ಗುರುವಾರ , ಜನವರಿ 21, 2021
16 °C

ಚೀನಾ ಗಡಿಯಲ್ಲಿ ನಿಖರ ಕಣ್ಗಾವಲು: ಡಿಆರ್‌ಡಿಒದಿಂದ ಸೇನೆಗೆ ‘ಭಾರತ್’ ಡ್ರೋನ್

ಏಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಖ್‌ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ ಬಳಿ ಇರುವ ಅತ್ಯಂತ ಎತ್ತರದ ಹಾಗೂ ಪರ್ವತ ಪ್ರದೇಶಗಳಲ್ಲಿ ಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಡುವ ಸಲುವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಭಾರತೀಯ ಸೇನೆಗೆ ‘ಭಾರತ್’ ಹೆಸರಿನ ಡ್ರೋನ್‌ಗಳನ್ನು ಹಸ್ತಾಂತರಿಸಿದೆ.

‘ಪೂರ್ವ ಲಡಾಖ್‌ ಪ್ರದೇಶದಲ್ಲಿನ ವಿವಾದಕ್ಕೆ ಸಂಬಂಧಿಸಿದಂತೆ ನಿಖರವಾದ ಕಣ್ಗಾವಲು ನಡೆಸಲು ಭಾರತೀಯ ಸೇನೆಗೆ ಡ್ರೋನ್‌ಗಳ ಅಗತ್ಯವಿದೆ. ಅದಕ್ಕಾಗಿ ಡಿಆರ್‌ಡಿಒ ‘ಭಾರತ್‌’ ಡ್ರೋನ್‌ಗಳನ್ನು ಒದಗಿಸಿದೆ’ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

‘ಭಾರತ್ ಸರಣಿಯ‌ ಡ್ರೋನ್‌ಗಳನ್ನು ವಿಶ್ವದ ಅತ್ಯಂತ ಚುರುಕುಬುದ್ಧಿಯ ಮತ್ತು ಹಗುರ ಕಣ್ಗಾವಲು ಡ್ರೋನ್‌ಗಳ ಪಟ್ಟಿಗೆ ಸೇರಿಸಬಹುದಾಗಿದೆ. ಇದನ್ನು ಡಿಆರ್‌ಡಿಒ ಸ್ಥಳೀಯವಾಗಿ (ಚಂಡೀಗಢದಲ್ಲಿರುವ ಕೇಂದ್ರದಲ್ಲಿ) ಅಭಿವೃದ್ಧಿಪಡಿಸಿವೆ’ ಎಂದು ಮೂಲಗಳು ತಿಳಿಸಿವೆ.

ಮುಂದುವರಿದು, ‘ಸಣ್ಣ ಹಾಗೂ ಶಕ್ತಿಯುತವಾದ ಈ ಡ್ರೋನ್‌ ಯಾವುದೇ ಸ್ಥಳದಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸಬಲ್ಲದು. ಮಿತ್ರರು ಹಾಗೂ ವೈರಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲಾಗಿದೆ. ಅದಕ್ಕನುಗುಣವಾಗಿ ಕಾರ್ಯಾಚರಿಸುತ್ತದೆ’ ಎಂದೂ ಹೇಳಿವೆ.

ಅತ್ಯಂತ ಶೀತ ವಾತಾವರಣದಲ್ಲಿಯೂ ಯಾವುದೇ ಹಾನಿಯಾಗದಂತೆ ಇವುಗಳ ವಿನ್ಯಾಸ ಮಾಡಲಾಗಿದೆ. ಅದೇರೀತಿ ಕಠಿಣ ಸನ್ನಿವೇಶಗಳಿಗೆ ಹೊಂದಿಕೆಯಾಗುವಂತೆ ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ನೈಜ ಸಮಯದ ವಿಡಿಯೊ ಚಿತ್ರೀಕರಿಸಿ ಒದಗಿಸುತ್ತದೆ. ರಾತ್ರಿವೇಳೆಯೂ ಕಾರ್ಯಾಚರಿಸುವ ಸಾಮರ್ಥ್ಯವಿದ್ದು, ದಟ್ಟ ಕಾಡುಗಳಲ್ಲಿ ಅಡಗಿರುವವರನ್ನೂ ಪತ್ತೆ ಮಾಡಬಲ್ಲದು ಎನ್ನಲಾಗಿದೆ.

ಇವು ಕಾರ್ಯಾಚರಿಸುತ್ತಿರುವುದನ್ನು ರಾಡರ್‌ ಮೂಲಕವೂ ಕಂಡುಹಿಡಿಯಲು ಸಾಧ್ಯವಾಗದಂತೆ ಅಭಿವೃದ್ಧಿಪಡಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು