ಸೋಮವಾರ, ಸೆಪ್ಟೆಂಬರ್ 28, 2020
25 °C
ಇಮ್ರಾನ್‌ ಖಾನ್‌–ಶೇಖ್‌ ಹಸೀನಾ ದೂರವಾಣಿ ಸಂಭಾಷಣೆಯನ್ನು ಗಂಭೀರವಾಗಿ ಪರಿಗಣಿಸಿದ ಭಾರತ

ಪಾಕಿಸ್ತಾನ–ಬಾಂಗ್ಲಾ ನಡುವೆ ಮಧ್ಯವರ್ತಿಯಾಗಲು ಚೀನಾ ಪ್ರಯತ್ನ: ಕೇಂದ್ರದ ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಾರದ ಆರಂಭದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಧಾನಿಗಳಿಬ್ಬರು ನಡೆಸಿದ ಅಪರೂಪದ ದೂರವಾಣಿ ಸಂಭಾಷಣೆಯು ನವದೆಹಲಿಯಲ್ಲಿ ಇರುಸುಮುರುಸು ಉಂಟುಮಾಡಿದೆ. ಭಾರತದ ನೆರೆರಾಷ್ಟ್ರಗಳ ಮೇಲೆ ಹಿಡಿತಸಾಧಿಸುವ ಚೀನಾದ ಮತ್ತೊಂದು ಪ್ರಯತ್ನ ಇದಾಗಿದೆ ಎಂದೇ ಈ ದೂರವಾಣಿ ಸಂಭಾಷಣೆಯನ್ನು ಕಾಣಲಾಗುತ್ತಿದೆ. 

ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ನಡುವಿನ ಐದು ದಶಕಗಳ ವೈಷಮ್ಯಕ್ಕೆ ಕೊನೆಹಾಡಲು, ಮಿತ್ರರಾಷ್ಟ್ರವಾದ ಪಾಕಿಸ್ತಾನ ಹಾಗೂ ಢಾಕಾ ನಡುವೆ ಮಧ್ಯವರ್ತಿಯಾಗಲು ಬೀಜಿಂಗ್ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸರ್ಕಾರ ಸಂಶಯವ್ಯಕ್ತಪಡಿಸಿದೆ. ಜುಲೈ 22ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌, ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರಿಗೆ ದೂರವಾಣಿ ಕರೆ ಮಾಡಿದ್ದರು. ದೇಶದಲ್ಲಿ ಕೋವಿಡ್‌–19 ಸ್ಥಿತಿಗತಿ ಹಾಗೂ ನೆರೆ ಸಮಸ್ಯೆಯ ಕುರಿತು ಇಮ್ರಾನ್‌ ಖಾನ್‌ ಅವರಿಗೆ ಹಸೀನಾ ಅವರು ಮಾಹಿತಿ ನೀಡಿದರು ಎಂದು ಬಾಂಗ್ಲಾದೇಶ ಸರ್ಕಾರದ ವಕ್ತಾರರೊಬ್ಬರು ತಿಳಿಸಿದ್ದರು. ‘ಜಮ್ಮು ಮತ್ತು ಕಾಶ್ಮೀರ ವಿವಾದದ ಬಗ್ಗೆ ಶಾಂತಿಯುತ ಪರಿಹಾರದ ಅಗತ್ಯತೆ ಹಾಗೂ ಪ್ರಾಮುಖ್ಯತೆಯ ಕುರಿತು ಇಮ್ರಾನ್‌ ಖಾನ್‌ ಚರ್ಚಿಸಿದರು’ ಎಂದು ಖಾನ್ ಅವರ ಕಚೇರಿಯು ತಿಳಿಸಿತ್ತು.

ಆದರೆ ದೂರವಾಣಿ ಸಂಭಾಷಣೆ ಬಳಿಕ ಬಾಂಗ್ಲಾದೇಶದ ಪ್ರಧಾನಿಯವರ ಕಚೇರಿ ಬಿಡುಗಡೆಗೊಳಿಸಿದ್ದ ಪ್ರಕಟಣೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ವಿಷಯದ ಕುರಿತು ಚರ್ಚೆ ನಡೆದ ಯಾವುದೇ ಮಾಹಿತಿ ಇರಲಿಲ್ಲ. ಇದಾದ ಮರುದಿನವೇ ಭಾರತದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು, ‘ಜಮ್ಮು ಮತ್ತು ಕಾಶ್ಮೀರ ವಿಚಾರವು ಭಾರತದ ಆಂತರಿಕ ವಿಷಯ’ ಎನ್ನುವ ನಿಲುವನ್ನು ಬಾಂಗ್ಲಾದೇಶವು ಪ್ರಕಟಿಸಿರುವುದನ್ನು ಶ್ಲಾಘಿಸಿದ್ದರು. 

ಹೀಗಿದ್ದರೂ, ಇಬ್ಬರು ಪ್ರಧಾನಿಗಳ ನಡುವಿನ ದೂರವಾಣಿ ಸಂಭಾಷಣೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ದಬ್ಬಾಳಿಕಯ ಆಡಳಿತದಿಂದ ಪೂರ್ವ ಪಾಕಿಸ್ತಾನದ ವಿಮೋಚನೆಗೆ ಹಸೀನಾ ಅವರ ತಂದೆ ಮುಜೀಬುರ್‌ ರಹಮಾನ್‌ ನೇತೃತ್ವ ವಹಿಸಿದ್ದರು. ಈ ಹೋರಾಟದಿಂದ ಬಾಂಗ್ಲಾದೇಶ ಹುಟ್ಟಿಕೊಂಡಿತ್ತು. ಹೀಗಾಗಿ ಖಾನ್‌ ಅವರೊಂದಿಗೆ ಮಾತನಾಡಲು ಹಸೀನಾ ಒಪ್ಪಿದ್ದನ್ನೇ ನವದೆಹಲಿ ಸೂಕ್ಷ್ಮವಾಗಿ ಗಮನಿಸಿದೆ. 

‘ಚೀನಾದ ಒತ್ತಡವಿಲ್ಲದೇ ಬಾಂಗ್ಲಾದೇಶ ಈ ದೂರವಾಣಿ ಕರೆಗೆ ಒಪ್ಪಿರಲಾರದು’ ಎಂದು ಮೂಲಗಳು ತಿಳಿಸಿವೆ. ‘ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮಿನ್‌ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಇಮ್ರಾನ್‌ ಅಹಮದ್‌ ಸಿದ್ದಿಖಿ ಅವರ ಸಭೆ ನಡೆದ ಮೂರು ವಾರಗಳ ನಂತರ ಪ್ರಧಾನಿಗಳಿಬ್ಬರ ನಡುವೆ ದೂರವಾಣಿ ಸಂಭಾಷಣೆ ನಡೆದಿದೆ. ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವೃದ್ಧಿಪಡಿಸಲು ಒಪ್ಪಂದವಾಗಿದೆ ಎಂದು ಪಾಕಿಸ್ತಾನ ಅಂದು ತಿಳಿಸಿತ್ತು. ಆದರೆ, 1971ರ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರು ನಡೆಸಿದ ಕ್ರೂರತೆಗೆ ಪಾಕಿಸ್ತಾನವು ಬಾಂಗ್ಲಾದೇಶಿಯರ ಕ್ಷಮೆ ಕೋರಬೇಕು ಎಂದು ಮೊಮಿನ್‌ ಹೇಳಿದ್ದರು. 

ಈಗಾಗಲೇ ಚೀನಾ, ಭಾರತದ ನೆರೆ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ ಮೇಲೆ ತನ್ನ ಹಿಡಿತ ಸಾಧಿಸಿದ್ದು, ಇದೀಗ ಬಾಂಗ್ಲಾದೇಶದತ್ತ ಚಿತ್ತ ಹರಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು