ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 86ಕ್ಕೆ ಏರಿಕೆ

Last Updated 1 ಆಗಸ್ಟ್ 2020, 16:58 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ನಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಡಿವೈಎಸ್‌ಪಿ, ನಾಲ್ವರು ಠಾಣಾಧಿಕಾರಿಗಳು ಹಾಗೂ ಏಳು ಮಂದಿ ಅಬಕಾರಿ ಅಧಿಕಾರಿಗಳನ್ನು ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಅಮಾನತು ಮಾಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

‘ಪಂಜಾಬ್‌ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರವನ್ನೂ ಘೋಷಿಸಿದೆ’ ಎಂದೂ ಅವರು ತಿಳಿಸಿದ್ದಾರೆ. ಪ್ರಕರಣದ ಕುರಿತು ನ್ಯಾಯಾಂಗ‌ ತನಿಖೆ ನಡೆಸುವಂತೆ ಅಮರಿಂದರ್‌ ಸಿಂಗ್‌ ಶುಕ್ರವಾರ ಆದೇಶಿಸಿದ್ದರು. ನಕಲಿ ಮದ್ಯದ ಜಾಲವನ್ನು ಶೀಘ್ರವೇ ಬೇಧಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪೊಲೀಸರು ಈಗಾಗಲೇ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ‘ತರ್ನ್‌ ಟರಾನ್‌ ಜಿಲ್ಲೆಯಲ್ಲಿ ಶನಿವಾರ ಮತ್ತೆ 44 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಈ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆಯು 63ಕ್ಕೆ ತಲುಪಿದೆ. ನಗರ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲೇ ಅಧಿಕ ಮಂದಿ ಸತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಕುಲ್ವಂತ್‌ ಸಿಂಗ್‌ ತಿಳಿಸಿದ್ದಾರೆ.

ಅಮೃತಸರದಲ್ಲಿ 12 ಮತ್ತು ಗುರುದಾಸ‌ಪುರದ ಬಟಾಲದಲ್ಲಿ ಈವರೆಗೆ 11 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ‘ಮೃತರ ಕುಟುಂಬದವರು ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ನಾವು ಅವರ ಮನವೊಲಿಸುವ ಕೆಲಸ ಮಾಡುತ್ತಲೇ ಇದ್ದೇವೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ತಮ್ಮವರು ನಕಲಿ ಮದ್ಯ ಸೇವಿಸಿ ಸತ್ತಿದ್ದಾರೆ ಎಂಬುದನ್ನು ಕೆಲ ಕುಟುಂಬದವರು ಒಪ್ಪಲು ತಯಾರಿಲ್ಲ. ಹೃದಯಾಘಾತದಿಂದಲೇ ನಿಧನರಾಗಿದ್ದಾರೆ ಎಂದು ಅವರೆಲ್ಲಾ ವಾದಿಸುತ್ತಿದ್ದಾರೆ’ ಎಂದು ಗುರುದಾಸಪುರದ ಜಿಲ್ಲಾಧಿಕಾರಿ ಮಹಮ್ಮದ್‌ ಇಸ್ಫಾಕ್‌ ಹೇಳಿದ್ದಾರೆ. ಘಟನೆಯ ನೈತಿಕ ಹೊಣೆ ಹೊತ್ತು ಅಮರಿಂದರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಮ್‌ ಆದ್ಮಿ ಪಕ್ಷವು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT