ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಮಕ್ಕಳ ಶಿಕ್ಷಣ: ರಾಜ್ಯಗಳಿಗೆ ಮಾರ್ಗಸೂಚಿ

Last Updated 14 ಜುಲೈ 2020, 9:54 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ ಹಾಗೂ ಇತರ ಕಾರಣಗಳಿಂದ ಊರಿಗೆ ಮರಳಿರುವ ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ದತ್ತಾಂಶವನ್ನು ತಯಾರಿಸುವಂತೆ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಸಂಬಂಧ ಸಚಿವಾಲಯವು ರಾಜ್ಯಗಳಿಗೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.

ಮಕ್ಕಳ ಪಾಲಕರನ್ನು ಮುಖತಃ ಭೇಟಿಯಾಗಿ, ಅಥವಾ ನೆರೆಹೊರೆಯವರ ಮೂಲಕವಾಗಲಿ, ವಾಟ್ಸ್‌ ಆ್ಯಪ್‌ ಅಥವಾ ದೂರವಾಣಿ ಕರೆ ಮೂಲಕವಾಗಲಿ ಸಂಪರ್ಕಿಸಿ, ಪ್ರತಿ ಶಾಲೆಯೂ ಇಂಥ ದತ್ತಾಂಶವನ್ನು ಸಿದ್ಧಪಡಿಸಬೇಕು. ವಲಸೆ ಹೋಗಿರುವ ಮಕ್ಕಳು ಸದ್ಯ ಎಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾದರೆ, ಅದನ್ನೂ ನಮೂದಿಸಬೇಕು. ಪಾಲಕರ ಜತೆಗೆ ಊರಿಗೆ ಹೋಗಿರುವ ಮಕ್ಕಳನ್ನು ‘ವಲಸೆ ಹೋಗಿದ್ದಾರೆ’ ಅಥವಾ ‘ಸದ್ಯಕ್ಕೆ ಅಲಭ್ಯರು’ ಎಂದು ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಸೂಚಿಸಲಾಗಿದೆ.

ಇಂಥ ಮಕ್ಕಳು ಮರಳಿ ಬರುವ ಸಾಧ್ಯತೆ ಇರುವುದರಿಂದ ಹಾಜರಿ ಪುಸ್ತಕದಿಂದ ಅವರ ಹೆಸರು ತೆಗೆದುಹಾಕಬಾರದು. ಇತ್ತೀಚೆಗೆ ಗ್ರಾಮಕ್ಕೆ ಬಂದಿರುವ ಮಕ್ಕಳ ಬಳಿ ಯಾವುದೇ ದಾಖಲೆಗಳಿಲ್ಲದಿದ್ದರೂ, ಗುರುತು ಪತ್ರವೊಂದಿದ್ದರೆ ಅವರಿಗೆ ಶಾಲೆಗೆ ಪ್ರವೇಶ ನೀಡಬೇಕು ಎಂದು ಸರ್ಕಾರಗಳು ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಬಹುದು ಎಂದು ಸೂಚಿಸಲಾಗಿದೆ

ಟಿ.ಸಿ.ಯನ್ನಾಗಲಿ, ಹಿಂದೆ ಯಾವ ತರಗತಿಯಲ್ಲಿ ಕಲಿಯುತ್ತಿದ್ದೆ ಎಂಬುದಕ್ಕೆ ದಾಖಲೆಗಳನ್ನಾಗಲಿ ಕೇಳಬಾರದು. ಮಕ್ಕಳ ಪಾಲಕರು ನೀಡುವ ಮಾಹಿತಿಯನ್ನೇ ದಾಖಲೆ ಎಂದು ಪರಿಗಣಿಸಿ ಶಾಲೆಗೆ ಪ್ರವೇಶ ನೀಡಬೇಕು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಾರ್ಚ್‌ 24ರಂದು ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದರಿಂದ ಲಕ್ಷಾಂತರ ಕಾರ್ಮಿಕರು ಕುಟುಂಬ ಸಹಿತರಾಗಿ ತಮ್ಮ ಊರುಗಳಿಗೆ ಮರಳಿದ್ದರು. ಕೊರೊನಾ ತೀವ್ರತೆ ಇನ್ನೂ ಇರುವುದರಿಂದ ಅಂಥವರಲ್ಲಿ ಹೆಚ್ಚಿನವರು ಮರಳಿ ನಗರಗಳಿಗೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT