ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಶಾಲೆಯಲ್ಲಿ ಹೈಟೆಕ್‌ ಸೌಲಭ್ಯ..!

ಖಾಸಗಿ ಶಾಲೆಯಾದರೂ ಡೊನೇಷನ್ ಕಿರಿಕಿರಿಯಿಲ್ಲ
Last Updated 22 ಮಾರ್ಚ್ 2019, 13:47 IST
ಅಕ್ಷರ ಗಾತ್ರ

ನಿಡಗುಂದಿ: ಖಾಸಗಿ ಶಾಲೆಯಾದರೂ ಡೊನೇಷನ್ ಕಿರಿಕಿರಿಯಿಲ್ಲ. ಅಪ್ಪಟ ಹಳ್ಳಿಯ ಶಾಲೆಯಾದರೂ ಸೌಲಭ್ಯಗಳೆಲ್ಲಾ ಹೈಟೆಕ್. ಇಲ್ಲಿ ಕಲಿಕೆಗೆ ಕೊರತೆಯಿಲ್ಲ. ಶಿಕ್ಷಕರ ನಿರಂತರ ಪ್ರಯತ್ನದ ಫಲವಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100ರಷ್ಟು ಫಲಿತಾಂಶ...

ಇದು ತಾಲ್ಲೂಕಿನ ಗೊಳಸಂಗಿಯ ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶ್ರೀ ರಾಮಸ್ವಾಮಿ ಅಪ್ಪಣ್ಣಪ್ಪ ದಳವಾಯಿ (ಎಸ್ಆರ್‌ಎಡಿ) ಪ್ರೌಢಶಾಲೆಯ ಚಿತ್ರಣ.

ವಿಶಾಲವಾದ ಮೈದಾನ. ಸುತ್ತಲೂ ಆವರಣಗೋಡೆ. ಜನಪ್ರತಿನಿಧಿಗಳ ವಿವಿಧ ಯೋಜನೆ, ಅನುದಾನ ಹಾಗೂ ಜನರ ಸಹಕಾರದಿಂದ ನಿರ್ಮಾಣಗೊಂಡ ಈ ಪ್ರೌಢಶಾಲೆಯಲ್ಲಿ ಕಾಲಿಟ್ಟೊಡೆ ಧನ್ಯತೆಯ ಭಾವ ಮೂಡಲಿದೆ.

1980ರ ದಶಕದವರೆಗೂ ಪ್ರೌಢಶಾಲಾ ಶಿಕ್ಷಣಕ್ಕಾಗಿ ಗೊಳಸಂಗಿ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳು ಪರದಾಡಬೇಕಿತ್ತು. ದೂರದ ಬಾಗೇವಾಡಿ, ವಿಜಯಪುರ, ವಂದಾಲ, ಆಲಮಟ್ಟಿಯನ್ನು ಅವಲಂಬಿಸಬೇಕಿತ್ತು. ಆಗ ಇಲ್ಲಿಯ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳಬಾರದು ಎಂಬ ಉದ್ದೇಶದಿಂದ ಗ್ರಾಮದ ಸಾಹಿತಿಗಳು, ಬುದ್ದಿಜೀವಿಗಳು ಆರಂಭಿಸಿದ ಶಾಲೆಯೇ ಎಸ್‌ಆರ್‌ಎಡಿ ಪ್ರೌಢಶಾಲೆ.

1981ರಲ್ಲಿ ಆರಂಭಗೊಂಡ ಈ ಪ್ರೌಢಶಾಲೆಗೆ, ಗೊಳಸಂಗಿಯ ದಳವಾಯಿ ಮನೆತನದವರು 4 ಎಕರೆ ವಿಶಾಲ ಪ್ರದೇಶ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಆ ಕಾಲದಲ್ಲಿ ₹ 51,000 ದೇಣಿಗೆ ನೀಡಿದ್ದಾರೆ. ರಾಟಿ, ಮೇಟಿಗಳ ತವರೂರಾದ ಗೊಳಸಂಗಿ ಪ್ರೌಢಶಾಲೆ ಎಂದರೇ, ಒಂದು ಕ್ಷಣ ಎಲ್ಲರ ಕಿವಿ ಬೆರಗಾಗುತ್ತವೆ. ಆ ರೀತಿ ಇಡೀ ಜಿಲ್ಲೆಯಾದ್ಯಂತ ಈ ಪ್ರೌಢಶಾಲೆಗೆ ಹೆಸರು ತಂದುಕೊಟ್ಟವರು ಆಗಿನ ಮುಖ್ಯ ಶಿಕ್ಷಕ ಎಸ್.ಕೆ.ಚಿಕರೆಡ್ಡಿ. ಅವರು ಹಾಕಿಕೊಟ್ಟ ಶಿಸ್ತು, ನಿರಂತರ ಲವಲವಿಕೆಯ ಕಲಿಕೆ ಈ ಶಾಲೆಯ ಅಡಿಪಾಯ. ಅವರಂತೆ ಈಗಿನ ಮುಖ್ಯ ಶಿಕ್ಷಕ ಎಸ್.ಎಂ.ತಾವರಖೇಡ ಹಾಗೂ ಶಾಲಾ ಸಿಬ್ಬಂದಿ ಅಷ್ಟೇ ಶ್ರಮ ಹಾಗೂ ಮುತುವರ್ಜಿ ವಹಿಸಿ ಶಾಲೆಯಲ್ಲಿ ಶೈಕ್ಷಣಿಕ ಮಟ್ಟ ಉನ್ನತೀಕರಣಕ್ಕೆ ಶ್ರಮಿಸುತ್ತಿದ್ದಾರೆ.

ಗೊಳಸಂಗಿ ಹಾಗೂ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳು ಈ ಶಾಲೆಯಲ್ಲಿ 8ನೇ ವರ್ಗದ ಪ್ರವೇಶಕ್ಕೆ ಪೈಪೋಟಿ ನಡೆಸುತ್ತಾರೆ. ನಿರಂತರ ಚಟುವಟಿಕೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಸತತ ನಿಗಾ ಹಾಗೂ ಅವರಿಗೆ ವಿಶೇಷ ತರಗತಿ, ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ರಜೆಯಲ್ಲಿಯೂ ವಿವಿಧ ಶೈಕ್ಷಣಿಕ, ಸೃಜನಾತ್ಮಕ ಚಟುವಟಿಕೆಗಳು, ಈ ಶಾಲೆಯ ಮಕ್ಕಳಿಗೆ ಏಕತಾನತೆಯ ಕೊರಗು ದೂರು ಮಾಡಿ, ಸದಾ ಲವಲವಿಕೆಯ ತಾಣವಾಗಿದೆ.

‘ಕೌನ್ ಬನೇಗಾ ವಿದ್ಯಾಪತಿ’ ಸ್ಪರ್ಧೆಯಲ್ಲೂ ಈ ಶಾಲೆಯ ವಿದ್ಯಾರ್ಥಿಗಳು ಪ್ರತಿ ಬಾರಿಯೂ ಅಂತಿಮ ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ಗಳಿಸುತ್ತಾರೆ. ಈ ಶಾಲೆಯ ರಜತ ಮಹೋತ್ಸವವನ್ನು ಇಡೀ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಸೇರಿ ಅದ್ದೂರಿಯಾಗಿ ಆಚರಿಸಿದ್ದು ವಿಶೇಷ. ಶಾಲೆಯಲ್ಲಿ ಹೈಟೆಕ್ ಗಣಕಯಂತ್ರದ ಲ್ಯಾಬ್ ಇದ್ದು, ಇದು ಹಳ್ಳಿ ಮಕ್ಕಳ ಕಂಪ್ಯೂಟರ್ ಕಲಿಕೆಗೆ ನೆರವಾಗಿದೆ.

2009ರಿಂದ 2015ರವರೆಗೆ ಸತತ ಆರು ಬಾರಿ ಈ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 100ರಷ್ಟು ಹಾಗೂ 2016ರಿಂದ ಇಲ್ಲಿಯವರೆಗೆ ಶೇ 98ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT