ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಸಾಲದ ಬಲೆ; ನೆರೆ ದೇಶಗಳಿಗೆ ಎಚ್ಚರಿಕೆ

Last Updated 30 ಜುಲೈ 2020, 20:02 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ‘ಸಾಲದ ಬಲೆ’ಯ ರಾಜತಾಂತ್ರಿಕತೆಯ ಬಗ್ಗೆ ನೆರೆಯ ಮತ್ತು ಹಿಂದೂ ಮಹಾಸಾಗರದ ದೇಶಗಳಿಗೆ ಭಾರತವು ಗುರುವಾರ ಪರೋಕ್ಷ ಎಚ್ಚರಿಕೆ ನೀಡಿದೆ.

‘ಅಭಿವೃದ್ಧಿ ಪಾಲುದಾರಿಕೆಯ ಹೆಸರಿನಲ್ಲಿ ದೇಶಗಳನ್ನು ಅವಲಂಬನೆಯ ಪಾಲುದಾರಿಕೆಗೆ ತಳ್ಳಲಾಗಿದೆ ಎಂಬುದನ್ನು ಇತಿಹಾಸವು ನಮಗೆ ಕಲಿಸಿದೆ. ಇದು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಆಳ್ವಿಕೆಗೆ ಕಾರಣವಾಗಿದೆ. ಜಾಗತಿಕವಾಗಿ ಅಧಿಕಾರ ಕೇಂದ್ರಗಳ ಸೃಷ್ಟಿಗೆ ಅವಕಾಶ ಕೊಟ್ಟಿದೆ. ಅಂತಿಮವಾಗಿ, ಮಾನವ ಕುಲವು ಸಂಕಷ್ಟ ಅನುಭವಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತದ ನೆರೆ ದೇಶಗಳಿಗೆ ಚೀನಾವು ನೀಡುತ್ತಿರುವ ಸಾಲವನ್ನು ಈ ಮೂಲಕ ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಭಾರತದ ನೆರವಿನಲ್ಲಿ ಮಾರಿಷಸ್‌ ನಿರ್ಮಿಸಿರುವ ಸುಪ್ರೀಂ ಕೋರ್ಟ್‌ ಕಟ್ಟಡದ ಉದ್ಘಾಟನೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿ ಮೋದಿ ಮಾತನಾಡಿದರು. ಈ ಕಟ್ಟಡ ನಿರ್ಮಾಣಕ್ಕೆ ಭಾರತವು ಸುಮಾರು ₹210 ಕೋಟಿ ನೆರವು ನೀಡಿದೆ.

ಬೇರೆ ದೇಶಗಳಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭಾರತ ಮತ್ತು ಚೀನಾ ನೆರವು ನೀಡುವ ಉದ್ದೇಶದ ವ್ಯತ್ಯಾಸದತ್ತ ಮೋದಿ ಗಮನ ಸೆಳೆದರು. ಆದರೆ, ಅವರು ಚೀನಾದ ಹೆಸರನ್ನು ಪ್ರಸ್ತಾಪಿಸಲಿಲ್ಲ.

ವಿವಿಧ ದೇಶಗಳಲ್ಲಿ ಭಾರತವುಕೈಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದರು.ಭಾರತದ ಮಟ್ಟಿಗೆ ಅಭಿವೃದ್ಧಿ ಸಹಕಾರದ ಮೂಲ ತತ್ವವೇ ಪಾಲುದಾರರ ಬಗೆಗಿನ ಗೌರವ ಎಂದು ಮೋದಿ ವಿವರಿಸಿದ್ದಾರೆ.

‌ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರದ ಹಲವು ರಾಷ್ಟ್ರಗಳಿಗೆ ಚೀನಾವು ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರಿ ಮೊತ್ತದ ಸಾಲ ನೀಡಿದೆ. ತನ್ನ ‘ಒಂದು ವಲಯ ಒಂದು ರಸ್ತೆ ಯೋಜನೆ’ಯ ಭಾಗವಾಗಿ ಈ ಸಾಲವನ್ನು ಕೊಟ್ಟಿದೆ. ಈ ಮೂಲಕ ಏಷ್ಯಾ ಖಂಡದ ಉದ್ದಕ್ಕೂ ತನಗೆ ಮಹತ್ವದ್ದಾದ ಮೂಲಸೌಕರ್ಯವನ್ನು ಸೃಷ್ಟಿಸಿಕೊಳ್ಳುತ್ತಿದೆ. ಈ ಯೋಜನೆಗೆ ಜಾಗತಿಕ ಮಟ್ಟದಲ್ಲಿ ಟೀಕೆಯೂ ವ್ಯಕ್ತವಾಗಿದೆ. ಈ ಯೋಜನೆಯಿಂದಾಗಿ ಸಣ್ಣ ರಾಷ್ಟ್ರಗಳು ಸಾಲದ ಬಲೆಗೆ ಸಿಲುಕಲಿವೆ ಎಂಬುದು ಈ ಟೀಕೆಗೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT