ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಷೇಪಾರ್ಹ ಚಿತ್ರ ತೆಗೆಯಲು ಗೂಗಲ್‌ ಹಾಗೂ ಫೇಸ್‌ಬುಕ್‌ಗೆ ದೆಹಲಿ ಹೈಕೋರ್ಟ್ ಸೂಚನೆ

ಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ನಾಯಕಿ ಶಶಿಕಲಾ ಪುಷ್ಪಾ
Last Updated 29 ಜುಲೈ 2020, 10:28 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನಾಯಕಿ ಶಶಿಕಲಾ ಪುಷ್ಪಾ ಅವರನ್ನು ಅವಹೇಳನ ಮಾಡುವ ಮಾಹಿತಿ, ಚಿತ್ರಗಳನ್ನು ತೆಗೆದುಹಾಕುವಂತೆ ಗೂಗಲ್‌ ಹಾಗೂ ಫೇಸ್‌ಬುಕ್‌ಗೆ ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರಗಳನ್ನು ಬಳಸಿಕೊಂಡು ತಿರುಚಿ ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ ಅವರು ಕೋರ್ಟ್ ಮೊರೆ ಹೋಗಿದ್ದರು.

ಗೂಗಲ್, ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗೆ ತಲಾ ₹ 2 ಲಕ್ಷ ಪಾವತಿಸುವಂತೆ ಜೂನ್ 2ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ ಹಾಗೂ ತಲವಂತ್ ಸಿಂಗ್ ಅವರ ವಿಭಾಗೀಯ ಪೀಠ ಇದೇ ವೇಳೆ ತಡೆ ನೀಡಿತು.

ಜೂನ್ 2ರ ಆದೇಶವನ್ನು ಪ್ರಶ್ನಿಸಿ ಎಐಎಡಿಎಂಕೆ ಮಾಜಿ ಸದಸ್ಯೆ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿ, ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಸೆ. 3ರಂದು ನಿಗದಿಯಾಗಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ತಾವು ಯಾವುದೇ ಆಕ್ಷೇಪಾರ್ಹ ವಿಡಿಯೊ ಅಥವಾ ಚಿತ್ರಗಳನ್ನು ಅಪ್‌ಲೋಡ್ ಮಾಡುವುದಿಲ್ಲ. ತಾವು ಮಧ್ಯವರ್ತಿಗಳು ಮಾತ್ರ’ ಎಂದು ಫೇಸ್‌ಬುಕ್, ಗೂಗಲ್ ಹಾಗೂ ಯೂಟ್ಯೂಬ್ ವಾದ ಮಂಡಿಸಿದ್ದವು. ಕೋರ್ಟ್ ಆದೇಶದನ್ವಯ ತಮ್ಮ ವೇದಿಕೆಗಳಲ್ಲಿ ಅಪ್‌ಲೋಡ್ ಆಗಿರುವ ಆಕ್ಷೇಪಾರ್ಹ ಚಿತ್ರ, ವಿಡಿಯೊಗಳನ್ನು ತೆಗೆದುಹಾಕಲು ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ವಕೀಲರು ತಿಳಿಸಿದರು. ಯಾವ ಚಿತ್ರಗಳನ್ನು ತೆಗೆಯಬೇಕಿದೆ ಎಂಬ ಪಟ್ಟಿಯನ್ನು ಶಶಿಕಲಾ ಪರ ವಕೀಲರು ಕೋರ್ಟ್‌ಗೆ ಸಲ್ಲಿಸಿದರು.

ಶಶಿಕಲಾ ಅವರನ್ನು 2016ಲ್ಲಿ ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಅವರು ಕಳೆದ ವರ್ಷ ಬಿಜೆಪಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT