ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ | ರಾಮಮಂದಿರದ ಭೂಮಿಪೂಜೆಗೆ ಹೇಗೆ ನಡೆಯುತ್ತಿದೆ ಸಿದ್ಧತೆ?

Last Updated 3 ಆಗಸ್ಟ್ 2020, 16:49 IST
ಅಕ್ಷರ ಗಾತ್ರ

ನವದೆಹಲಿ: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯ ನಡೆಯಲಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೋವಿಡ್ ತಗುಲಿದೆ. ಹೀಗಿದ್ದರೂ ಆಗಸ್ಟ್ 5ರಂದು ನಡೆಯಲಿರುವ'ಭೂಮಿ ಪೂಜೆ' ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಅವರಕಾರ್ಯಕ್ರಮದಲ್ಲಿ ಈವರೆಗೆ ಯಾವುದೇ ಬದಲಾವಣೆ ಆಗಿಲ್ಲ.

ಭೂಮಿಪೂಜೆಯಲ್ಲಿ ಭಾಗಿಯಾಗುವ ಅತಿಥಿಗಳ ಪಟ್ಟಿಯಲ್ಲಿ ಬಿಜೆಪಿ ನಾಯಕರಾದ ಎಲ್.ಕೆ ಅಡ್ವಾಣಿ,ಮುರಳಿ ಮನೋಹರ್ ಜೋಷಿ. ಆರ್‍‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೆಸರಿದೆ. ಕೋವಿಡ್ ಮತ್ತು ಭದ್ರತಾ ವಿಷಯದಿಂದಾಗಿ ಅಡ್ವಾಣಿ ಮತ್ತು ಜೋಷಿ ಅಯೋಧ್ಯೆಗೆ ಭೇಟಿ ನೀಡುತ್ತಿಲ್ಲ. ಇವರಿಬ್ಬರೂ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬಾಬರಿ ಮಸೀದಿ ವಿಷಯದಲ್ಲಿ ದಾವೆ ಹೂಡಿದ್ದ ಹಾಷಿಂ ಅನ್ಸಾರಿ ಅವರ ಪುತ್ರ ಇಕ್ಬಾಲ್ ಅನ್ಸಾರಿ ಅವರನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅನ್ಸಾರಿ ಅವರು ತುಳಸೀದಾಸ್ ರಚಿತ 'ರಾಮಚರಿತ ಮಾನಸ' ಮತ್ತು 'ರಾಮ್‌ನಾಮಿ'ಯನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲಿದ್ದಾರೆ.

ಕೋವಿಡ್ ಪಿಡುಗನ್ನು ನಿಯಂತ್ರಿಸಬೇಕು ಎಂದು ಹೇಳಿರುವ ಬಿಜೆಪಿ ಉಪಾಧ್ಯಕ್ಷೆ ಉಮಾ ಭಾರತಿ ಭೂಮಿ ಪೂಜೆಯಲ್ಲಿ ಭಾಗಿಯಾಗುವುದಿಲ್ಲ.61ರ ಹರೆಯದ ಉಮಾ ಭಾರತಿ ರಾಮ ಜನ್ಮಭೂಮಿ ಹೋರಾಟದಲ್ಲಿ ಸಕ್ರಿಯವಾಗಿದ್ದವರಾಗಿದ್ದು, ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಯಾಗಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.ಮಾರ್ಚ್ 25ರಂದು ಆದಿತ್ಯನಾಥ ಅವರು ರಾಮಲಲ್ಲಾ ಮೂರ್ತಿಯನ್ನು ಮಾನಸ್ ಭವನ್‌ನಲ್ಲಿರುವ ತಾತ್ಕಾಲಿಕ ಗುಡಿಗೆ ಸ್ಥಳಾಂತರಿಸಿದ್ದರು.ರಾಮಮಂದಿರ ನಿರ್ಮಾಣಕ್ಕಾಗಿ ಆದಿತ್ಯನಾಥರು ₹11 ಲಕ್ಷ ದೇಣಿಗೆ ನೀಡಿರುವುದಾಗಿ ಟ್ವೀಟಿಸಿದ್ದರು.

ಐತಿಹಾಸಿಕ ನಿರ್ಧಾರ
ಕಳೆದ ನವೆಂಬರ್ ತಿಂಗಳಿನಲ್ಲಿ ರಾಮಜನ್ಮ ಭೂಮಿ ಮತ್ತು ಬಾಬರಿ ಮಸೀದಿ ಜಮೀನಿನ ಒಡೆತನ ಕುರಿತು ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ವಿವಾದಿತ ಜಮೀನು ರಾಮಲಲ್ಲಾಗೆ ಸೇರಿದ್ದು, ಅಲ್ಲಿ ರಾಮ ಮಂದಿರ ನಿರ್ಮಿಸಲುಒಪ್ಪಿಗೆ ನೀಡಿತ್ತು.ಅದೇ ವೇಳೆ ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಬೋರ್ಡ್‌ಗೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು.

ಅಯೋಧ್ಯೆ ಸಜ್ಜು
ಪ್ರಧಾನಿ ಮೋದಿಯವರನ್ನುಸ್ವಾಗತಿಸಲು ಅಯೋಧ್ಯೆಯ ವಿವಿಧಭಾಗಗಳಲ್ಲಿ ಜನರು ಹಣತೆ ಹಚ್ಚಿದ್ದಾರೆ. ಜಿಲ್ಲೆಯಾದ್ಯಂತ ಆವರಣ ಗೋಡೆಗಳ ಮೇಲೆ ರಾಮಲಲ್ಲಾನ ಚಿತ್ರ ಬಿಡಿಸಿ ಶೃಂಗರಿಸಲಾಗಿದೆ. ರಾಮ್‌ಲಲ್ಲಾನಿಗೆ 9 ಹರಳುಗಳಿರುವ ಚಿನ್ನದ ದಾರದಿಂದ ತಯಾರಿಸಲಾದ ವಿಶೇಷ ಉಡುಗೆ ಸಿದ್ಧಪಡಿಸಲಾಗಿದೆ.ಶಂಕರ್ ಲಾಲ್ ಮತ್ತು ಭಾಗ್ವತ್ ಲಾಲ್ 'ಪಹಾಧಿ' ಅವರು ಈ ವಿಶೇಷ ಉಡುಗೆ ತಯಾರಿಸಿದ್ದಾರೆ. ನನ್ನ ಅಪ್ಪ ದಿವಂಗತ ಬಾಬು ಲಾಲ್ ಅವರು 1985ರಲ್ಲಿಯೇ ರಾಮ್‌ಲಲ್ಲಾಗೆ ಉಡುಗೆ ಹೊಲಿಯಲು ಆರಂಭಿಸಿದ್ದರು ಎಂದು 54ರ ಹರೆಯದ ಶಂಕರ್‌ಲಾಲ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ನಮ್ಮ ಹೊಲಿಗೆ ಯಂತ್ರವನ್ನು ರಾಮಜನ್ಮಭೂಮಿಗೆ ತೆಗೆದುಕೊಂಡು ಹೋಗಿ ನನ್ನ ಅಣ್ಣ ಮತ್ತು ನನ್ನೊಂದಿಗೆ ಉಡುಗೆ ಹೊಲಿಯುತ್ತಿದ್ದರು ಎಂದಿದ್ದಾರೆ ಶಂಕರ್‌ಲಾಲ್.

ಅಯೋಧ್ಯೆಯಲ್ಲಿ ನೆರವೇರಲಿರುವ ಶುಭಕಾರ್ಯಕ್ಕಾಗಿ ವಿಶೇಷವಾದ ಮಣ್ಣಿನ ಹಣತೆಗಳನ್ನು ಸಿದ್ಧಪಡಿಸಲಾಗಿದೆ.1.25 ಲಕ್ಷ ಮಣ್ಣಿನ ಹಣತೆಗಳನ್ನು ಸಿದ್ಧ ಪಡಿಸಲು ನಮಗೆ ಹೇಳಿದ್ದಾರೆ.ಈ ಗ್ರಾಮದಲ್ಲಿ ಸುಮಾರು 40 ಕುಟುಂಬಗಳಿವೆ.ನಾವು ಎಲ್ಲರೂ ಕೆಲಸವನ್ನು ಹಂಚಿಕೊಂಡು ಮಾಡಿದ್ದೇವೆ ಎಂದು ಹಣತೆ ತಯಾರಿಸುವ ಕುಟುಂಬಗಳು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಯಾಗ್‌ರಾಜ್ ಮೂಲದ ಕಂಪನಿಯಾದ ಆಶಾ, ಅಯೋಧ್ಯೆಯಲ್ಲಿ ಉಚಿತವಾಗಿ ಧ್ವನಿವರ್ಧಕಇರಿಸಲಿದೆ. ಈ ಬಗ್ಗೆ ಮಾತನಾಡಿದ ಆಶಾ ಕಂಪನಿಯ ವ್ಯವಸ್ಥಾಪಕ ಪ್ರವೀಣ್ ಮಾಳವಿಯಾ, ಅಯೋಧ್ಯೆ ಮತ್ತು ಫೈಜಾಬಾದ್‌ನಲ್ಲಿ ಸರಿಸುಮಾರು 3,000 ಧ್ವನಿವರ್ಧಕ ಇರಿಸಲಿದ್ದೇನೆ. ಇದು ಉಚಿತ ಸೇವೆ ಎಂದಿದ್ದಾರೆ.

ಅಸ್ಸಾಂ ಮೂಲದ ಶಿಲ್ಪಿ ರಂಜಿತ್ ಮಂಡಲ್ ಅವರು ಶ್ರೀರಾಮನ ಬಾಲ್ಯದಿಂದ ಪಟ್ಟಾಭಿಷೇಕದವರೆಗಿನಜೀವನ ಪಯಣದ ಪ್ರತಿಮೆಗಳನ್ನು ತಯಾರಿಸಲಿದ್ದಾರೆ. ಈ ಪ್ರತಿಮೆಗಳನ್ನು ರಾಮಮಂದಿರದ ಅಂಗಳದಲ್ಲಿರಿಸಲಾಗುವುದು. ನಾನು 2013ರಲ್ಲಿ ಈ ಕೆತ್ತನೆ ಕಾರ್ಯ ಆರಂಭಿಸಿದೆ. ನನ್ನ ಖುಷಿಯನ್ನು ವಿವರಿಸಲು ಅಸಾಧ್ಯ ಎಂದು ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ರಂಜಿತ್ ಹೇಳಿದ್ದಾರೆ.

ಅಯೋಧ್ಯಾ ರೈಲು ನಿಲ್ದಾಣ
ರಾಮಮಂದಿರವನ್ನು ಹೋಲುವ ಅಯೋಧ್ಯಾ ರೈಲು ನಿಲ್ದಾಣದ ಮೊದಲ ಹಂತದ ಕಾಮಗಾರಿ ಮುಂದಿನ ವರ್ಷ ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ. ರಾಮ ಜನ್ಮಭೂಮಿಗೆ ಭೇಟಿ ನೀಡುವ ಜನರಿಗೆ ಇದು ಪ್ರಯೋಜನಕಾರಿಯಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಮೊದಲ ಹಂತದಲ್ಲಿ ಫ್ಲಾಟ್‌ಫಾರಂ 1, 2,3 ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಉತ್ತರ ರೈಲ್ವೆ ಇಲಾಖೆಯ ಪ್ರಧಾನ ವ್ಯವಸ್ಥಾಪಕ ರಾಜೀವ್ ಚೌಧರಿ ಹೇಳಿದ್ದಾರೆ. ರೈಲು ನಿಲ್ದಾಣವು ದೇವಾಲಯದಂತೆ ಗುಮ್ಮಟ, ಶಿಖರ, ಕಂಬಗಳನ್ನು ಹೊಂದಿರಲಿದೆ.1,00,000 ಚದರ ಅಡಿ ಜಾಗದಲ್ಲಿ ಈ ನಿಲ್ದಾಣ ನಿರ್ಮಾಣವಾಗಲಿದೆ.

ಐತಿಹಾಸಿಕ ಕ್ಷಣ
ಈ ದೇವಾಲಯ ನಿರ್ಮಾಣವಾದರೆ ಭಗವಾನ್ ಶ್ರೀರಾಮನ ತಮಗೆ ಸೇರಿದ್ದು ಎಂದು ಬೇರೆ ಯಾವುದೇ ದೇಶದವರು ವಾದಿಸಲಾರರು ಎಂದು ವಿಶ್ವ ಹಿಂದೂ ಪರಿಷತ್‌ನ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ. ನಮ್ಮ ದೇಶದಲ್ಲಿಯೇ ರಾಮರಾಜ್ಯದ ಶಂಕು ಸ್ಥಾಪನೆ ಆಗಲಿದೆ ಎಂದು ರಾಮಜನ್ಮಭೂಮಿ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿರುವ, ಟ್ರಸ್ಟ್‌ನ ದಲಿತ ಸದಸ್ಯರೂ ಆಗಿರುವ ಚೌಪಾಲ್ ಹೇಳಿದ್ದಾರೆ.ರಾಮನ ಜೀವನವು ಸಾಮಾಜಿಕ ಸಾಮರಸ್ಯ ಮತ್ತು ಭ್ರಾತೃತ್ವದ ಮೌಲ್ಯಗಳಿಂದ ಕೂಡಿದೆ. ಈ ದೇವಾಲಯವು ಆ ಮೌಲ್ಯಗಳನ್ನು ಎತ್ತಿ ಹಿಡಿಯಲಿದೆ ಎಂದಿದ್ದಾರೆ ಚೌಪಾಲ್.

ರಾಮನನ್ನು ಪೂಜಿಸುವ ಮುಸ್ಲಿಂ ಭಕ್ತರೂ ಕೂಡಾ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಸಿದ್ಧರಾಗಿದ್ದಾರೆ.ನಾವು ಇಸ್ಲಾಂ ಧರ್ಮದ ಮೂಲಾಧಾರಗಳ ಮೇಲೆ ನಂಬಿಕೆ ಇಟ್ಟಿದ್ದು, ಇಸ್ಲಾಂ ಧರ್ಮವನ್ನು ಅನುಸರಿಸುತ್ತೇವೆ. ಅದೇ ವೇಳೆ ಶ್ರೀರಾಮ ನಮ್ಮ ಪೂರ್ವಜ ಎಂಬುದಾಗಿಯೂ ನಂಬುತ್ತೇವೆ.ನಾವು ರಾಮಮಂದಿರ ನಿರ್ಮಾಣ ಕಾರ್ಯವನ್ನು ನೋಡುತ್ತೇವೆ ಎಂಬುದೇ ದೊಡ್ಡ ಸಂಗತಿ ಎಂದು ಫೈಜಾಬಾದ್ ನಿವಾಸಿ ವಾಸಿ ಹೈದರ್ ಹೇಳಿದ್ದಾರೆ.

ರಾಮಮಂದಿರ ಮತ್ತು ವಿಪಕ್ಷಗಳ ನಿಲುವು
ರಾಮಮಂದಿರದ ಬಗ್ಗೆ ಜವಾಹರ್‌ಲಾಲ್ ನೆಹರು ಅವರು ವಿರೋಧ ವ್ಯಕ್ತ ಪಡಿಸಿದ್ದರು.ಕೇಂದ್ರದಲ್ಲಿ ನರಸಿಂಹ ರಾವ್ ಅಧಿಕಾರದಲ್ಲಿದ್ದಾಗ ಹಿಂದುತ್ವ ಸಂಘಟನೆಯ ನೇತೃತ್ವದಲ್ಲಿ ಕರಸೇವಕರು ಬಾಬರಿ ಮಸೀದಿ ಧ್ವಂಸ ಮಾಡಿದ್ದರ ಬೆನ್ನಲ್ಲೇ 1992ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ನಾಲ್ಕು ರಾಜ್ಯ ಸರ್ಕಾರಗಳನ್ನು ರಾವ್ ವಜಾ ಮಾಡಿದ್ದರು.

ಕಳೆದ ವರ್ಷ 27 ವರ್ಷಗಳ ವಿವಾದಿತ ರಾಮಜನ್ಮಭೂಮಿ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ಕಾಂಗ್ರೆಸ್ ನಾಯಕರು ಕೂಡಾ ಆ ತೀರ್ಪನ್ನು ಸ್ವಾಗತಿಸಿದ್ದರು.ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸುತ್ತೇನೆ. ನಾವು ಪರಸ್ಪರ ಸಾಮರಸ್ಯದಿಂದ ಇರಬೇಕು. ಇದು ಸಂಬಂಧ, ಪ್ರೀತಿ ಮತ್ತು ಭಾರತೀಯರ ನಡುವಿನ ವಿಶ್ವಾಸದ ಗಳಿಗೆ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದರು.

ಶ್ರೀರಾಮ ಪಟ್ಟಾಭಿಷೇಕದ ಫೋಟೊ ಬಳಸಿ ಇದು ಒಗ್ಗಟ್ಟಿನ ಸಂಕೇತ.ರಾಮಮಂದಿರದ ಪ್ರಚಾರಕ್ಕಾಗಿ ಬಿಲ್ಲು ಬಾಣ ಹಿಡಿದಿರುವ ರಾಮನ ಫೋಟೊ ಬಳಸಬೇಡಿ ಅದು ಆಕ್ರೋಶವನ್ನು ತೋರಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಹೇಳಿದ್ದರು.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯ ಸಭಾ ಸದಸ್ಯರೂ ಆಗಿರುವ ದಿಗ್ವಿಜಯ ಸಿಂಗ್ ಅವರು ದ್ವಾರಕಾದ ಶಂಕರಾಚಾರ್ಯ ಅವರ ಮಾತನ್ನು ಉಲ್ಲೇಖಿಸಿ ಭೂಮಿಪೂಜೆಯ ಮುಹೂರ್ತ ಅಶುಭ ಎಂದು ಹೇಳಿದ್ದಾರೆ.

ಭೂಮಿ ಪೂಜೆಯಲ್ಲಿ ಭಾಗಿಯಾಗುವುದು ಪ್ರಧಾನಿಯವರ ಸಾಂವಿಧಾನಿಕ ಪ್ರಮಾಣವಚನದ ಉಲ್ಲಂಘನೆ ಎಂದು ಎಐಎಂಎಂ ಮುಖ್ಯಸ್ಥ ಮತ್ತು ಲೋಕಸಭಾ ಸದಸ್ಯ ಅಸಾದುದ್ದೀನ್ ಒವೈಸಿ ಟ್ವೀಟಿಸಿದ್ದಾರೆ. ಜಾತ್ಯತೀತ ಎಂಬುದು ಸಂವಿಧಾನದ ಮೂಲ ಸ್ವರೂಪದ ಭಾಗವಾಗಿದೆ. 400ವರ್ಷಗಳಿಂತಲೂ ಹೆಚ್ಚು ಕಾಲ ಬಾಬರಿ ಅಯೋಧ್ಯೆಯಲ್ಲಿ ಉಳಿದಿತ್ತು ಮತ್ತು 1992ರಲ್ಲಿ ಕಿಡಿಗೇಡಿಗಳು ಅದನ್ನು ಧ್ವಂಸ ಮಾಡಿದರು ಎಂಬುದನ್ನು ನಾವು ಮರೆಯಬಾರದುಎಂದು ಒವೈಸಿ ಹೇಳಿದ್ದಾರೆ.

ಏತನ್ಮಧ್ಯೆ, ರಾಮಮಂದಿರದ ಶಂಕುಸ್ಥಾಪನೆಯ ಮುನ್ನ ಅಂದರೆ ಮಂಗಳವಾರ ತಾವು ಮನೆಯಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹೇಳಿದ್ದಾರೆ.

ಶಿವಸೇನಾ ಏನು ಹೇಳುತ್ತದೆ?
ರಾಮಮಂದಿರದ ಶಿಲಾನ್ಯಾಸ ಕಾರ್ಯವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಬೇಕಿತ್ತು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಭಿಪ್ರಾಯ ಪಟ್ಟಿದ್ದಾರೆ.ನಾನು ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಯೋಧ್ಯೆಗೆ ಹೋಗಬಹುದಿತ್ತು ಆದರೆ ಲಕ್ಷದಷ್ಟು ರಾಮಭಕ್ತರು ಅಲ್ಲಿಗೆ ಹೋಗುವುದನ್ನು ತಡೆಯಲಾದೀತೇ ಎಂದು ಅವರು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕಾಗಿ ಶಿವಸೇನಾ ₹1 ಕೋಟಿ ದೇಣಿಗೆ ನೀಡಿದೆ. ಉದ್ಧವ್ ಠಾಕ್ರೆ ಭೂಮಿಪೂಜೆಗೆ ಖಂಡಿತವಾಗಿಯೂ ಹಾಜರಾಗುತ್ತಾರೆ ಎಂದು ಜುಲೈ 21ರಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದರು.

ದೇಣಿಗೆ ಮತ್ತು ಉಡುಗೊರೆ
ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭೂಮಿ ಪೂಜೆಗೆ ಸಿದ್ಧತೆ ನಡೆಸಿತ್ತು. ಟ್ರಸ್ಟ್‌ನ ಸದಸ್ಯರ ಪ್ರಕಾರ ಎಲ್ಲ ಸಮುದಾಯದವರಿಂದಲೂ ದೇಣಿಗೆ ಸ್ವೀಕರಿಸಲಾಗಿದೆ.

ಟ್ರಸ್ಟ್ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಯೊಬ್ಬರಿಂದ ತಲಾ ₹10 ಮತ್ತು ಕುಟುಂಬವೊಂದರಿಂದ ₹100 ದೇಣಿಗೆ ಸಂಗ್ರಹಿಸಬೇಕು ಎಂದು ಸಲಹೆ ನೀಡಿದ್ದರು.ಇದೊಂದು ಸಲಹೆ ಮಾತ್ರ, ಇದು ತೆರಿಗೆ ರೀತಿಯಂತೆ ಅಲ್ಲ. ಮಂದಿರದ ನಿರ್ಮಾಣಕ್ಕೆ ಜನರ ಸಹಕಾರ ಇದು ಎಂದು ಪಿಟಿಐ ಜತೆ ಮಾತನಾಡಿದ ಸ್ವಾಮೀಜಿ ಹೇಳಿದ್ದಾರೆ.

ಎಲ್ಲೆಲ್ಲೂ ಶ್ರೀರಾಮ
ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿನ ಮಣ್ಣು ಮತ್ತು ವಿವಿಧ ನದಿಗಳ ನೀರನ್ನು ರಾಮ ಮಂದಿರ ನಿರ್ಮಾಣಕ್ಕೆ ಕಳುಹಿಸಿಕೊಡಲಾಗುವುದು ಎಂದು ವಿಹಿಂಪ ಕರ್ನಾಟಕ ಘಟಕ ಹೇಳಿದೆ. ಶಿಲಾನ್ಯಾಸ ಕಾರ್ಯಕ್ರಮವನ್ನು ವೀಕ್ಷಿಸುವುದಕ್ಕಾಗಿ ದೆಹಲಿಯ ಬಿಜೆಪಿ ಘಟಕ ನಗರದಾದ್ಯಂತ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT