ಶನಿವಾರ, ಸೆಪ್ಟೆಂಬರ್ 18, 2021
28 °C
ಗಾಲ್ವನ್‌ ಕಣಿವೆಯಿಂದ ಸೈನಿಕರು ವಾಪಸ್‌: ಗಡಿಯಲ್ಲಿ ಶಾಂತಿ ಮರಳುವ ಲಕ್ಷಣ ಗೋಚರ

ಹಿಂದೆ ಸರಿದ ಚೀನಾ ಸೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಭಾರತ–ಚೀನಾದ ಪೂರ್ವ ಲಡಾಖ್‌ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪ್ರಕ್ಷುಬ್ಧ ಸ್ಥಿತಿ ಶಮನದ ಆರಂಭಿಕ ಚಿಹ್ನೆಗಳು ಕಾಣಿಸಿಕೊಂಡಿವೆ. ಗಾಲ್ವನ್‌ ಕಣಿವೆ ಪ್ರದೇಶದಲ್ಲಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಚೀನಾ ಸೇನೆಯು ಆರಂಭಿಸಿದೆ ಮತ್ತು ಅಲ್ಲಿ ಹಾಕಿದ್ದ ಡೇರೆಗಳನ್ನು ತೆರವು ಮಾಡಿದೆ.

ಎರಡೂ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳ ನಡುವಣ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಗಾಲ್ವನ್‌ ಕಣಿವೆಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಜೂನ್‌ 15ರಂದು ಬಡಿದಾಟ ನಡೆದಿತ್ತು. ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾದ ಕಡೆ ಸಾವು ನೋವು ಸಂಭವಿಸಿದ್ದರೂ ಆ ದೇಶ ವಿವರಗಳನ್ನು ಬಹಿರಂಗ ಮಾಡಿಲ್ಲ. 

ಗಾಲ್ವನ್‌ ಕಣಿವೆಯ ಗಸ್ತು ಪಾಯಿಂಟ್‌ 14ರಲ್ಲಿದ್ದ ಡೇರೆಗಳು ಮತ್ತು ಇತರ ನಿರ್ಮಾಣಗಳನ್ನು ಚೀನಾ ಯೋಧರು ತೆರವು ಮಾಡಿದ್ದಾರೆ; ಗಾಲ್ವನ್‌ ಹಾಗೂ ಹಾಟ್‌ ಸ್ಪ್ರಿಂಗ್ಸ್‌ ಪ್ರದೇಶಗಳಿಂದಲೂ ಸೈನಿಕರು ಹಿಂದಕ್ಕೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಗಸ್ತು ಪಾಯಿಂಟ್‌ 14ರ ಸಮೀಪ ಚೀನಾದ ಸೈನಿಕರು ನಿಗಾ ಠಾಣೆಯೊಂದನ್ನು ರಚಿಸಲು ಮುಂದಾಗಿದ್ದು ಜೂನ್‌ 15ರ ಸಂಘರ್ಷಕ್ಕೆ ಕಾರಣವಾಗಿತ್ತು. ಚೀನಾದ ನಡೆಯನ್ನು ಭಾರತದ ಯೋಧರು ಬಲವಾಗಿ ವಿರೋಧಿಸಿದ್ದರು.

ಚೀನಾದ ಸೈನಿಕರು ಒಂದು ಕಿಲೋಮೀಟರ್‌ಗೂ ಹೆಚ್ಚು ಹಿಂದಕ್ಕೆ ಸರಿದಿದ್ದಾರೆ. ಆದರೆ, ಅವರು ಎಷ್ಟು ದೂರಕ್ಕೆ ಹೋಗಿದ್ದಾರೆ ಎಂಬು
ದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪರಿಶೀಲನೆ ಬಳಿಕವಷ್ಟೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಮೂಲಗಳು ಹೇಳಿವೆ.  

ಪಾಂಗಾಂಗ್‌ ಸರೋವರದ ಉತ್ತರ ದಂಡೆಯ ಫಿಂಗರ್‌ ಪ್ರದೇಶದಿಂದಲೂ ಕೆಲವು ಸೈನಿಕರು ಮತ್ತು ವಾಹನಗಳನ್ನು ಚೀನಾ ವಾಪಸ್‌ ಕರೆಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಸೈನಿಕರು ಗಸ್ತು ನಡೆಸುವುದಕ್ಕೆ ಫಿಂಗರ್‌ 4 ಪ್ರದೇಶದಲ್ಲಿ ಚೀನಾ ತಡೆ ಒಡ್ಡಿತ್ತು. ಭಾರತವು ಹಿಂದಿನಿಂದಲೂ ಗಸ್ತು ನಡೆಸುತ್ತಿದ್ದ ಫಿಂಗರ್‌ 8 ಪ್ರದೇಶದಿಂದ ಇದು ಸುಮಾರು ಎಂಟು ಕಿ.ಮೀ. ಒಳಭಾಗದಲ್ಲಿದೆ. 

ಈ ಎಲ್ಲ ಸಂಘರ್ಷಗಳ ನಡುವೆಯೂ ಭಾರತದ ಸೈನಿಕರು ತಮ್ಮ ಗಸ್ತನ್ನು ಇನ್ನಷ್ಟು ತೀವ್ರಗೊಳಿಸಿದ್ದರು. ಏಪ್ರಿಲ್‌ನಲ್ಲಿನ ಮುಖಾಮುಖಿಯಿಂದಾಗಿ ಚೀನಾದ ಬಗ್ಗೆ ಇದ್ದ ಅಪನಂಬಿಕೆಯೂ ನಿಗಾ ಹೆಚ್ಚಿಸಲು ಕಾರಣವಾಗಿತ್ತು ಎಂದು  ಹೇಳಲಾಗಿದೆ. 

ಫಲ ನೀಡಿದ ಸತತ ಸಭೆ

ಲೆಫ್ಟಿನೆಂಟ್‌ ಜನರಲ್‌ ಮಟ್ಟದ ಮೂರನೇ ಸುತ್ತಿನ ಮಾತುಕತೆ ಜೂನ್‌ 30ರಂದು ನಡೆದಿತ್ತು. ಬಿಕ್ಕಟ್ಟು ಶಮನಕ್ಕೆ ಆದ್ಯತೆ ನೀಡಿ ತ್ವರಿತವಾಗಿ ಮತ್ತು ಹಂತ ಹಂತವಾಗಿ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಈ ಸಭೆಯಲ್ಲಿ ಒಪ್ಪಿಕೊಳ್ಳಲಾಗಿತ್ತು.

ಮೊದಲನೇ ಸಭೆಯು ಜೂನ್‌ 6ರಂದು ನಡೆದಿತ್ತು. ಗಾಲ್ವನ್‌ ಕಣಿವೆಯಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಈ ಸಭೆಯಲ್ಲಿಯೇ ಸಮ್ಮತಿ ಸೂಚಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಯ ನಡುವೆಯೇ ಎರಡೂ ದೇಶಗಳ ಸೈನಿಕರ ನಡುವೆ ಹಿಂಸಾತ್ಮಕ ಸಂಘರ್ಷ ಏರ್ಪಟ್ಟು ಪರಿಸ್ಥಿತಿ ಗಂಭೀರ ಹಂತಕ್ಕೆ ಹೋಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್‌ನ ನಿಮು ಎಂಬಲ್ಲಿಗೆ ಶುಕ್ರವಾರ ಅಚ್ಚರಿಯ ಭೇಟಿ ನೀಡಿದ್ದರು. ‘ವಿಸ್ತರಣಾವಾದದ ದಿನಗಳು ಮುಗಿದಿವೆ. ವಿಸ್ತರಣಾವಾದಿಗಳು ಸೋತಿದ್ದಾರೆ ಅಥವಾ ನಾಶವಾಗಿದ್ದಾರೆ ಎಂಬುದಕ್ಕೆ ಇತಿಹಾಸದಲ್ಲಿ ಪುರಾವೆಗಳಿವೆ ಎಂದು ಮೋದಿ ಅಲ್ಲಿ ಹೇಳಿದ್ದರು. ಇದು ಚೀನಾಕ್ಕೆ ನೀಡಿದ ಪರೋಕ್ಷ ಎಚ್ಚರಿಕೆ ಎಂದು ವಿಶ್ಲೇಷಿಸಲಾಗಿತ್ತು.

ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಏಳು ವಾರಗಳ ಹಿಂದೆ ಮುಖಾಮುಖಿ ಆರಂಭವಾಗಿತ್ತು. ಈಗ ಸೈನಿಕರು ಹಿಂದಕ್ಕೆ ಸರಿಯುವುದರೊಂದಿಗೆ ಬಿಕ್ಕಟ್ಟು ಶಮನದ ಲಕ್ಷಣಗಳು ಕಾಣಿಸಿಕೊಂಡಿವೆ.

l ಎರಡೂ ಕಡೆಯ ಕಮಾಂಡರ್‌ಗಳ ಸಭೆಯಲ್ಲಿ ಸೈನಿಕರ ವಾಪಸಾತಿಯ ಶಿಷ್ಟಾಚಾರವನ್ನು ಅಂತಿಮಗೊಳಿಸಲಾಗಿದೆ

l ಬಿಕ್ಕಟ್ಟು ಶಮನಕ್ಕೆ ಕೈಗೊಂಡ ಕ್ರಮಗಳನ್ನು ಮುಂದಿನ 72 ತಾಸುಗಳಲ್ಲಿ ಎರಡೂ ಕಡೆಯ ಕಮಾಂಡರ್‌ಗಳು ದೃಢೀಕರಿಸಲಿದ್ದಾರೆ

l ಈ ದೃಢೀಕರಣದ ಬಳಿಕವೇ ಮುಂದಿನ ಹಂತಕ್ಕೆ ಹೋಗಲಾಗುವುದು

ಎಲ್‌ಎಸಿ: ಏಕಪಕ್ಷೀಯ ಕ್ರಮಕ್ಕಿಲ್ಲ ಅವಕಾಶ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ನಡುವೆ ಭಾನುವಾರ ದೂರವಾಣಿ ಮೂಲಕ ಮಾತುಕತೆ ನಡೆದಿದೆ. ಈ ಸಭೆಯಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ, ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲಾಗಿದೆ. ಎಲ್‌ಎಸಿಯಿಂದ ಸೈನಿಕರನ್ನು ಆದಷ್ಟು ಬೇಗನೆ ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಈ ಮಾತುಕತೆಯಲ್ಲಿ ಸಮ್ಮತಿ ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಗಡಿ ವಿವಾದ ಮಾತುಕತೆಗೆ ಸಂಬಂಧಿಸಿ ಡೊಭಾಲ್‌ ಮತ್ತು ವಾಂಗ್‌ ಅವರನ್ನು ವಿಶೇಷ ಪ್ರತಿನಿಧಿಗಳನ್ನಾಗಿ ನೇಮಿಸಲಾಗಿದೆ.
ಕಳೆದ ಕೆಲವು ವಾರಗಳಲ್ಲಿ ಎಲ್‌ಎಸಿಯಲ್ಲಿ ನಿಯೋಜಿಸಲಾಗಿರುವ ಹೆಚ್ಚುವರಿ ಸೈನಿಕರನ್ನು ಹಂತ ಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಈ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎಲ್‌ಎಸಿಯಲ್ಲಿ ಯಾವುದೇ ಉಲ್ಲಂಘನೆಗಳಿಗೆ ಅವಕಾಶ ಇರಬಾರದು ಮತ್ತು ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಡೊಭಾಲ್‌ ಮತ್ತು ವಾಂಗ್‌ ಪುನರುಚ್ಚರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಎರಡೂ ದೇಶಗಳು ಸಕಾರಾತ್ಮಕ ನಿಲುವಿಗೆ ಬಂದಿವೆ ಎಂದು ಚೀನಾ ಕೂಡ ಹೇಳಿದೆ. ಈ ಬೆಳವಣಿಗೆಯನ್ನು ಆ ದೇಶವು ಸ್ವಾಗತಿಸಿದೆ.
ಆದರೆ, ಚೀನಾ ಸರ್ಕಾರವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಗಡಿ ಬಿಕ್ಕಟ್ಟು ಶಮನಕ್ಕೆ ಆಗಿರುವ ಒಪ್ಪಂದದ ಉಲ್ಲೇಖ ಇಲ್ಲ. ಭಾರತ–ಚೀನಾದ ಸೇನೆಯ ಹಿರಿಯ ಕಮಾಂಡರ್‌ಗಳ ಮಟ್ಟದ ಮಾತುಕತೆಯಲ್ಲಿ ಸಹಮತಕ್ಕೆ ಬಂದ ಅಂಶಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಬೇಕು ಎಂಬುದಕ್ಕೆ ಡೊಭಾಲ್‌–ವಾಂಗ್‌ ಮಾತುಕತೆಯಲ್ಲಿ ಒತ್ತು ನೀಡಲಾಗಿದೆ ಎಂದಷ್ಟೇ ಚೀನಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು