ಶವವಾದ ಪತ್ನಿ

ಚಂದ್ರಕಲಾ ಕೊಲೆ ಪ್ರಕರಣ : ಸಂಚು ‌ವಿವರಿಸಿದ ಬಾಣಸಿಗ
Last Updated 24 ಏಪ್ರಿಲ್ 2018, 19:26 IST
ಅಕ್ಷರ ಗಾತ್ರ

ಬೆಂಗಳೂರು: ‘ಸೀನಣ್ಣ.. ಇವತ್ತು ಮಧ್ಯಾಹ್ನ ಊಟ ಎಲ್ಲಿ ಮಾಡ್ತೀರಾ? ಮನೆಗೆ ಹೋಗ್ತೀರೋ ಅಥವಾ ನಾರಾಯಣಪುರದ ಮಿಲ್ಟ್ರಿ ಹೋಟೆಲ್‌ಗೆ ಹೋಗ್ತೀರೋ?‘

ಚಿನ್ನದ ಸರಕ್ಕಾಗಿ ಜ.19ರ ಮಧ್ಯಾಹ್ನ ಭಾರತಿನಗರದ ಚಂದ್ರಕಲಾ (35) ಅವರನ್ನು ಕೊಲೆಗೈದ ರಮೇಶ್, ಕೃತ್ಯ ಎಸಗುವುದಕ್ಕೂ ಎರಡು ತಾಸುಗಳ ಮುಂಚೆ ಚಂದ್ರಕಲಾ ಪತಿ ಶ್ರೀನಿವಾಸ್ ಬಳಿ ಕೇಳಿದ ಪ್ರಶ್ನೆಗಳಿವು.

ಚಂದ್ರಕಲಾ ಕುಟುಂಬಕ್ಕೆ ಪರಿಚಿತನಾದ ರಮೇಶ್, ಅವರ ಕುತ್ತಿಗೆಯಲ್ಲಿ ಚಿನ್ನದ ಸರ ಇರುವುದನ್ನು ನೋಡಿದ್ದ. ಹೇಗಾದರೂ ಮಾಡಿ ಅದನ್ನು ದೋಚಬೇಕೆಂದು ಸಂಚು ರೂಪಿಸಿ, ಏ.16ರಿಂದ ಪ್ರತಿದಿನ ಮಧ್ಯಾಹ್ನ ಮನೆ ಹತ್ತಿರ ಹೋಗುತ್ತಿದ್ದ. ಆ ಸಂದರ್ಭದಲ್ಲಿ ಶ್ರೀನಿವಾಸ್ ಊಟಕ್ಕೆ ಬಂದಿರುತ್ತಿದ್ದ ಕಾರಣ ಕೃತ್ಯ ಎಸಗಲು ಸಾಧ್ಯವಾಗಿರಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿತ್ಯ ಮನೆ ಹತ್ತಿರ ಹೋಗಿ ಬರಿಗೈಲಿ ವಾಪಸಾಗುತ್ತಿದ್ದರಿಂದ ಬೇಸರಗೊಂಡ ಆತ, ಏ.19ರಂದು ವ್ಯವಸ್ಥಿತ ಯೋಜನೆ ಹಾಕಿಕೊಂಡ. ಆ ದಿನ ಮಧ್ಯಾಹ್ನ 12.30ಕ್ಕೆ ಶ್ರೀನಿವಾಸ್ ಅವರ ಅಂಗಡಿಗೇ ಹೋಗಿ, ಊಟಕ್ಕೆ ಮನೆಗೆ ಹೋಗುತ್ತಾರೋ? ಇಲ್ಲವೋ? ಎಂಬುದನ್ನು ಖಚಿತಪಡಿಸಿಕೊಂಡಿದ್ದ. ಅವರು ಹೋಟೆಲ್‌ಗೆ ಹೋಗುವುದಾಗಿ ಹೇಳುತ್ತಿದ್ದಂತೆಯೇ ಈತ ಮನೆ ಹತ್ತಿರ ಬಂದಿದ್ದ.

ಮನೆ ಎದುರುಗಡೆಯೇ ಚಿಕನ್ ಅಂಗಡಿ ಇದ್ದು, ಅದರ ಮಾಲೀಕರು ಹಾಗೂ ನೌಕರರು ಸಹ ರಮೇಶ್‌ಗೆ ಪರಿಚಿತರು. ಅವರು ಇರುವಾಗಲೇ ಮನೆಗೆ ಹೋದರೆ ಸಿಕ್ಕಿಬೀಳುತ್ತೇನೆಂದು ಕೆಲ ಕಾಲ ಅಂಗಡಿಯಲ್ಲೇ ಅವರೊಟ್ಟಿಗೆ ಮಾತನಾಡುತ್ತ ಕುಳಿತಿದ್ದ. ಮಧ್ಯಾಹ್ನ 3.15ರ ಸುಮಾರಿಗೆ ಅವರು ಬಾಗಿಲು ಹಾಕಿಕೊಂಡು ಊಟಕ್ಕೆ ಹೊರ
ಟರು. ಆ ನಂತರ ಆರೋಪಿ ಮನೆಗೆ ನುಗ್ಗಿದ್ದ.

‘ಚಂದ್ರಕಲಾ ಕೋಣೆಯಲ್ಲಿ ಮಲಗಿದ್ದರು. ಗೊತ್ತಾಗದಂತೆ ಸರ ಕಿತ್ತುಕೊಳ್ಳಲು ಮುಂದಾದೆ. ಅವರು ಎದ್ದುಬಿಟ್ಟರು. ಚೀರಿಕೊಂಡರೆ ನೆರೆಹೊರೆಯವರು ಬಂದುಬಿಡುತ್ತಾರೆಂದು ಬೆಡ್‌ಶೀಟ್‌ನಿಂದ ಮುಖವನ್ನು ಒತ್ತಿ ಹಿಡಿದೆ. ಪ್ರಜ್ಞೆ ತಪ್ಪಿದ ಬಳಿಕ ಸರ ಕಿತ್ತುಕೊಂಡು ಹೊರಟು ಬಂದೆ’ ಎಂದು ಆರೋಪಿ ತನ್ನ ಕೃತ್ಯವನ್ನು ಪೊಲೀಸರಿಗೆ ವಿವರಿಸಿದ್ದಾನೆ.

ಸರ ಮಾರಿದ ಹಣ ಬಸ್‌ನಲ್ಲಿ ಕಳವು! ಅಲ್ಲಿಂದ ಸ್ನೇಹಿತೆ ಶಿಲ್ಪಾ ಅವರ ಮನೆಗೆ ತೆರಳಿದ ರಮೇಶ್, ‘ನನ್ನ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಶಸ್ತ್ರಚಿಕಿತ್ಸೆ ಮಾಡಿಸಬೇಕು. ಮಾಂಗಲ್ಯ ಸರ ಅಡವಿಟ್ಟು ಹಣ ಹೊಂದಿಸಬೇಕು’ ಎಂದಿದ್ದ. ಆತನ ಮಾತನ್ನು ನಂಬಿದ ಶಿಲ್ಪಾ, ದೇವನಹಳ್ಳಿಯ ಮಣಪ್ಪುರಂ ಫೈನಾನ್ಸ್‌ಗೆ ತೆರಳಿ ಆ ಸರವನ್ನು ತನ್ನ ಹೆಸರಿನಲ್ಲೇ ಅಡವಿಟ್ಟಿದ್ದರು. ಅದರಿಂದ ಬಂದ ₹ 1.25 ಲಕ್ಷವನ್ನು ರಮೇಶ್‌ಗೆ ಕೊಟ್ಟಿದ್ದರು.

ಅದರಲ್ಲಿ ₹1.10 ಲಕ್ಷವನ್ನು ಶಿಲ್ಪಾ ಅವರ ಮನೆಯಲ್ಲೇ ಇಟ್ಟ ಆರೋಪಿ, ₹ 15 ಸಾವಿರವನ್ನಷ್ಟೇ ತೆಗೆದುಕೊಂಡು ಖಾಸಗಿ ಬಸ್‌ನಲ್ಲಿ ದೊಡ್ಡಬಳ್ಳಾಪುರಕ್ಕೆ ಹೊರಟಿದ್ದ.

‘₹ 8 ಸಾವಿರವನ್ನು ಪ್ಯಾಂಟ್ ಜೇಬಿನಲ್ಲಿ ಹಾಗೂ ₹ 7 ಸಾವಿರವನ್ನು ಅಂಗಿ ಜೇಬಿನಲ್ಲಿ ಇಟ್ಟುಕೊಂಡಿದ್ದೆ. ಬಸ್‌ನಲ್ಲಿ ಯಾರೋ ₹ 8 ಸಾವಿರ ಕಳವು ಮಾಡಿದರು. ಊರಿಗೆ ತೆರಳಿದ ಬಳಿಕ ಉಳಿದ ಹಣವನ್ನು ಮನೆ ಬಾಡಿಗೆ ಕಟ್ಟಲು ಪತ್ನಿಗೆ ಕೊಟ್ಟೆ’ ಎಂದು ರಮೇಶ್ ಹೇಳಿಕೆ ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.
**
‘ಸತ್ತೇ ಹೋದರೇ?’ 
ಚಂದ್ರಕಲಾ ತಾಯಿ ಸಂಜೆ 4.30ಕ್ಕೆ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಚಿಕ್ಕಜಾಲ ಪೊಲೀಸರು ಚಿಕನ್ ಅಂಗಡಿ ನೌಕರರು ನೀಡಿದ ಸುಳಿವಿನಿಂದ, ಅದೇ ದಿನ ರಾತ್ರಿ ಆರೋಪಿಯನ್ನು ದೊಡ್ಡಬಳ್ಳಾಪುರದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದರು.

ಅಲ್ಲಿಯವರೆಗೂ ಆತನಿಗೆ ಚಂದ್ರಕಲಾ ಸತ್ತು ಹೋಗಿರುವ ವಿಚಾರ ಗೊತ್ತಿರಲಿಲ್ಲ. ‘ಏಕೆ ಕೊಲೆ ಮಾಡಿದೆ’ ಎಂದು ಪೊಲೀಸರು ಪ್ರಶ್ನಿಸಿದಾಗ ಆಘಾತಕ್ಕೆ ಒಳಗಾದ ಆತ, ‘ನಾನು ಪ್ರಜ್ಞೆ ತಪ್ಪಿಸಿ ಸರ ದೋಚಿದ್ದೆ. ಅವರು ಸತ್ತೇ ಹೋದರೇ? ನಿಜವಾಗಿಯೂ ನನಗೆ ಕೊಲ್ಲುವ ಉದ್ದೇಶವಿರಲಿಲ್ಲ’ ಎಂದು ಕಣ್ಣೀರಿಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT