ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ ಮಾನ್‌ ಸಿಂಗ್ ಎನ್‌ಕೌಂಟರ್‌: 11 ಪೊಲೀಸರಿಗೆ ಜೀವಾವಧಿ ಶಿಕ್ಷೆ

ಹತ್ಯೆ ನಡೆದ 35 ವರ್ಷಗಳ ಬಳಿಕ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
Last Updated 22 ಜುಲೈ 2020, 14:48 IST
ಅಕ್ಷರ ಗಾತ್ರ

ಮಥುರಾ : 35 ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ನಡೆದಿದ್ದ ರಾಜ ಮಾನ್‌ ಸಿಂಗ್ ಎನ್‌ಕೌಂಟರ್‌ ಪ್ರಕರಣದ ತಪ್ಪಿತಸ್ಥರಾಗಿದ್ದ 11 ಮಂದಿ ಪೊಲೀಸರಿಗೆ ಮಥುರಾ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಡೀಗ್‌ ಪೊಲೀಸ್‌ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವೀರೇಂದ್ರ ಸಿಂಗ್‌, ಸರ್ಕಲ್‌ ಆಫೀಸರ್‌ ಕಾನ್‌ ಸಿಂಗ್‌ ಭಾಟಿ‌ ಹಾಗೂ ಇತರ ಒಂಬತ್ತು ಪೊಲೀಸರ ಮೇಲಿನ ಆರೋಪ ಸಾಬೀತಾಗಿದೆ ಎಂದು ಮಥುರಾ ಜಿಲ್ಲಾ ನ್ಯಾಯಾಧೀಶೆ ಸಾಧನಾ ರಾಣಿ ತೀರ್ಪಿನಲ್ಲಿ ಹೇಳಿದ್ದಾರೆ.

ಭರತಪುರ ರಾಜ ಮನೆತನದ ಮಾನ್‌ ಸಿಂಗ್‌ ಮತ್ತು ಅವರ ಸಹೊದ್ಯೋಗಿಗಳಾದ ಸುಮೇರ್‌ ಸಿಂಗ್‌ ಹಾಗೂ ಹರಿ ಸಿಂಗ್‌ ಅವರನ್ನು 1985ರ ಫೆಬ್ರುವರಿ 21ರಂದು ಎನ್‌ಕೌಂಟರ್‌ ಮಾಡಲಾಗಿತ್ತು.

ಆಗ ವಿಧಾನಸಭಾ ಚುನಾವಣೆಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾನ್‌ ಸಿಂಗ್‌ ಅವರು ರಾಜಸ್ಥಾನದ ಆಗಿನ ಮುಖ್ಯಮಂತ್ರಿ ಶಿವ ಚರಣ್‌ ಮಾಥುರ್‌ ಅವರ ಹೆಲಿಕಾಪ್ಟರ್‌ಗೆ ಹಾನಿ ಉಂಟು ಮಾಡಿದ್ದರು.ಮಾಥುರ್‌ ಅವರು ಭರತಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬ್ರಜೇಂದ್ರ ಸಿಂಗ್‌ ಪರ ಚುನಾವಣಾ ಪ್ರಚಾರ ರ‍್ಯಾಲಿ ನಡೆಸಲು ನಿರ್ಧರಿಸಿದ್ದರು. ಅದಕ್ಕಾಗಿ ನಿರ್ಮಿಸಿದ್ದ ವೇದಿಕೆಗೂ ಮಾನ್‌ ಸಿಂಗ್‌ ಹಾಗೂ ಅವರ ಬೆಂಬಲಿಗರು ಹಾನಿಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಸುಪ್ರೀಂಕೋರ್ಟ್‌,ಪ್ರಕರಣದ ವಿಚಾರಣೆಯನ್ನು ರಾಜಸ್ಥಾನದಿಂದ ಮಥುರಾ‌ಗೆ ವರ್ಗಾಯಿಸಿತ್ತು. ತನಿಖೆಯ ಜವಾವ್ದಾರಿಯನ್ನು ಸಿಬಿಐಗೆ ವಹಿಸಲಾಗಿತ್ತು.

‘ತಡವಾಗಿಯಾದರೂ ನಮಗೆ ನ್ಯಾಯ ಸಿಕ್ಕಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಿರುವುದಕ್ಕೆ ಖುಷಿಯಾಗಿದೆ’ ಎಂದು ಭರತಪುರ ರಾಜ ಮನೆತನದ ಸದಸ್ಯ ಕೃಷ್ಣೇಂದ್ರ ಕೌರ್‌ ದೀಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT