ಸೋಮವಾರ, ಆಗಸ್ಟ್ 2, 2021
23 °C

ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಲ್ಲಿ ಸರ್ಕಾರ ವಿಫಲ: ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಮುಂಬೈ: ‘2016ರಲ್ಲಿ ನೋಟು ಅಮಾನ್ಯೀಕರಣ, ನಂತರ ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯ ವಿಭಜನೆಯ ಬಳಿಕವೂ ಜಮ್ಮು ಕಾಶ್ಮೀರದ ಸ್ಥಿತಿಯಲ್ಲಿ ಏನೂ ಬದಲಾವಣೆ ಆಗಿಲ್ಲ. ಕೇಂದ್ರದಲ್ಲಿ ‘ಬಲಿಷ್ಠ’ ಸರ್ಕಾರ ಇದ್ದರೂ ಶಾಂತಿ ಸ್ಥಾಪನೆ ಏಕೆ ಸಾಧ್ಯವಾಗಿಲ್ಲ?’ ಎಂದು ಶಿವಸೇನಾ ಪ್ರಶ್ನಿಸಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಈ ಬಗ್ಗೆ ಸಂಪಾದಕೀಯ ಪ್ರಕಟಿಸಲಾಗಿದ್ದು, ‘ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರವೂ ಜಮ್ಮು– ಕಾಶ್ಮೀರದ ಸ್ಥಿತಿ ಹಿಂದಿನಂತೆಯೇ ಇದೆ. ನಿತ್ಯ ರಸ್ತೆಗಳಲ್ಲಿ ರಕ್ತ ಹರಿಯುತ್ತಿದೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಯೋತ್ಪಾದಕ ಚಟುವಟಿಕೆ, ನಕಲಿ ನೋಟುಗಳ ಚಲಾವಣೆಯಲ್ಲಿ ಕಡಿತ ಆಗಿಲ್ಲ’ ಎಂದು ದೂರಿದೆ.

‘ಸೊಪೊರೆಯಲ್ಲಿ ಈಚೆಗೆ ನಡೆದ ಘರ್ಷಣೆಯಲ್ಲಿ ನಾಗರಿಕರೊಬ್ಬರು ಸತ್ತಿರುವುದು ಹಾಗೂ ಮೂರು ವರ್ಷದ ಮಗು ಅಜ್ಜನ ಎದೆಯಮೇಲೆ ಕುಳಿತು ಅವರನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದ ಚಿತ್ರವನ್ನು ಉಲ್ಲೇಖಿಸಿದ ಪತ್ರಿಕೆ, ‘ಕೇಂದ್ರದ ಕೆಲವು ಸಚಿವರೇ ಈ ಚಿತ್ರವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ಸರ್ಕಾರದ ವಿಫಲತೆಯನ್ನು ಈ ಚಿತ್ರ ಪ್ರದರ್ಶಿಸುತ್ತದೆ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು. ಜಮ್ಮು– ಕಾಶ್ಮೀರದ ಈ ಸ್ಥಿತಿಯ ಹೊಣೆಯನ್ನು ಸರ್ಕಾರವೇ ಹೊರಬೇಕು’ ಎಂದು ಹೇಳಿದೆ.

‘ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶಿವಸೇನಾ, ‘ಕಳೆದ ಆರು ತಿಂಗಳಿಂದ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಿವೆ. ಸೈನಿಕರು ಉಗ್ರರನ್ನು ಎದುರಿಸಿದ್ದರೂ ಹಲವರು ಹುತಾತ್ಮರಾಗಿದ್ದಾರೆ ಎಂಬುದನ್ನು ಮರೆಯಬಾರದು. ಲಡಾಕ್‌ನಲ್ಲಿ ಚೀನೀಯರ ವಿರುದ್ಧ ಹಾಗೂ ಕಾಶ್ಮೀರದಲ್ಲಿ ಪ್ರತ್ಯೆಕತಾವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು