ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ವಿಭಜನೆಯ ಅಂಚಿನಲ್ಲಿ ಕಾಂಗ್ರೆಸ್‌

Last Updated 15 ಜುಲೈ 2020, 10:40 IST
ಅಕ್ಷರ ಗಾತ್ರ

ಪಟ್ನಾ: ರಾಜಸ್ಥಾನದಂತೆ, ಬಿಹಾರದಲ್ಲೂ ಕಾಂಗ್ರೆಸ್‌ ಪಕ್ಷವು ವಿಭಜನೆಯ ಅಂಚಿನಲ್ಲಿದೆ. ರಾಜ್ಯದಲ್ಲಿ ಸದ್ಯದಲ್ಲೇ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ನ ಕೆಲವು ಶಾಸಕರು ಪಕ್ಷವನ್ನು ತೊರೆದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿಯ ಆತ್ಮೀಯ ವಲಯದಲ್ಲಿರುವ, ಸಚಿವರೊಬ್ಬರು ಕಾಂಗ್ರೆಸ್‌ ಶಾಸಕರ ಜತೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯು ಕೊನೆಯ ಹಂತದಲ್ಲಿದೆ. ವಿಧಾನಸಭಾ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ, ಸಾಮೂಹಿಕ ಪಕ್ಷಾಂತರ ನಡೆಯುವ ನಿರೀಕ್ಷೆ ಇದೆ. 15ರಿಂದ 26 ಮಂದಿ ಶಾಸಕರು ಕಾಂಗ್ರೆಸ್‌ ತೊರೆದು ಜೆಡಿಯು ಸೇರುವ ಸಾಧ್ಯತೆ ಇದೆ’ ಎಂದು ವಿಶ್ವಾಸಾರ್ಹ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

2015ರ ಚುನಾವಣೆಯಲ್ಲಿ ವಿರೋಧಪಕ್ಷಗಳು ಒಟ್ಟಾಗಿ ಬಿಹಾರದಲ್ಲಿ ಮಹಾಘಟಬಂಧನ ರಚಿಸಿ ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದವು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ 27 ಸ್ಥಾನಗಳನ್ನು ಪಡೆದಿತ್ತು. ಅದರಲ್ಲಿ ಮೊಹಮ್ಮದ್‌ ಜಾವೇದ್‌ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾದರು. ಉಳಿದಿರುವ 26 ಶಾಸಕರಲ್ಲೂ ಹೆಚ್ಚಿನವರು ತಮ್ಮ ಗೆಲುವಿಗೆ ನಿತೀಶ್‌ ಅವರೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ಗೆ 41 ಕ್ಷೇತ್ರಗಳನ್ನು ಬಿಟ್ಟುಕೊಡುವ ಮೂಲಕ ನಿತೀಶ್‌ ಉದಾರತೆ ತೋರಿದ್ದರು ಎಂದು ಅವರು ಭಾವಿಸುತ್ತಾರೆ.

ಪಕ್ಷಾಂತರದ ಸಾಧ್ಯತೆಯನ್ನು ಆಡಳಿತಾರೂಢ ಜೆಡಿಯು ಪಕ್ಷವೂ ತಳ್ಳಿಹಾಕಿಲ್ಲ. ‘ರಾಜ್ಯದಲ್ಲಿ ನಿತೀಶ್‌ ಅವರಿಗೆ ಪರ್ಯಾಯ ಇಲ್ಲ ಎಂಬುದು ಸ್ಪಷ್ಟವಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ಭವಿಷ್ಯವಿಲ್ಲ ಎಂಬುದನ್ನು ಆ ಪಕ್ಷದ ಶಾಸಕರು ಕಂಡುಕೊಂಡಿದ್ದಾರೆ. ಆದ್ದರಿಂದ ಅವರು ನಿತೀಶ್‌ ಅವರ ಕೈಗಳನ್ನು ಬಲಪಡಿಸಲು ಶ್ರಮಿಸಬಹುದು. ಎನ್‌ಡಿಎ ಒಳಗೆ ಇದ್ದುಕೊಂಡು, ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಮುಖ್ಯಮಂತ್ರಿ ಸ್ಥಾನವು ನಿತೀಶ್‌ ಅವರಲ್ಲೇ ಉಳಿಯುವಂತೆ ಮಾಡಬಹುದು’ ಎಂದು ಜೆಡಿಯುನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಲಾಲೂ ಪ್ರಸಾದ್‌ ನೇತೃತ್ವದ ಆರ್‌ಜೆಡಿ ವಿರುದ್ಧ ಈ ಶಾಸಕರಿಗೆ ವಿಪರೀತ ಸಿಟ್ಟು ಇದೆ. 2019ರ ಲೋಕಸಭಾ ಚುನಾವಣೆಯಲ್ಲಿ 40ರಲ್ಲಿ 9 ಕ್ಷೇತ್ರಗಳನ್ನು ಮಾತ್ರ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದ ಆರ್‌ಜೆಡಿಯು ಕಾಂಗ್ರೆಸ್‌ ಅನ್ನು ಅಪಮಾನಿಸಿದೆ. ಆದ್ದರಿಂದ ಆ ಪಕ್ಷದ ಜತೆಗೆ ಇನ್ನೊಮ್ಮೆ ಕೈಜೋಡಿಸಲು ಅವರು ಸಿದ್ಧರಿಲ್ಲ.

‘ಬಿಹಾರದಲ್ಲಿ ಕಾಂಗ್ರೆಸ್‌ ವಿಭಜನೆಯಾಗುವುದನ್ನು ತಡೆಯಲಾಗದು. ಆಗಸ್ಟ್‌ನಲ್ಲಿ ನಡೆಯಲಿರುವ ಮುಂಗಾರು ಅಧಿವೇಶನದ ನಂತರ ಈ ವಿಭಜನೆ ಸಂಭವಿಸುವ ಸಾಧ್ಯತೆ ಇದೆ’ ಎಂದು ಬಿಹಾರ ರಾಜ್ಯ ಘಟಕದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT