ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌‌ ಪಕ್ಷದ ಹೆಮ್ಮೆ: ಸೋನಿಯಾ ಗಾಂಧಿ

Last Updated 24 ಜುಲೈ 2020, 14:45 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರನ್ನು ಹೊಗಳಿದ್ದಾರೆ. ರಾವ್‌ ಅವರ ‘ದಿಟ್ಟ ನಾಯಕತ್ವ’ದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ದೇಶ ಪಾರಾಯಿತು. ವಿವಿಧ ಸವಾಲುಗಳನ್ನು ಮೆಟ್ಟಿ ನಿಂತಿತು ಎಂದು ಕೊಂಡಾಡಿದ್ದಾರೆ.

ಉದಾರೀಕರಣಕ್ಕೆ ಕಾರಣವಾದ 1991ರ ಬಜೆಟ್‌ ಮಂಡನೆ ನೆನಪಿಗಾಗಿ ತೆಲಂಗಾಣ ಕಾಂಗ್ರೆಸ್‌ ಶುಕ್ರವಾರ ಕಾರ್ಯಕ್ರಮವನ್ನು ಆಯೋಜಿಸಿತ್ತು.ಸೋನಿಯಾ ಅವರು ಬರೆದ ಪತ್ರವನ್ನು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಉತ್ತಮ್‌ ಕುಮಾರ್‌ ರೆಡ್ಡಿ ಓದಿದರು.

‘ರಾವ್‌ ಅವರು ಭಾರತ ಕಂಡ ವಿದ್ವತ್‌ಪೂರ್ಣ ಮತ್ತು ಪ್ರಬುದ್ಧ ವ್ಯಕ್ತಿತ್ವವಾಗಿದ್ದು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಗೌರವ ಹೊಂದಿದ್ದರು. ಜುಲೈ 24, 1991ರ ಬಜೆಟ್‌ ಭಾರತದ ಆರ್ಥಿಕ ರೂಪಾಂತರಕ್ಕೆ ಕಾರಣವಾಯಿತು’ ಎಂದು ಸೋನಿಯಾ ಹೇಳಿದ್ದಾರೆ.

‘ರಾವ್‌ ಅವರ ಅವಧಿಯಲ್ಲಿ ರಾಜಕೀಯ, ಸಾಮಾಜಿಕ ಮತ್ತು ವಿದೇಶಾಂಗ ನೀತಿಗಳು ದೇಶದ ಅಭಿವೃದ್ಧಿಗೆ ಕಾರಣವಾದವು. ಕಾಂಗ್ರೆಸ್,‌ ರಾವ್‌ ಅವರ ಸಾಧನೆಯನ್ನು ಸದಾ ಸ್ಮರಿಸುತ್ತದೆ’ ಎಂದು ಹೇಳಿದ್ದಾರೆ.

ಇದರ ಜೊತೆಯೇ ಕಾಂಗ್ರೆಸ್‌ ನಾಯಕರು ರಾವ್‌ ಅವರನ್ನು ‘ಪಕ್ಷದ ಹೆಮ್ಮೆ’ ಎಂದು ಕರೆದಿದ್ದಾರೆ.ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ‘ರಾವ್‌ ದೇಶದ ಶ್ರೇಷ್ಠ ಪುತ್ರ. ಭಾರತದ ಆರ್ಥಿಕ ಸುಧಾರಣೆಯ ಪಿತಾಮಹ’ ಎಂದು ಹೇಳಿದ್ದಾರೆ.ರಾಹುಲ್‌ ಗಾಂಧಿ ಕೂಡ ‘ಆಧುನಿಕ ಭಾರತವನ್ನು ರೂಪಿಸಲು ದಾರಿ ತೋರಿದವರು’ ಎಂದು ರಾವ್‌ ಅವರನ್ನು ಸ್ಮರಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ‘ರಾವ್ ಅವರು ಚೀನಾ ಸೇರಿದಂತೆ ವಿವಿಧ ದೇಶಗಳ ನಡುವೆ ಶಾಂತಿಯುತ ಸಹಕಾರ ಸಂಬಂಧಗಳನ್ನು ಸ್ಥಾಪಿಸುವಲ್ಲಿ ಶ್ರಮಿಸಿದ್ದರು’ ಎಂದು ಹೇಳಿದ್ದಾರೆ.

1992ರ ಬಾಬರಿ ಮಸೀದಿ ಧ್ವಂಸ ಪ್ರಕರಣ ಮತ್ತು 1996ರ ಲೋಕಸಭಾ ಚುನಾವಣೆ ಸೋಲಿಗೆ ರಾವ್ ಕಾರಣ ಎಂದು ಕಾಂಗ್ರೆಸ್ ಅವರನ್ನು‌ ದೂರವಿಟ್ಟಿತ್ತು. ಅಲ್ಲದೆ, ರಾವ್‌ ಅವರು 2004ರಲ್ಲಿ ನಿಧನ ಹೊಂದಿದಾಗ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ.ಕಾಂಗ್ರೆಸ್‌ನ ಕುಟುಂಬ ರಾಜಕಾರಣಕ್ಕೆ ರಾವ್ ಅವರು ಬಲಿಯಾಗಿದ್ದರು ಎಂದು ಪ್ರಧಾನಿ ಮೋದಿ ಕೂಡ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT