ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪ್ರಥಮ ‘ಹ್ಯಾಟ್ರಿಕ್’ ಗೆಲುವಿನ ಸಂಭ್ರಮ..!

ಮಾಜಿ ಸಂಸದ ದಿ.ಬಿ.ಕೆ.ಗುಡದಿನ್ನಿ ದಾಖಲೆ ಮುರಿದ ರಮೇಶ ಜಿಗಜಿಣಗಿ
Last Updated 23 ಮೇ 2019, 14:25 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಹಲವು ದಾಖಲೆಗಳನ್ನು ನಿರ್ಮಿಸಿದೆ.

ಕ್ಷೇತ್ರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಹ್ಯಾಟ್ರಿಕ್‌ ಜಯಭೇರಿ ಬಾರಿಸಿದ ಕೀರ್ತಿಯನ್ನು ಬಿಜೆಪಿಯ ರಮೇಶ ಜಿಗಜಿಣಗಿ ತಮ್ಮದಾಗಿಸಿಕೊಂಡಿದ್ದಾರೆ. ಇದರ ಜತೆಗೆ ಡಬ್ಬಲ್‌ ಹ್ಯಾಟ್ರಿಕ್‌ ಸಾಧನೆಯೂ ಜಿಗಜಿಣಗಿಯದ್ದಾಗಿದೆ.

1998ರಿಂದ ಸತತವಾಗಿ ಸಂಸತ್‌ಗೆ ಆಯ್ಕೆಯಾಗಿದ್ದು, ಚಿಕ್ಕೋಡಿ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ, ವಿಜಯಪುರದಿಂದ ಮೂರು ಬಾರಿ ಆಯ್ಕೆಯಾಗುವ ಮೂಲಕ ಆರನೇ ಬಾರಿಗೆ ನಿರಂತರವಾಗಿ ಲೋಕಸಭೆಗೆ ಪದಾರ್ಪಣೆ ಮಾಡಲು ಮತದಾರರ ಆಶೀರ್ವಾದ ಗಿಟ್ಟಿಸಿಕೊಂಡಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರದಿಂದ ಇದೂವರೆಗೂ ಯಾರೊಬ್ಬರೂ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿರಲಿಲ್ಲ. ಮಾಜಿ ಸಂಸದ ದಿ.ಬಿ.ಕೆ.ಗುಡದಿನ್ನಿ 1968ರಲ್ಲಿ ಆಗಿನ ಸಂಸದ ಸ್ವತಂತ್ರ ಪಕ್ಷದ ಜಿ.ಡಿ.ಪಾಟೀಲ ಅಕಾಲಿಕ ನಿಧನದಿಂದ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಸಂಸದರಾಗಿ ಆಯ್ಕೆಯಾಗಿದ್ದರು.

ನಂತರ 1989, 1991ರಲ್ಲಿ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಮೂರು ಬಾರಿ ಜಿಲ್ಲೆಯನ್ನು ಪ್ರತಿನಿಧಿಸಿದ ಏಕೈಕ ಸಂಸದ ಎಂಬ ಹೆಗ್ಗಳಿಕೆಗೆ ಇದೂವರೆಗೂ ಭಾಜನರಾಗಿದ್ದರು.

ರಮೇಶ ಜಿಗಜಿಣಗಿ 2009, 2014, 2019ರಲ್ಲಿ ಸತತ ಮೂರು ಬಾರಿ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಸಂಸದ ಎಂಬ ದಾಖಲೆ ನಿರ್ಮಿಸುವ ಜತೆಗೆ, ಗುಡದಿನ್ನಿ ಅವರ ದಾಖಲೆ ಸರಿಗಟ್ಟುವ ಮೂಲಕ ಚುನಾವಣಾ ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಹೆಚ್ಚು ಮತ ಗಳಿಸಿದ ದಾಖಲೆ..!

ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಇದೂವರೆಗೂ ನಡೆದ 17 ಸಾರ್ವತ್ರಿಕ ಚುನಾವಣೆ, ಒಂದು ಉಪ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತ ಗಳಿಸಿದ ಹಾಗೂ ಭಾರಿ ಅಂತರದಿಂದ ಗೆಲುವು ದಾಖಲಿಸಿದ ಶ್ರೇಯವೂ ಜಿಗಜಿಣಗಿ ಹೆಸರಿನಲ್ಲೇ ನಿರ್ಮಾಣಗೊಂಡಿದೆ.

ಈ ಹಿಂದೆ ನಡೆದಿದ್ದ 16 ಸಾರ್ವತ್ರಿಕ ಚುನಾವಣೆ, ಒಂದು ಉಪ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿದ ದಾಖಲೆಯನ್ನು ರಮೇಶ ಜಿಗಜಿಣಗಿ ಹೊಂದಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 4,71,757 ಮತ ಗಳಿಸಿದ್ದರು.

ಇದೀಗ 2019ರ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಜಿಗಜಿಣಗಿ 6,35,867 ಮತಗಳನ್ನು ಪಡೆಯುವ ಮೂಲಕ, ಹಿಂದಿನ ತಮ್ಮ ಮತ ಗಳಿಕೆಯ ಸಾಧನೆಯನ್ನೇ ಉತ್ತಮ ಪಡಿಸಿಕೊಂಡಿದ್ದಾರೆ. ಕ್ಷೇತ್ರದ ಇತಿಹಾಸದಲ್ಲಿ ಇದೇ ಹೆಚ್ಚು ಮತ ಗಳಿಕೆಯ ಸಾಧನೆ.

ಭಾರಿ ಅಂತರದ ಗೆಲುವು..!

‘ಕೈ’ ತಪ್ಪಿದ್ದ ಕ್ಷೇತ್ರವನ್ನು ಮರಳಿ ಪಡೆಯಲಿಕ್ಕಾಗಿಯೇ ಕಾಂಗ್ರೆಸ್‌ 1989ರ ಚುನಾವಣೆಯಲ್ಲಿ ತನ್ನ ಹುರಿಯಳನ್ನಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದ, ಮಾಜಿ ಸಂಸದ ಬಿ.ಕೆ.ಗುಡದಿನ್ನಿ ಅವರನ್ನು ಕಣಕ್ಕಿಳಿಸಿತು. ಹಾಲಿ ಸಂಸದ ಎಸ್.ಎಂ.ಗುರಡ್ಡಿ ಜನತಾದಳದ ಅಭ್ಯರ್ಥಿಯಾಗಿದ್ದರು.

ಜಾತಿ ಪ್ರತಿಷ್ಠೆಯ ಕಣವಾಗಿದ್ದ ಈ ಚುನಾವಣೆಯಲ್ಲಿ ಬಿ.ಕೆ.ಗುಡದಿನ್ನಿ, ಗುರಡ್ಡಿ ಅವರನ್ನು 1,23,333 ಮತಗಳ ಅಂತರದಿಂದ ಸೋಲಿಸಿದ್ದೇ ಇದೂವರೆಗಿನ ದಾಖಲೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ದಾಖಲೆಯೂ ದೂಳೀಪಟವಾಗಿದೆ.

ಕೇಂದ್ರ ಸಚಿವರಾಗಿದ್ದ ರಮೇಶ ಜಿಗಜಿಣಗಿ 6,35,867 ಅತಿ ಹೆಚ್ಚಿನ ಮತಗಳನ್ನು ಗಳಿಸುವ ಜತೆಯಲ್ಲೇ, ತಮ್ಮ ಎದುರಾಳಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯ ಡಾ.ಸುನೀತಾ ದೇವಾನಂದ ಚವ್ಹಾಣ ಅವರನ್ನು 2,58,038 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ, ಭಾರಿ ಅಂತರದ ಗೆಲುವಿನ ದಾಖಲೆಯನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT