ಬುಧವಾರ, ಆಗಸ್ಟ್ 4, 2021
21 °C
ರಾಜಕಾರಣ

ಕೊರೊನಾ ಹರಡಲು ನರೇಂದ್ರ ಮೋದಿ, ಅಮಿತ್‌ ಶಾ ಕಾರಣ: ಮಲ್ಲಿಕಾರ್ಜುನ ಖರ್ಗೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶ ಹಾಳು ಮಾಡಲು ಕೆಟ್ಟ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದಾರೆ. ಕೊರೊನಾ ಇಷ್ಟೊಂದು ಪ್ರಮಾಣದಲ್ಲಿ ಹರಡಲು ಅವರಿಬ್ಬರು ಕಾರಣ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಗುರುವಾರ ಇಲ್ಲಿ ಕೆಪಿಸಿಸಿ ಅಧ್ಯಕ್ಷದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸುಳ್ಳು ಹೇಳಿ ಬಿಜೆಪಿಯವರು ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಇದರ ಹಿಂದೆ ಆರ್‌ಎಸ್‌ಎಸ್‌ ಇದೆ. ಎಲ್ಲಿವರೆಗೆ ಮೋದಿ ಅವರು ಆರ್‌ಎಸ್‌ಎಸ್‌ ಹತ್ತಿಕ್ಕುವುದಿಲ್ಲವೋ ಅಲ್ಲಿಯವರೆಗೂ ದೇಶದ ಯುವಕರಿಗೆ ಭವಿಷ್ಯವಿಲ್ಲ ಎಂದರು.

ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಮನೆ ಖಾಲಿ ಮಾಡಿಸುತ್ತಿದ್ದಾರೆ. ರಾಜೀವ್ ಗಾಂಧಿ ಫೌಂಡೇಶನ್‌ ಚೀನಾ ರಾಜತಾಂತ್ರಿಕ ಕಚೇರಿಯಿಂದ ಹಣ ಪಡೆದಿರುವ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಈಗ ಮೋದಿಯವರು ಪಿಎಂ ಕೇರ್ಸ್ ಫಂಡ್ ಮಾಡಿದ್ದಾರೆ. ಸಂವಿಧಾನದಲ್ಲಿ ಇದು ಇಲ್ಲ. ಪೆಟಿಎಂ, ಟಿಕ್‌ಟಾಕ್ ಸೇರಿದಂತೆ ಚೀನಾ ಕಂಪನಿಗಳಿಂದ ನೂರಾರು ಕೋಟಿ ದೇಣಿಗೆ ಪಡೆದಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ. ತಂತ್ರಜ್ಞಾನ ಬಳಸಿಕೊಂಡು ಬಿಜೆಪಿ ವೈಫಲ್ಯ ತೋರಿಸಬೇಕಿದೆ. ಪಿಎಂ ಕೇರ್ಸ್ ನಲ್ಲಿ ₹ 9500 ಕೋಟಿ  ಸಂಗ್ರಹವಾಗಿದೆ ಎಂದರು.

ಗಡಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ ಅವರ ಬಗ್ಗೆ ವಾಸ್ತವ ಸ್ಥಿತಿ ತಿಳಿಸಿ ಎಂದು ಕೇಳಿದರೆ, ಪ್ರಧಾನಿ ನಮ್ಮ ಸರಹದ್ದಿನಲ್ಲಿ ಯಾರೂ ಬಂದಿಲ್ಲ. ನಮ್ಮ ಭೂಮಿ ಯಾರೂ ವಶಪಡಿಸಿಡಿಲ್ಲ ಎಂದು ಹೇಳಿದರು. ಹಾಗಿದ್ದರೆ 20 ಜನ ಸೈನಿಕರು ಹೇಗೆ ಪ್ರಾಣ ಕಳೆದುಕೊಂಡರು ಎನ್ನುವುದನ್ನು ಜನರಿಗೆ ತಿಳಿಸಬೇಕು. ಮೋದಿ ಏನೇ ಮಾತನಾಡಿದರು ಯುವಕರು ಚಪ್ಪಾಳೆ ಹೊಡೆಯುತ್ತಾರೆ ಎಂದು ವಿಷಾದಿಸಿದರು.

ಕೊರೊನಾ ಸಂದರ್ಭದಲ್ಲಿ ₹ 20 ಲಕ್ಷ ಕೋಟಿ ಪರಿಹಾರ ನೀಡುತ್ತೇವೆ ಎನ್ನುತ್ತಾರೆ ಆದರೆ, ಅದರಲ್ಲಿ ಕೇವಲ 1.75 ಲಕ್ಷ ಕೋಟಿ ಮಾತ್ರ ಹಣ ದೊರೆಯುತ್ತದೆ. ಇಂಥ ಕೆಟ್ಟ ಸರ್ಕಾರವನ್ನು ಕಿತ್ತೊಗೆಯದಿದ್ದರೆ ದೇಶದ ಯುವಕರಿಗೆ ಭವಿಷ್ಯವಿಲ್ಲ ಎಂದರು‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು