ಶುಕ್ರವಾರ, ಸೆಪ್ಟೆಂಬರ್ 17, 2021
26 °C

ತಿರುಪತಿಯಲ್ಲಿ ಭಕ್ತಿಗೆ ಅವಕಾಶ: ಕೋವಿಡ್‌–19 ಕೇಂದ್ರವಾಗುವ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲು ದೇವಸ್ಥಾನದ ಆಡಳಿತ ಮಂಡಳಿಯು ತೀರ್ಮಾನಿಸಿದ್ದರಿಂದಾಗಿ ದೇವಸ್ಥಾನವು ಕೋವಿಡ್‌–19 ರೋಗ ಹರಡುವ ಕೇಂದ್ರವಾಗಬಹುದೆಂಬ ಭೀತಿ ಮೂಡಿದೆ.

20 ಅರ್ಚಕರು ಕೆಲವು ಅಡುಗೆ ಸಿಬ್ಬಂದಿ ಸೇರಿದಂತೆ ಈವರೆಗೆ ದೇವಸ್ಥಾನದ 179 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಹಲವರು ಗುಣಮುಖರಾಗಿದ್ದಾರೆ. ದೇವಸ್ಥಾನಕ್ಕೆ ಹೋಗಿ ಬಂದ ಕೆಲವರು ಸೋಂಕಿಗೆ ಒಳಗಾಗಿರುವ ಬಗ್ಗೆಯೂ ವರದಿಯಾಗಿದೆ. ಆದರೆ, ಇವರಿಗೆ ಬೇರೆ ಕಡೆಯಿಂದ ಸೋಂಕು ತಗಲಿರಬಹುದು ಎಂದು ಆಡಳಿತ ಮಂಡಳಿಯವರು ವಾದಿಸಿದ್ದಾರೆ.

ಆಂಧ್ರಪ್ರದೇಶದ ಇನ್ನೊಂದು ದೇವಸ್ಥಾನ ಶ್ರೀಶೈಲಂ ಅನ್ನು ಕೋವಿಡ್‌ ಕಾರಣದಿಂದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮುಚ್ಚಲಾಗಿದೆ. ದೇವಸ್ಥಾನದ ಐವರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆಡಳಿತ ಮಂಡಳಿಯವರು ಜುಲೈ 14ರಂದು, ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ನೀಡದಿರಲು ತೀರ್ಮಾನಿಸಿತ್ತು.

ಆದರೆ, ತಿರುಮಲಕ್ಕೆ ಈಗಲೂ ಭಕ್ತರು ಭೇಟಿ ನೀಡುತ್ತಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ‘ಟಿಟಿಡಿಯು ಪ್ರತಿದಿನ ತಲಾ ₹300 ಶುಲ್ಕ ಪಡೆದು, 9,000 ಟೋಕನ್‌ಗಳನ್ನು ವಿತರಿಸುತ್ತಿದೆ. ಆದರೆ 6,000ಕ್ಕೂ ಕಡಿಮೆ ಭಕ್ತರು ಭೇಟಿ ನೀಡುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಕೋವಿಡ್‌ಗೂ ಹಿಂದೆ ಈ ದೇವಸ್ಥಾನಕ್ಕೆ ಪ್ರತಿನಿತ್ಯ 70,000ಕ್ಕೂ ಹೆಚ್ಚು ಭಕ್ತರು ಬರುತ್ತಿದ್ದರು.

ತಿರುಪತಿ ನಗರದಲ್ಲಿ 2,000ಕ್ಕೂ ಕೆಚ್ಚು ಕೋವಿಡ್‌ ಸೋಂಕಿತರಿದ್ದಾರೆ. ಆಗಸ್ಟ್‌ 5ರವರೆಗೆ ಇಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಆದ್ದರಿಂದ ಸ್ಥಳೀಯರಿಗೆ ಪ್ರತಿನಿತ್ಯ 3000 ಉಚಿತ ಟೋಕನ್‌ ವಿತರಣೆಯನ್ನು ಟಿಟಿಡಿಯು ಸ್ಥಗಿತಗೊಳಿಸಿದೆ. ಹಲವು ಹಿಂದೂ ಸಂಘಟನೆಗಳು ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ನೀಡಿರುವುದನ್ನು ವಿರೋಧಿಸಿವೆ.

‘ಹಲವು ಅರ್ಚಕರಿಗೆ ಸೋಂಕು ತಗುಲಿರುವುದರಿಂದ ನಿತ್ಯದ ಕೈಂಕರ್ಯ ನಡೆಸುವುದು ಕಷ್ಟವಾಗಿದೆ. ದರ್ಶನಕ್ಕೆ ಅವಕಾಶ ನೀಡಿದರೆ ದೇವಸ್ಥಾನವು ಕೋವಿಡ್‌ ಪಸರಿಸುವ ಕೇಂದ್ರವಾಗುವುದು. ಇದರಿಂದ ಜಾಗತಿಕ ಮಟ್ಟದಲ್ಲಿ ಈ ದೇವಸ್ಥಾನದ ಘನತೆಗೆ ಕುಂದು ಉಂಟಾಗುತ್ತದೆ’ ಎಂದು ಬಿಜೆಪಿ ಆಂಧ್ರಪ್ರದೇಶ ಘಟಕದ ಕಾರ್ಯದರ್ಶಿ, ಟಿಟಿಡಿ ಆಡಳಿತ ಮಂಡಳಿಯ ಮಾಜಿ ಸದಸ್ಯ ಭಾನುಪ್ರಕಾಶ ರೆಡ್ಡಿ ಹೇಳಿದ್ದಾರೆ.

ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಅವರು ಆಂಧ್ರದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರಿಗೆ ಪಕ್ಷದ ಪರವಾಗಿ ಪತ್ರವನ್ನೂ ಬರೆದಿದ್ದಾರೆ.

‘ಭಕ್ತರ ಆರೋಗ್ಯದ ದೃಷ್ಟಿಯಿಂದ ದೇವಸ್ಥಾನವನ್ನು ಕೆಲವು ದಿನಗಳ ಮಟ್ಟಿಗೆ ಮುಚ್ಚುವುದು ಅಗತ್ಯ’ ಎಂದು ಚಿತ್ತೂರ್‌ನ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ದೇವಸ್ಥಾನಕ್ಕೆ ಈಗ ಸಾರ್ವಜನಿಕರಿಗೆ ಪ್ರವೇಶ ನೀಡಬಾರದು. ದೇವಸ್ಥಾನಕ್ಕೆ ಆರ್ಥಿಕ ಸಮಸ್ಯೆ ಇದೆ ಎಂಬ ಹುಸಿ ಭಾವನೆ ಮೂಡಿಸಲಾಗುತ್ತಿದೆ. ಇನ್ನೂ ಒಂದು ವರ್ಷದವರೆಗೆ ಮುಚ್ಚಿದ್ದರೂ ದೇವಸ್ಥಾನಕ್ಕೆ ಆರ್ಥಿಕ ಸಮಸ್ಯೆ ಎದುರಾಗದು’ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ, ಹಿಂದೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯೂ ಆಗಿದ್ದ ಕೃಷ್ಣ ರಾವ್‌ ಹೇಳಿದ್ದಾರೆ.

ಈ ದೇವಸ್ಥಾನಕ್ಕೆ ಭಕ್ತರು ಸಲ್ಲಿಸುವ ಕಾಣಿಕೆಯೇ ಮುಖ್ಯ ಆದಾಯ. ಪ್ರತಿದಿನ ಸರಾಸರಿ ₹3.5 ಕೋಟಿ ಹಣವು ಹುಂಡಿಯಲ್ಲಿ ಸಂಗ್ರಹವಾಗುತ್ತದೆ. ‘ದೇವಸ್ಥಾನದ ಒಟ್ಟು ವೆಚ್ಚದ ಶೇ 10ರಷ್ಟು ಹಣವೂ ಈಗ ಸಂಗ್ರಹವಾಗುತ್ತಿಲ್ಲ’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬರೆಡ್ಡಿ ಅವರು ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’ಗೆ ತಿಳಿಸಿದ್ದರು. ಅಲ್ಲದೆ, ‘ದೇವಸ್ಥಾನಕ್ಕೆ ಬಂದ ಭಕ್ತರು ಯಾರಿಗೂ ಸೋಂಕು ತಗುಲಿಲ್ಲ, ಭಕ್ತರಿಂದ ಸಿಬ್ಬಂದಿಗೆ ಸೋಂಕು ತಗುಲಿದ ಉದಾಹರಣೆಯೂ ಇಲ್ಲ. ಕೆಲವರಿಗೆ ಸೋಂಕು ತಗುಲಿ ಅವರು ಚೇತರಿಸಿಕೊಂಡು ಮರಳಿ ಕೆಲಸಕ್ಕೆ ಬಂದಿದ್ದಾರೆ' ಎಂದೂ ಅವರು ಹೇಳಿದ್ದರು.

‘ಕೆಂದ್ರ ಸರ್ಕಾರವು ದೇಶದ ಎಲ್ಲಾ ದೇವಸ್ಥಾನಗಳಿಗೆ ಜಾರಿ ಮಾಡಿರುವ ಮಾರ್ಗಸೂಚಿಗೆ ಅನುಸಾರವಾಗಿಯೇ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನಾವಕಾಶ ನಿಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ತಿರುಪತಿಗೆ ದೂರದೂರದಿಂದ ಭಕ್ತರು ಬರುತ್ತಾರೆ. ದೇವಸ್ಥಾನವನ್ನು ವೈರಸ್‌ ಮುಕ್ತಗೊಳಿಸಿದರೂ ಭಕ್ತರು ಪ್ರಯಾಣದ ಸಂದರ್ಭದಲ್ಲಿ ಬೇರೆ ಎಲ್ಲಿಂದಲಾದರೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ತಾತ್ಕಾಲಿಕವಾಗಿ ದೇವಸ್ಥಾನವನ್ನು ಮುಚ್ಚಿ, ಭಕ್ತರಿಗೆ ಸೋಂಕು ತಗುಲದಂತೆ ಎಚ್ಚರ ವಹಿಸುವುದೇ ದೇವರಿಗೆ ಮಾಡಬಹುದಾದ ಉತ್ತಮ ಸೇವೆ’ ಎಂದು ಭಾರತೀಯ ಧರ್ಮ ಪರಿರಕ್ಷಣಾ ವೇದಿಕೆಯ ಖಜಾಂಜಿ ಡಿ.ಎ.ಆರ್‌. ಸುಬ್ರಮಣ್ಯಂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು