ಮಂಗಳವಾರ, ಆಗಸ್ಟ್ 3, 2021
27 °C

ಗಾಂಧಿ ಕುಟುಂಬದ 3 ಟ್ರಸ್ಟ್‌ಗಳ ವಿರುದ್ಧ ತನಿಖೆಗೆ ಅಂತರ್‌ ಸಚಿವಾಲಯ ಸಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜೀವ್‌ ಗಾಂಧಿ ಫೌಂಡೇಶನ್‌ (ಆರ್‌ಜಿಎಫ್‌) ಸೇರಿದಂತೆ ನೆಹರೂ–ಗಾಂಧಿ ಪರಿವಾರದ ನೇತೃತ್ವದಲ್ಲಿರುವ ಮೂರು ಸಂಸ್ಥೆಗಳಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ, ವಿದೇಶಿ ದೇಣಿಗೆ ಮುಂತಾದ ಕಾನೂನು ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸಲು ಅಂತರ್‌ ಸಚಿವಾಲಯ ಸಮಿತಿಯನ್ನು ರಚಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಈ ಬಗ್ಗೆ ಟ್ವೀಟ್‌ ಮಾಡಿದ್ದು, ಜಾರಿ ನಿರ್ದೇಶನಾಲಯದ ಒಬ್ಬ ವಿಶೇಷ ನಿರ್ದೇಶಕರು ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದಿದ್ದಾರೆ.

ರಾಜೀವ್‌ ಗಾಂಧಿ ಫೌಂಡೇಶನ್‌, ರಾಜೀವ್‌ ಗಾಂಧಿ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಇಂದಿರಾಗಾಂಧಿ ಮೆಮೋರಿಯಲ್‌ ಟ್ರಸ್ಟ್‌ ಗಳಲ್ಲಿ ನಡೆದಿದೆ ಎನ್ನಲಾದ, ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಎಫ್‌ಸಿಆರ್‌ಎಯ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಂತರ ಸಚಿವಾಲಯ ಸಮಿತಿಯೊಂದನ್ನು ಗೃಹ ಇಲಾಖೆಯು ರಚಿಸಿದೆ’ ಎಂದು ವಕ್ತಾರರು ಟ್ವೀಟ್‌ ಮಾಡಿದ್ದಾರೆ.

ರಾಜಕೀಯ ಉದ್ದೇಶ ಇಲ್ಲ: ಮೂರು ಟ್ರಸ್ಟ್‌ಗಳ ಹಣಕಾಸು ವ್ಯವಹಾರದ ಬಗ್ಗೆ ತನಿಖೆ ನಡೆಸಲು ಸರ್ಕಾರ ಕೈಗೊಂಡಿರುವ ಕ್ರಮವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

‘ಈ ತನಿಖೆಯ ಹಿಂದೆ ರಾಜಕೀಯ ಉದ್ದೇಶವಿದ್ದರೆ ಆರು ವರ್ಷಗಳ ಕಾಲ ಕಾಯುತ್ತಿರಲಿಲ್ಲ. ಇದೊಂದು ಸಹಜ ತನಿಖೆಯಾಗಿದೆ. ಇತ್ತೀಚೆಗೆ ಹಣಕಾಸಿನ ವ್ಯವಹಾರದ ಕುರಿತು ಸಾರ್ವಜನಿಕವಾಗಿ
ಮಾಹಿತಿ ಬಹಿರಂಗವಾಗಿದ್ದರಿಂದ ಸರ್ಕಾರ ಕ್ರಮಕೈಗೊಂಡಿದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ಮುರುಳಿಧರ್‌ ರಾವ್‌ ತಿಳಿಸಿದ್ದಾರೆ.

 1991ರಲ್ಲಿ  ರಾಜೀವ್‌ ಗಾಂಧಿ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದ್ದು, ಸೋನಿಯಾ ಗಾಂಧಿ ಅವರು ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ರಾಜೀವ್‌ ಗಾಂಧಿ ಚಾರಿಟೇಬಲ್‌ ಟ್ರಸ್ಟ್‌ಗೂ ಅವರೇ ಅಧ್ಯಕ್ಷರಾಗಿದ್ದಾರೆ. ಇಂದಿರಾಗಾಂಧಿ ಮೆಮೋರಿಯಲ್‌ ಟ್ರಸ್ಟ್‌ನ ಕಾರ್ಯಗಳ ಉಸ್ತುವಾರಿಯನ್ನು ಸಹ ಸೋನಿಯಾ ಅವರೇ ವಹಿಸಿಕೊಂಡಿದ್ದಾರೆ.

ಬೆದರಿಕೆಗೆ ಮಣಿಯುವುದಿಲ್ಲ: ರಾಹುಲ್‌

‘ಸತ್ಯಕ್ಕಾಗಿ ಹೋರಾಟ ನಡೆಸುವವರಿಗೆ ಮೋದಿ ಸರ್ಕಾರ ಬೆದರಿಕೆ ಹಾಕುವ ಪ್ರಯತ್ನ ಮಾಡುತ್ತಿದೆ’ ಎಂದು ಸಂಸದ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

‘ಇಡೀ ವಿಶ್ವ ತಮ್ಮಂತೆ ಇದೆ ಎಂದು ಮೋದಿ ಅವರು ಭಾವಿಸಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಬೆಲೆ ಕಟ್ಟಬಹುದು ಅಥವಾ ಬೆದರಿಸಬಹುದು ಎಂದು ಅವರು ತಿಳಿದುಕೊಂಡಿದ್ದಾರೆ. ಆದರೆ, ಸತ್ಯಕ್ಕಾಗಿ ಹೋರಾಟ ನಡೆಸುವವರನ್ನು ಬೆದರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

‘ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡುತ್ತೇವೆ’ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು