ಭಾನುವಾರ, ಡಿಸೆಂಬರ್ 15, 2019
19 °C
ಇಳಕಲ್: ಹಣ ನೀರಿನಂತೆ ಹರಿದರೂ ಕೊಳಚೆ ವ್ಯಾಪಿಸುವುದು ನಿಂತಿಲ್ಲ

ಇಳಕಲ್: ಒಳಚರಂಡಿ ಕಾಮಗಾರಿಯಲ್ಲಿ ಭ್ರಷ್ಟಾಚಾರದ ದುರ್ನಾತ

ಬಸವರಾಜ ಅ.ನಾಡಗೌಡ Updated:

ಅಕ್ಷರ ಗಾತ್ರ : | |

Prajavani

ಇಳಕಲ್ (ಬಾಗಲಕೋಟೆ ಜಿಲ್ಲೆ): ಎಡಿಬಿಯಿಂದ (ಏಷ್ಯನ್‌ ಡೆವಲಪ್‌ಮೆಂಟ್ ಬ್ಯಾಂಕ್‌) ಸಾಲ ತಂದು ನಗರದಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿ ಎಂಟು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಬಳಕೆಗೆ ಮುನ್ನವೇ ಕೊಳಚೆ ನಿರ್ವಹಣಾ ಘಟಕ (ಎಸ್‍ಟಿಪಿ) ಕುಸಿದುಬಿದ್ದಿದೆ. ಕಳಪೆ ಕಾಮಗಾರಿ ಎಂಬ ದುರ್ವಾಸನೆಯನ್ನು ಎಲ್ಲೆಡೆ ಹರಡಿದೆ. ಜೊತೆಗೆ ಕಾಮಗಾರಿಯ ವಿಳಂಬ ಇಲ್ಲಿಯ ನಾಗರಿಕರ ಬದುಕನ್ನು ಅಸಹನೀಯವಾಗಿಸಿದೆ.

ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಸುಮಾರು 8 ದಶಲಕ್ಷ ಲೀಟರ್‌ನಷ್ಟು ಕೊಳಚೆ ಹಿಂದೊಮ್ಮೆ ಊರಿಗೆ ಕುಡಿಯುವ ನೀರಿನ ಮೂಲಗಳಾಗಿದ್ದ ಹಿರೇಹಳ್ಳ, ಎರೀಹಳ್ಳಗಳನ್ನು ಸೇರುತ್ತಿದೆ. ಅವೀಗ ದೊಡ್ಡ ಚರಂಡಿಗಳಾಗಿ ಬದಲಾಗಿದ್ದು, ಪರಿಣಾಮವಾಗಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಡೆಂಗ್ಯು ಜ್ವರ ಪ್ರಕರಣ ಇಳಕಲ್‌ ನಗರದಲ್ಲಿ ವರದಿಯಾಗುತ್ತಿವೆ.

ಮಾಜಿ ಮುಖ್ಯಮಂತ್ರಿ ಎಸ್.ಆರ್‍. ಕಂಠಿ 1965ಕ್ಕೂ ಮುನ್ನವೇ ಇಳಕಲ್‍ ನಗರಕ್ಕೆ ಅಗತ್ಯ ಮೂಲಸೌಕರ್ಯಗಳ ಜೊತೆ 10 ಕಿ.ಮೀ ಉದ್ದದ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಕಲ್ಪಿಸಿದ್ದರು. ಅಂದು ಕರ್ನಾಟಕದಲ್ಲಿ ಒಳಚರಂಡಿ ವ್ಯವಸ್ಥೆ ಹೊಂದಿದ್ದ ಬೆರಳಣಿಕೆಯಷ್ಟು ನಗರಗಳಲ್ಲಿ ಇಳಕಲ್‍ ಕೂಡಾ ಒಂದಾಗಿತ್ತು. ಗುಣಮಟ್ಟದ ಕಾಮಗಾರಿ ಹಾಗೂ ವೈಜ್ಞಾನಿಕವಾಗಿ ಮಾಡಲಾಗಿದ್ದ ವ್ಯವಸ್ಥೆಯು 50 ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ನಗರದ ಕೊಳಚೆ ಹೊರ ಸಾಗಿಸಿತ್ತು.

ನಗರ ಬೆಳೆದಂತೆ ಹೆಚ್ಚು ಸಾಮರ್ಥ್ಯದ ಒಳಚರಂಡಿ ವ್ಯವಸ್ಥೆಯ ಅಗತ್ಯವಿತ್ತು. ಸರ್ಕಾರ 2008ರಲ್ಲಿ ಎಡಿಬಿಯಿಂದ ಸಾಲ ಪಡೆದು ₹42 ಕೋಟಿ ವೆಚ್ಚದಲ್ಲಿ ಒಟ್ಟು 80 ಕಿ.ಮೀ ಉದ್ಧದ ಒಳಚರಂಡಿ ಕಾಮಗಾರಿಗೆ ಮಂಜೂರಾತಿ ನೀಡಿತು.

ಕರ್ನಾಟಕ ನಗರ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ (ಕೆಯುಐಡಿಎಫ್‍ಸಿ) ಮೂಲಕ ಉತ್ತರ ಕರ್ನಾಟಕ ನಗರ ಬಂಡವಾಳ ಹೂಡಿಕೆ ಕಾರ್ಯಕ್ರಮದಡಿ ಕಾಮಗಾರಿ ಜಾರಿಗೊಂಡಿದೆ. ಕಾಮಗಾರಿ ಗುತ್ತಿಗೆ ಪಡೆದಿದ್ದ ಚೆನ್ನೈ ಮೂಲದ ಕಂಪೆನಿ ಅರ್ಧದಷ್ಟು ಕಾಮಗಾರಿ ಮಾಡಿ ಓಡಿ ಹೋಯಿತು. ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಬೇರೊಬ್ಬರಿಗೆ ಗುತ್ತಿಗೆ ನೀಡಲು ಮುಂದಾದಾಗ ಆ ಕಂಪೆನಿ ಹೈಕೋರ್ಟ್ ಮೊರೆ ಹೋಯಿತು. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳಲು ತಡವಾಯಿತು. ನಂತರ ಹೈದರಾಬಾದ್ ಮೂಲದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಯಿತು.

ಆ ಕಂಪೆನಿ ಕೆಲಸವೂ ಅವೈಜ್ಞಾನಿಕ ಹಾಗೂ ಕಳಪೆ ಎಂಬ ಆರೋಪ ಕೇಳಿ ಬಂದವು. ಸಾಕಷ್ಟು ವಿಳಂಬದ ನಂತರ ಒಳಚರಂಡಿಯ ಪೈಪ್‍ಲೈನ್‍ ಅಳವಡಿಸುವ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಆದರೆ ಪೂರ್ಣಗೊಂಡಿಲ್ಲ. ಅಲಂಪೂರ ಪೇಟೆಯಲ್ಲಿ ಇನ್ನಷ್ಟು ಕೆಲಸ ಬಾಕಿ ಇದೆ.

ಹೊಸ ಒಳಚರಂಡಿಗಾಗಿ ಹಿಂದಿನ ಒಳಚರಂಡಿ ಒಡೆದು ಹಾಕಲಾಯಿತು. ಹೊಸ ವ್ಯವಸ್ಥೆಯು ಸೇವೆಗೆ ದೊರೆಯಲಿಲ್ಲ, ಹಳೆಯದು ಉಳಿಯಲಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈಗ ನಗರದ ಮಧ್ಯದಲ್ಲಿರುವ ಹಿರೇಹಳ್ಳ ಹಾಗೂ ಎರೀಹಳ್ಳಕ್ಕೆ ಒಳಚರಂಡಿಯ ಕೊಳಚೆ ಸೇರುತ್ತಿದೆ. ಪರಿಣಾಮ ನಗರದಲ್ಲಿ ವಿಪರೀತ ಸೊಳ್ಳೆಗಳಾಗಿದ್ದು, ಡೆಂಗ್ಯು, ಟೈಫಾಯ್ಡ್, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ ಈ ಯೋಜನೆ ಲೋಕಾರ್ಪಣೆಗೊಂಡಿದ್ದು, ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕ ಕಾಮಗಾರಿ ಪರಿಣಾಮ ಅನೇಕ ಬಡಾವಣೆಗಳಲ್ಲಿ ಅಸಹನೀಯ ದುರ್ಗಂಧ ಹರಡಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ನಗರದೊಳಗಿನ ಕಶ್ಮಲ ಹೊರಸಾಗಿಸಲು ಸಾಧ್ಯವಾಗಿಲ್ಲ.

ರಸ್ತೆ ಮಧ್ಯದಲ್ಲಿರುವ ಮ್ಯಾನ್‍ ಹೋಲ್‍ ಗಳು ಅನೇಕ ಕಡೆಗಳಲ್ಲಿ ರಸ್ತೆ ಮಟ್ಟಕ್ಕಿಂತ ಎತ್ತರಕ್ಕಿವೆ. ಕಳಪೆ ಕಾಮಗಾರಿಯಿಂದಾಗಿ ಕೆಲವಷ್ಟು ಕುಸಿದಿವೆ. ಒಳಚರಂಡಿಯ ಪೈಪ್‍ಗಳನ್ನು ಹಾಕಲು ಅಗೆದ ರಸ್ತೆಯನ್ನು ಪುನರ್ ನಿರ್ಮಿಸಿಲ್ಲ. ಪರಿಣಾಮ ಮಳೆಗಾಲದಲ್ಲಿ ರಸ್ತೆಗಳು ಕುಸಿಯುತ್ತಿವೆ. ವಾಹನಗಳು ಇಂತಹ ರಸ್ತೆಯಲ್ಲಿ ಸಿಲುಕುತ್ತಿವೆ. ಅಗೆದ ರಸ್ತೆಗಳ ಪುನರ್ ನಿರ್ಮಾಣಕ್ಕೆ ಬಳಸಬೇಕಿದ್ದ ಈ ಯೋಜನೆಯಡಿ ಶೇ15ರಷ್ಟು ಅನುದಾನವನ್ನು ಕೇಂದ್ರೀಕೃತ ಕಾಮಗಾರಿಗಳಿಗೆ ಬಳಸಿಕೊಂಡು ಪ್ರಮುಖ ರಸ್ತೆಯೊಂದನ್ನು ಸಿ.ಸಿ ರಸ್ತೆ ಮಾಡಲಾಗುತ್ತಿದೆ. ಆದರೆ ಅಗೆದ ಇತರ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡುವುದು ಯಾವಾಗ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಅದಕ್ಷತೆ, ಭ್ರಷ್ಟಾಚಾರದ ಪರಿಣಾಮ ಉತ್ತಮ ಯೋಜನೆಯೊಂದು ಹಳ್ಳ ಹಿಡಿದಿದೆ. ಅಪೂರ್ಣ ಹಾಗೂ ಕಳಪೆ ಕಾಮಗಾರಿಯನ್ನು ನಗರಸಭೆಗೆ ಹಸ್ತಾಂತರಿಸಲು ಕೆಯುಐಡಿಎಫ್‍ ಸಿ ಹಾಗೂ ಗುತ್ತಿಗೆದಾರ ತರಾತುರಿಯಲ್ಲಿದ್ದಾರೆ. ಇಡೀ ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಮನವರಿಕೆ ಮಾಡಿಕೊಂಡು, ಷರತ್ತಿನಂತೆ ಯೋಜನೆಯ ನಿರ್ವಹಣೆ ಮಾಡಿದ ನಂತರ ಸ್ವೀಕರಿಸುವಂತೆ ಶಾಸಕರು ನಗರಸಭೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಒಳಚರಂಡಿಯ ಮ್ಯಾನ್‍ ಹೋಲ್‍ಗಳಿಗೆ ಮನೆಗಳಿಂದ ಸಂಪರ್ಕ ನೀಡುವ ಜವಾಬ್ದಾರಿ ಗುತ್ತಿಗೆ ವಹಿಸಿಕೊಂಡ ಕಂಪೆನಿಯದ್ದೇ ಆಗಿದ್ದರೂ ಸಾರ್ವಜನಿಕರು ಖರ್ಚು ಮಾಡಿ ಸಂಪರ್ಕಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಕಾಮಗಾರಿಯ ಪರಿಕ್ಷಾರ್ಥವಾಗಿ ಪೈಪ್‍ ಗಳನ್ನು ಬ್ಲಾಕ್‍ ಮಾಡಿದ್ದನ್ನು ತೆರವುಗೊಳಿಸದ ಪರಿಣಾಮ ಈಗ ಒಳಚರಂಡಿಯಲ್ಲಿ ಕೊಳಚೆ ಮುಂದೆ ಸಾಗದೇ ಒಂದೇ ಕಡೆ ಸಂಗ್ರಹಗೊಂಡು ಮ್ಯಾನ್‍ ಹೋಲ್‍ಗಳ ಮೂಲಕ ಹೊರ ಚೆಲ್ಲುತ್ತಿದೆ.

ಪ್ರತಿಕ್ರಿಯಿಸಿ (+)